ಮೋಸ ಮಾಡಿದ ಬಾಯ್‌ಫ್ರೆಂಡ್; ಕೇಕ್ ಸುಟ್ಟ ಯುವತಿ
ವೈರಲ್: ಪ್ರೀತಿಯಲ್ಲಿ ಮೋಸ ಹೋದರೆ ಸಾಮಾನ್ಯವಾಗಿ ಜನರು ರೂಮಿನಲ್ಲಿ ಕೂತು ಅಳುತ್ತಾರೆ, ದೇವದಾಸನಂತೆ ಗಡ್ಡ ಬಿಡುತ್ತಾರೆ ಅಥವಾ ಹಾರ್ಟ್ ಬ್ರೇಕಿಂಗ್ ಹಾಡುಗಳನ್ನು ಕೇಳುತ್ತಾ ಗೆಳೆಯರ ಮುಂದೆ ನೋವು ತೋಡಿಕೊಳ್ಳುತ್ತಾರೆ.
ಆದರೆ ಇಲ್ಲೊಬ್ಬಳು ಹುಡುಗಿ ತನಗೆ ಬಾಯ್‌ಫ್ರೆಂಡ್ ಮಾಡಿದ ದ್ರೋಹಕ್ಕೆ ಸಖತ್ ಡಿಫರೆಂಟ್ ಆಗಿ ರಿವೆಂಜ್ ತೆಗೆದುಕೊಂಡಿದ್ದಾಳೆ. ತನ್ನ ಬರ್ತ್‌ಡೇಗೆ ಅಂತಾನೇ ಮಾಡಿಸಿದ್ದ ದುಬಾರಿ ಕೇಕ್ ಮೇಲೆ ತನ್ನ ಕೋಪವನ್ನು ಹೊರಹಾಕಿದ್ದು, ಈಗ ಈ ವಿಡಿಯೋ ವೈರಲ್ (Viral Video) ಆಗುತ್ತಿದೆ.
ಆಗಿದ್ದೇನು? 57 ಸಾವಿರದ ಕೇಕ್‌ಗೆ ಬೆಂಕಿ ಬಿದ್ದ ಕಥೆ!
ಈ ಘಟನೆ ನಡೆದಿರೋದು ಅಮೆರಿಕದ ಲೂಸಿಯಾನದಲ್ಲಿ. ಅಲ್ಲಿನ ಯುವತಿಯೊಬ್ಬಳು ತನ್ನ ಹುಟ್ಟುಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಿಕೊಳ್ಳಲು ಪ್ಲಾನ್ ಮಾಡಿದ್ದಳು. ಬರೋಬ್ಬರಿ 75 ಜನ ಅತಿಥಿಗಳಿಗೆ ಸಾಕಾಗುವಂತಹ ಒಂದು ಸುಂದರವಾದ, ಮಲ್ಟಿ ಲೇಯರ್ ಕೇಕ್ ಅನ್ನು ಆರ್ಡರ್ ಮಾಡಿದ್ದಳು. ಆ ಕೇಕ್ ಬೆಲೆ ಬರೋಬ್ಬರಿ 600 ಡಾಲರ್! ಅಂದರೆ ನಮ್ಮ ಭಾರತದ ರೂಪಾಯಿಯಲ್ಲಿ ಸುಮಾರು 57,000 ರೂಪಾಯಿಗಳು.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ರಾತ್ರಿ ದೊಡ್ಡ ಪಾರ್ಟಿ ನಡೆಯಬೇಕಿತ್ತು. ಆದರೆ ಟ್ವಿಸ್ಟ್ ಸಿಕ್ಕಿದ್ದೇ ಅಲ್ಲಿ. ಪಾರ್ಟಿ ಆರಂಭವಾಗಲು ಇನ್ನು ಕೆಲವೇ ಗಂಟೆಗಳಿದೆ ಎನ್ನುವಾಗ ಆಕೆಗೆ ತನ್ನ ಬಾಯ್‌ಫ್ರೆಂಡ್ ತನಗೆ ದ್ರೋಹ ಮಾಡುತ್ತಿರುವ (Cheating) ವಿಷಯ ಗೊತ್ತಾಗಿದೆ. ಅಷ್ಟೇ, ಆಕೆಗೆ ಎಲ್ಲಿಲ್ಲದ ಕೋಪ, ನೋವು ಒಟ್ಟಿಗೆ ಬಂದಿದೆ. ತಕ್ಷಣವೇ ಬರ್ತ್‌ಡೇ ಪಾರ್ಟಿಯನ್ನು ರದ್ದು ಮಾಡಿದ ಆಕೆ, ಬೇಕರಿಗೆ ಫೋನ್ ಮಾಡಿ ನನಗೆ ಆ ಕೇಕ್ ಬೇಡ, ಅದನ್ನು ನನ್ನ ಕಣ್ಣೆದುರೇ ಸುಟ್ಟು ಬೂದಿ ಮಾಡಿಬಿಡಿ ಎಂದು ಆರ್ಡರ್ ಮಾಡಿದ್ದಾಳೆ.
ಕ್ಷಣಾರ್ಧದಲ್ಲಿ ಬೂದಿಯಾಯ್ತು ಬ್ಯೂಟಿಫುಲ್ ಕೇಕ್!
ಗ್ರಾಹಕಿಯ ಆಸೆಯಂತೆ ಆ ಬೇಕರಿ ಮಾಲೀಕರು ಕೇಕ್ ಅನ್ನು ತಂದು ಬೇಕರಿಯ ಮುಂದೆ ಇಟ್ಟಿದ್ದಾರೆ. ಅದಕ್ಕೆ ಬೆಂಕಿ ಹಚ್ಚುತ್ತಿದ್ದಂತೆ, ಸುಂದರವಾದ ಕ್ರೀಮ್ ಮತ್ತು ಡಿಸೈನ್‌ಗಳಿಂದ ಕಂಗೊಳಿಸುತ್ತಿದ್ದ ಆ ದುಬಾರಿ ಕೇಕ್ ಸೆಕೆಂಡುಗಳಲ್ಲಿ ಹೊತ್ತಿ ಉರಿಯಲು ಆರಂಭಿಸಿದೆ. ನೋಡನೋಡುತ್ತಿದ್ದಂತೆ ಇಡೀ ಕೇಕ್ ಜ್ವಾಲೆಯಲ್ಲಿ ಆವೃತ್ತವಾಗಿ ಕರಗಿ ಕಪ್ಪಗಾಗಿದೆ. ಸಾಮಾನ್ಯವಾಗಿ ಜನರು ಖುಷಿಯಿಂದ ಕೇಕ್ ಕತ್ತರಿಸುವುದನ್ನು ನಾವು ನೋಡುತ್ತೇವೆ, ಆದರೆ ಇಲ್ಲಿ ಇಡೀ ಕೇಕ್ ಸುಟ್ಟು ಬೂದಿಯಾಗುತ್ತಿರುವುದನ್ನು ಕಂಡು ಬೇಕರಿ ಸಿಬ್ಬಂದಿಯೇ ಶಾಕ್ ಆಗಿದ್ದಾರೆ. ಅವರು ಈ ಇಡೀ ಘಟನೆಯನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇಂಟರ್ನೆಟ್‌ನಲ್ಲಿ ನೆಟ್ಟಿಗರ ಕಾಮೆಂಟ್!
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದ್ದೇ ತಡ, ಲೈಕ್ಸ್ ಮತ್ತು ಕಾಮೆಂಟ್‌ಗಳ ಸುನಾಮಿಯೇ ಹರಿದುಬಂದಿದೆ. ಯುವತಿಯ ಈ ವಿಚಿತ್ರ ನಿರ್ಧಾರಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಕೆಲವರು ಇದೊಂದು ಸಾಂಕೇತಿಕ ಸೇಡು (Symbolic Revenge) ಎಂದು ಕರೆದಿದ್ದಾರೆ. ಮುರಿದುಬಿದ್ದ ಸಂಬಂಧದ ನೋವನ್ನು ಹೊರಹಾಕಲು ಇದಕ್ಕಿಂತ ನಾಟಕೀಯ ಹಾದಿ ಬೇರೊಂದಿಲ್ಲ ಅಂದಿದ್ದಾರೆ.
ಕಾಮೆಂಟ್ ಸೆಕ್ಷನ್‌ನಲ್ಲಿ ಅಂತೂ ಜನರು ತರಹೇವಾರಿ ತಮಾಷೆ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ, ಅಯ್ಯೋ.. ಕೇಕ್ ಬದಲಿಗೆ ಆ ಮೋಸಗಾರ ಬಾಯ್‌ಫ್ರೆಂಡ್‌ನನ್ನೇ ಅಲ್ಲಿ ನಿಲ್ಲಿಸಿ ಸುಡಬೇಕಿತ್ತು! ಎಂದು ಬರೆದಿದ್ದಾನೆ. ಇನ್ನೊಬ್ಬರು, ಇದು ತುಂಬಾ ದಿಟ್ಟ ನಡೆ, ಹುಡುಗಿ ತನ್ನ ಸ್ವಾಭಿಮಾನವನ್ನು ಉಳಿಸಿಕೊಂಡಿದ್ದಾಳೆ ಎಂದು ಹೊಗಳಿದ್ದಾರೆ. ಆದರೆ, ಇನ್ನು ಕೆಲವರು ಅಷ್ಟೊಂದು ದುಬಾರಿ ಕೇಕ್ ಅನ್ನು ಸುಡುವ ಬದಲು ಬಡವರಿಗೆ ಹಂಚಬಹುದಿತ್ತು, ದುಡ್ಡು ವೇಸ್ಟ್ ಆಯ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ, (ಏಜನ್ಸೀಸ್).