ಕ್ರೀಡೆ

ಡಿಕಾಕ್ 3ನೇ ಶತಕ, ಹರಿಣಗಳ ಆರ್ಭಟಕ್ಕೆ ಶರಣಾದ ಬಾಂಗ್ಲಾ

ಮುಂಬೈ: ಸರ್ವಾಂಗೀಣ ನಿರ್ವಹಣೆ ಮುಂದುವರಿಸಿರುವ ದಕ್ಷಿಣ ಆಫ್ರಿಕಾ ತಂಡ ಏಕದಿನ ವಿಶ್ವಕಪ್​ನಲ್ಲಿ 4ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದೆ. ವಿಕೆಟ್ ಕೀಪರ್-ಬ್ಯಾಟರ್ ಕ್ವಿಂಟನ್ ಡಿಕಾಕ್ (174 ರನ್, 140 ಎಸೆತ, 15 ಬೌಂಡರಿ, 5 ಸಿಕ್ಸರ್) ಹಾಗೂ ಹೆನ್ರಿಕ್ ಕ್ಲಾಸೆನ್ (90 ರನ್, 49 ಎಸೆತ, 2 ಬೌಂಡರಿ, 8 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಬಲದಿಂದ ದಕ್ಷಿಣ ಆಫ್ರಿಕಾ ತನ್ನ 5ನೇ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 149 ರನ್​ಗಳಿಂದ ಬೃಹತ್ ಗೆಲುವು ದಾಖಲಿಸಿದೆ. ನಾಯಕ ಶಕೀಬ್ ಅಲ್ ಹಸನ್ ವಾಪಸಾತಿಯ ನಡುವೆ ಬಾಂಗ್ಲಾ 4ನೇ ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಜಾರಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆಫ್ರಿಕಾ ಡಿಕಾಕ್ -ಕ್ಲಾಸೆನ್ ಹರಿಸಿದ ರನ್ ಮಳೆಯಿಂದಾಗಿ 5 ವಿಕೆಟ್​ಗೆ 382 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಬಾಂಗ್ಲಾ 46.4 ಓವರ್​ಗಳಲ್ಲಿ 233 ರನ್​ಗಳಿಗೆ ಸರ್ವತಪತನ ಕಂಡಿತು. ಚೇಸಿಂಗ್​ನಲ್ಲಿ 58 ರನ್​ಗಳಿಗೆ 5 ವಿಕೆಟ್ ವಿಕೆಟ್ ಕಳೆದುಕೊಂಡ ಬಾಂಗ್ಲಾ 100ರ ಗಡಿ ದಾಟುವುದು ದುಸ್ತರವೆನಿಸಿದಾಗ, ಅನುಭವಿ ಬ್ಯಾಟರ್ ಮಹಮದುಲ್ಲಾ (111 ರನ್, 111 ಎಸೆತ, 11 ಬೌಂಡರಿ, 4 ಸಿಕ್ಸರ್) ಏಕಾಂಗಿ ಹೋರಾಟ ನಡೆಸಿ ಸೋಲಿನ ಅಂತರ ತಗ್ಗಿಸಿದರು. ಸತತ 5ನೇ ಪಂದ್ಯದಲ್ಲೂ ಆಫ್ರಿಕಾದ ಎಲ್ಲ ಬೌಲರ್​ಗಳು ಕನಿಷ್ಠ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ವಾಂಖೆಡೆಯಲ್ಲಿ ಹರಿಣಗಳ ರನ್​ಮಳೆ

ವಾಂಖೆಡೆಯ ಹಿಂದಿನ ಪಂದ್ಯದಲ್ಲಿ ರನ್​ಪ್ರವಾಹ ಹರಿಸಿದ್ದ ಹರಿಣಗಳಿಗೆ ಈ ಬಾರಿ ಉತ್ತಮ ಆರಂಭ ಲಭಿಸಲಿಲ್ಲ. ರೀಜಾ ಹೆಂಡ್ರಿಕ್ಸ್ (12), ರಸ್ಸೀ ವಾನ್ ಡೆರ್ ಡಸೆನ್ (1) ಬೇಗನೆ ನಿರ್ಗಮಿಸಿದರು. ನಂತರ ಡಿಕಾಕ್ ಜತೆಯಾದ ಹಂಗಾಮಿ ನಾಯಕ ಏಡೆನ್ ಮಾರ್ಕ್ರಮ್ (60) ಎಚ್ಚರಿಕೆ ಬ್ಯಾಟಿಂಗ್ ನಡೆಸಿದರು. ಇವರಿಬ್ಬರು 3ನೇ ವಿಕೆಟ್​ಗೆ 137 ಎಸೆತಗಳಲ್ಲಿ 131 ರನ್ ಕಸಿದರು. ಬಳಿಕ 4ನೇ ವಿಕೆಟ್​ಗೆ ಜತೆಯಾದ ಡಿಕಾಕ್- ಕ್ಲಾಸೆನ್ ಬಾಂಗ್ಲಾ ಬೌಲರ್​ಗಳನ್ನು ದಂಡಿಸಿದರು. ಡಿಕಾಕ್ 101 ಎಸೆತಗಳಲ್ಲಿ ಹಾಲಿ ಆವೃತ್ತಿಯಲ್ಲಿ 3ನೇ ಸಿಡಿಸಿದರು. ಶತಕದ ಬಳಿಕ ರನ್​ಗಳಿಕೆಗೆ ಚುರುಕು ಮುಟ್ಟಿಸಿದರು. ಇವರಿಗೆ ಬೆಂಬಲ ನೀಡಿದ ಕ್ಲಾಸೆನ್ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ 34 ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಕೊನೆಯಲ್ಲಿ ಡೇವಿಡ್ ಮಿಲ್ಲರ್ (34*) ತಂಡವನ್ನು 375ರ ಗಡಿ ದಾಟಿಸಿದರು. ಕೊನೇ 10 ಓವರ್​ಗಳಲ್ಲಿ ಬಾಂಗ್ಲಾ ಬರೋಬ್ಬರಿ 144 ರನ್ ಬಿಟ್ಟುಕೊಟ್ಟಿತು.

ಏಕದಿನ ವಿಶ್ವಕಪ್ ಪಂದ್ಯವೊಂದರಲ್ಲಿ ಗರಿಷ್ಠ ರನ್ ಸಿಡಿಸಿದ ವಿಕೆಟ್ ಕೀಪರ್-ಬ್ಯಾಟರ್ ಎಂಬ ಆಡಂ ಗಿಲ್ಕ್ರಿಸ್ಟ್ (149) ಅವರ 16 ವರ್ಷದ ಹಿಂದಿನ ದಾಖಲೆಯನ್ನು ಡಿಕಾಕ್ ಮುರಿದರು. 2007ರಲ್ಲಿ ಲಂಕಾ ವಿರುದ್ಧ ಗಿಲ್ಕ್ರಿಸ್ಟ್ ಈ ಸಾಧನೆ ಮಾಡಿದ್ದರು.

ದಕ್ಷಿಣ ಆಫ್ರಿಕಾ(8) ಏಕದಿನ ವಿಶ್ವಕಪ್​ನಲ್ಲಿ ಹೆಚ್ಚು ಬಾರಿ 350ಕ್ಕೂ ಅಧಿಕ ರನ್​ಗಳಿಸಿದ ಆಸ್ಟ್ರೇಲಿಯಾವನ್ನು (7) ಹಿಂದಿಕ್ಕಿತು. ಭಾರತ (4) ನಂತರದ ಸ್ಥಾನದಲ್ಲಿದೆ.

ದಕ್ಷಿಣ ಆಫ್ರಿಕಾ: 5 ವಿಕೆಟ್​ಗೆ 382 (ಡಿ ಕಾಕ್ 174, ಹೆಂಡ್ರಿಕ್ಸ್ 12, ಡಸೆನ್ 1, ಮಾರ್ಕ್ರಮ್ 60, ಕ್ಲಾಸೆನ್ 90, ಮಿಲ್ಲರ್ 34*, ಜಾನ್ಸೆನ್ 1*, ಹಸನ್ 67ಕ್ಕೆ2). ಬಾಂಗ್ಲಾದೇಶ: 46.4 ಓವರ್​ಗಳಲ್ಲಿ 233 (ಲಿಟನ್ ದಾಸ್ 22, ತಂಜಿದ್ 12, ಶಾಂಟೋ 0, ಶಕೀಬ್ 1, ಮುಶ್ಪೀಕರ್ 8, ಮಹಮುದುಲ್ಲಾ 111, ಮಾಕೋ ಜಾನ್ಸೆನ್ 39ಕ್ಕೆ2, ಕೋಟ್​ಜೀ 62ಕ್ಕೆ3, ರಬಾಡ 32ಕ್ಕೆ2).