ಕ್ರೀಡೆ

ಪಾಕಿಸ್ತಾನ ಎದುರು ಹಲವು ದಾಖಲೆಗಳನ್ನು ನಿರ್ಮಿಸಿದ ಇಂಗ್ಲೆಂಡ್ ದ್ವಿಶತಕವೀರ ಜಾಕ್ ಕ್ರೌಲಿ

ಸೌಥಾಂಪ್ಟನ್: ಇಂಗ್ಲೆಂಡ್ ಯುವ ಬ್ಯಾಟ್ಸ್‌ಮನ್ ಜಾಕ್ ಕ್ರೌಲಿ (267 ರನ್, 393 ಎಸೆತ, 34 ಬೌಂಡರಿ, 1 ಸಿಕ್ಸರ್) ಪ್ರವಾಸಿ ಪಾಕಿಸ್ತಾನ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸುವ ಮೂಲಕ ಹಲವು ದಾಖಲೆಗಳ ಒಡೆಯರಾಗಿದ್ದಾರೆ. ಆಲ್ರೌಂಡರ್ ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ತಂಡದ ಪರ ಆಡುವ ಅವಕಾಶ ಪಡೆದ 22 ವರ್ಷದ ಕ್ರೌಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಬಾರಿಸಿದ ಚೊಚ್ಚಲ ಶತಕವನ್ನು ದೊಡ್ಡ ಇನಿಂಗ್ಸ್ ಆಗಿ ಬದಲಾಯಿಸಿದರು. ಆಡಿದ ಹಿಂದಿನ 7 ಟೆಸ್ಟ್‌ಗಳಲ್ಲಿ 76 ರನ್ ಅವರ ಗರಿಷ್ಠ ಗಳಿಕೆಯಾಗಿತ್ತು.

ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ (152) 5ನೇ ವಿಕೆಟ್‌ಗೆ 359 ರನ್ ಜತೆಯಾಟವಾಡಿದ ಜಾಕ್ ಕ್ರೌಲಿ, ಇಂಗ್ಲೆಂಡ್‌ನ 6ನೇ ಗರಿಷ್ಠ ಜತೆಯಾಟದ ದಾಖಲೆ ಬರೆದರು. ಕ್ರೌಲಿ ಇಂಗ್ಲೆಂಡ್ ಪರ ಚೊಚ್ಚಲ ಶತಕವನ್ನು 2ನೇ ಗರಿಷ್ಠ ರನ್ ಆಗಿ ಬದಲಾಯಿಸಿದ ಸಾಧನೆ ಮಾಡಿದರು. ಟಿಪ್ ಪೋಸ್ಟರ್ ಚೊಚ್ಚಲ ಶತಕದಲ್ಲಿ 287 ರನ್ ಗಳಿಸಿದ್ದು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ನ ದಾಖಲೆ ಎನಿಸಿದೆ. ಕನ್ನಡಿಗ ಕರುಣ್ ನಾಯರ್ ಅಜೇಯ 303 ರನ್ ಗಳಿಸಿದ್ದು ಕಳೆದ 25 ವರ್ಷಗಳಲ್ಲಿ ವಿಶ್ವದ ಒಟ್ಟಾರೆ ದಾಖಲೆಯಾಗಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 250 ಪ್ಲಸ್ ರನ್ ಬಾರಿಸಿದ 4ನೇ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯೂ ಜಾಕ್ ಕ್ರೌಲಿ ಅವರದಾಗಿದೆ. 22 ವರ್ಷ 200 ದಿನ ವಯಸ್ಸಿನ ಕ್ರೌಲಿಗಿಂತ ಕಿರಿಯ ಬ್ಯಾಟಿಂಗ್ ಸಾಧಕರೆಂದರೆ ಗ್ಯಾರಿ ಸೋಬರ್ಸ್‌ (21 ವರ್ಷ, 213 ದಿನ), ಡಾನ್ ಬ್ರಾಡ್ಮನ್ (21 ವರ್ಷ, 304 ದಿನ) ಮತ್ತು ಲೆನ್ ಹಟನ್ (22 ವರ್ಷ, 58 ದಿನ). ಜಾಕ್ ಕ್ರೌಲಿ ದ್ವಿಶತಕ ಸಿಡಿಸಿದ ಇಂಗ್ಲೆಂಡ್‌ನ 3ನೇ ಕಿರಿಯ ಬ್ಯಾಟ್‌ಮನ್ ಎನಿಸಿದ್ದಾರೆ. ಲೆನ್ ಹಟನ್ ಮತ್ತು ಡೇವಿಡ್ ಗೋವರ್ ಮೊದಲಿಬ್ಬರು.

ಇಂಗ್ಲೆಂಡ್ ಪರ 3ನೇ ಕ್ರಮಾಂಕದಲ್ಲಿ 2ನೇ ಗರಿಷ್ಠ ರನ್ ಗಳಿಸಿದ ಸಾಧನೆ ಜಾಕ್ ಕ್ರೌಲಿ ಅವರದಾಗಿದೆ. ವ್ಯಾಲಿ ಹಮ್ಮಂಡ್ ಅಜೇಯ 336 ರನ್ ಗಳಿಸಿರುವುದು ಗರಿಷ್ಠ ರನ್‌ಗಳಾಗಿವೆ. ಸ್ಟಂಪಿಂಗ್ ಮೂಲಕ ಔಟ್ ಆದ ಬ್ಯಾಟ್‌ಮನ್‌ಗಳ ಪೈಕಿ ಗರಿಷ್ಠ ರನ್ ಗಳಿಸಿದ ದಾಖಲೆಯೂ ಜಾಕ್ ಕ್ರೌಲಿ ಅವರದಾಗಿದೆ. ಇದನ್ನೂ ಮುನ್ನ 1969ರಲ್ಲಿ ಸೇಮೋರ್ ನರ್ಸ್ 258 ರನ್ ಗಳಿಸಿದ ಬಳಿಕ ಸ್ಟಂಪ್ ಔಟ್ ಆಗಿದ್ದು ದಾಖಲೆ ಎನಿಸಿತ್ತು.

ಜಾಕ್ ಕ್ರೌಲಿ ಆಡಿದ ಮೊದಲ 7 ಟೆಸ್ಟ್‌ಗಳಲ್ಲಿ ಅವರ ರನ್ ಸರಾಸರಿ 28.54. 11 ಇನಿಂಗ್ಸ್‌ಗಳಲ್ಲಿ 3 ಅರ್ಧಶತಕ ಸಹಿತ 314 ರನ್ ಗಳಿಸಿದ್ದರು. ಇದೀಗ ಅವರ ರನ್ ಸರಾಸರಿ 48.41ಕ್ಕೆ ಏರಿದೆ. ಇದು ಅವರ ಪ್ರಥಮ ದರ್ಜೆ ಕ್ರಿಕೆಟ್ (30.82) ಸರಾಸರಿಗಿಂತಲೂ ಅಧಿಕವಾಗಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಿಡಿಸಿದ ಹಿಂದಿನ 3 ಶತಕಗಳ ಪೈಕಿ 168 ರನ್ ಅವರ ಗರಿಷ್ಠ ಗಳಕೆಯಾಗಿತ್ತು.