ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಸೆಲೆಬ್ರಿಟಿಗಳ ಡಿವೋರ್ಸ್ ಸಾರ್ವಜನಿಕ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಇದೀಗ ಈ ಸಾಲಿಗೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಯಜುವೇಂದ್ರ ಚಹಲ್ (Yuzvendra Chahal) ಹಾಗೂ ಧನಶ್ರೀ (Dhanashree) ಸೇರ್ಪಡೆಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ದೂರ ಉಳಿದಿರುವ ದಂಪತಿ ಜತೆಯಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಅನ್‌ಫಾಲೋ ಮಾಡುವ ಮೂಲಕ ವಿಚ್ಛೇದನ ವದಂತಿಗೆ ಇಂಬು ನೀಡಿದ್ದಾರೆ.
ವರದಿಗಳ ಪ್ರಕಾರ, ಯಜುವೇಂದ್ರ ಚಹಲ್ (Yuzvendra Chahal) ಧನಶ್ರೀ ಅವರೊಂದಿಗಿನ ಎಲ್ಲಾ ಪೋಟೋಗಳನ್ನು ತಮ್ಮ ಖಾತೆಯಿಂದ ಡಿಲೀಟ್ ಮಾಡಿದ್ದಾರೆ. ಇದು ಅವರ ವಿಚ್ಛೇದನ ವಂದತಿಗೆ ಮತ್ತಷ್ಟು ಜೀವ ತುಂಬಿದಂತಿದೆ. ಇದರ ಮಧ್ಯೆ ಚಹಾಲ್ ಇನ್‌ಸ್ಟಾಗ್ರಾಮ್ ಸ್ಟೋರಿ ವೈರಲ್ ಆಗಿದೆ.
ಕಠಿಣ ಪರಿಶ್ರಮವು ಜನರ ಪಾತ್ರವನ್ನು ಬಹಿರಂಗಪಡಿಸುತ್ತದೆ. ನಿಮ್ಮ ಪ್ರಯಾಣ ನಿಮಗೆ ತಿಳಿದಿದೆ. ನಿನ್ನ ನೋವು ನಿನಗೆ ಗೊತ್ತು. ಇಲ್ಲಿಗೆ ತಲುಪಲು ನೀವು ಏನು ಮಾಡಿದ್ದೀರಿ ಎಂಬುದು ನಿಮಗೆ ತಿಳಿದಿದೆ. ಜಗತ್ತಿಗೇ ಗೊತ್ತು. ನೀವು ಎತ್ತರದಲ್ಲಿದ್ದೀರಿ. ನಿಮ್ಮ ತಂದೆ ತಾಯಿ ಹೆಮ್ಮೆ ಪಡುವಂತೆ ಶ್ರಮಿಸಿದ್ದೀರಿ. ಹೆಮ್ಮೆಯ ಮಗನಂತೆ ಯಾವಾಗಲೂ ಬಲವಾಗಿ ಉಳಿಯಿರಿ ಎಂದು ಯಜುವೇಂದ್ರ ಚಹಲ್ (Yuzvendra Chahal) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದು, ದಂಪತಿಗಳು ವಿಚ್ಛೇದನ ಪಡೆಯುತ್ತಾರೆ ಎಂಬ ಸುದ್ದಿ ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. 2023ರಲ್ಲಿ ಧನಶ್ರೀ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಚಹಾಲ್ ಅವರನ್ನು ಅನ್‌ಫಾಲೋ ಮಾಡಿದ್ದರು. ಆ ಬಳಿಕ ಚಹಲ್ (Yuzvendra Chahal) ಹೊಸ ಜೀವನವು ಲೋಡ್ ಆಗುತ್ತಿದೆ ಎಂದು ಪೋಸ್ಟ್ ಮಾಡುವ ಮೂಲಕ ವಿಚ್ಛೇದನ ವದಂತಿಗೆ ಪುಷ್ಠಿ ನೀಡಿದ್ದರು. ಆ ಬಳಿಕ ವಿಚ್ಛೇದನ ಕುರಿತಾದ ಸುದ್ದಿಗಳನ್ನು ತಳ್ಳಿ ಹಾಕಿದ್ದರು. ಇದೀಗ ಸ್ಟೋರಿ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿರುವ ಚಹಲ್ ಯಾವ ರೀತಿ ಸ್ಪಷ್ಟನೆ ಕೊಡಲಿದ್ದಾರೆ ಎಂದು ಕಾದು ನೋಡಬೇಕಿದೆ.