ನವದೆಹಲಿ: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಇತ್ತೀಚೆಗೆ ನಾಯಕನಾಗಿ ಪ್ರತಿಷ್ಠಿತ ಟ್ರೋಫಿಯನ್ನು ಗೆದ್ದಿದ್ದಾರೆ. ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಎಂಬ ಪ್ರತಿಷ್ಠಿತ ಪಂದ್ಯಾವಳಿ ನಡೆಯಿತು. ಭಾರತ, ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದರಲ್ಲಿ ಭಾಗವಹಿಸಿದ್ದವು. ಈ ಟೂರ್ನಿಯಲ್ಲಿ ಆಯಾ ದೇಶಗಳ ಮಾಜಿ ಕ್ರಿಕೆಟಿಗರು ಸೆಣಸಾಡಿದರು. ಕೊನೆಗೆ ಫೈನಲ್ ಪಂದ್ಯದಲ್ಲಿ ಭಾರತ ಚಾಂಪಿಯನ್ ತಂಡವು ಪಾಕಿಸ್ತಾನ ಚಾಂಪಿಯನ್ ತಂಡದ ವಿರುದ್ಧ ಗೆದ್ದು ಟ್ರೋಫಿಯನ್ನು ಎತ್ತಿಹಿಡಿಯಿತು.
ಯುವರಾಜ್ ಸಿಂಗ್ ಭಾರತ ಚಾಂಪಿಯನ್ ತಂಡದ ನಾಯಕರಾಗಿದ್ದರು. ಈ ಕಪ್‌ನೊಂದಿಗೆ ಯುವರಾಜ್ ಸಿಂಗ್, ಅಂಡರ್-19 ವಿಶ್ವಕಪ್, ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಐಪಿಎಲ್ ಟ್ರೋಫಿ ಮತ್ತು ಈಗ ಲೆಜೆಂಡ್ಸ್ ಟ್ರೋಫಿಯನ್ನೂ ಗೆದ್ದಂತಾಗಿದೆ. ಈ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಇನ್ನು ಪಾಕಿಸ್ತಾನ ವಿರುದ್ಧ ಫೈನಲ್ ಪಂದ್ಯವನ್ನು ಗೆದ್ದ ನಂತರ ಯುವರಾಜ್ ಸಿಂಗ್ ತನ್ನ ಸರ್ವಕಾಲಿಕ ಆಟಗಾರರನ್ನು ಘೋಷಿಸಿದರು. ಅದೇನೆಂದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಎಲ್ಲ ದೇಶಗಳ ಅತ್ಯುತ್ತಮ 11 ಆಟಗಾರರನ್ನು ಆಯ್ಕೆ ಮಾಡಿ, ಇದು ತಮ್ಮ ಸಾರ್ವಕಾಲಿಕ ಅತ್ಯುತ್ತಮ ಪ್ಲೇಯಿಂಗ್ ಇಲೆವೆನ್ ಎಂದು ಯುವರಾಜ್ ಸಿಂಗ್ ಘೋಷಿಸಿದರು. ಆದರೆ, ಭಾರತ ತಂಡದ ಮಾಜಿ ನಾಯಕ ಹಾಗೂ ದೇಶಕ್ಕೆ ಮೂರು ಕಪ್ ನೀಡಿದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೆಸರು ಇಲ್ಲದಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಧೋನಿಗೆ ಅವಮಾನ ಮಾಡಲಾಗಿದೆ ಎಂದು ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ.
ಯುವಿ ತನ್ನ ಸಾರ್ವಕಾಲಿಕ 11 ಆಟಗಾರರ ತಂಡದಲ್ಲಿ ಪ್ರಸ್ತುತ ಭಾರತ ತಂಡದ ನಾಯಕ ರೋಹಿತ್ ಶರ್ಮ ಹೆಸರನ್ನು ಸೇರಿಸಿದ್ದಾರೆ. ಅಲ್ಲದೆ, ವಿರಾಟ್ ಕೊಹ್ಲಿ ಹೆಸರು ಸಹ ಇದೆ. ಆದರೆ, ಧೋನಿಯನ್ನು ಅವರು ಕಡೆಗಣಿಸಿದ್ದಾರೆ. ಇನ್ನೊಂದು ವಿಚಿತ್ರ ಸಂಗತಿ ಏನೆಂದರೆ, ಪ್ಲೇಯಿಂಗ್ ಇಲೆವೆನ್‌ನಲ್ಲಿ ಯುವಿ ತಮ್ಮ ಹೆಸರನ್ನೇ ಸೇರಿಸಿರಲಿಲ್ಲ.
ಅಂದಹಾಗೆ ಯುವರಾಜ್ ಸಿಂಗ್ ಘೋಷಿಸಿದ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾವೆಲ್ಲ ಆಟಗಾರರು ಇದಾರೆ ಎಂಬುದನ್ನು ನಾವೀಗ ನೋಡೋಣ. ಸಚಿನ್ ತೆಂಡೂಲ್ಕರ್ (ಭಾರತ), ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ), ರೋಹಿತ್ ಶರ್ಮ (ಭಾರತ), ವಿರಾಟ್ ಕೊಹ್ಲಿ (ಭಾರತ), ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ), ಆಡಮ್ ಗಿಲ್‌ಕ್ರಿಸ್ಟ್ (ಆಸ್ಟ್ರೇಲಿಯಾ), ಶೇನ್ ವಾರ್ನ್ (ಆಸ್ಟ್ರೇಲಿಯಾ), ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ), ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ), ವಾಸಿಮ್ ಅಕ್ರಮ್ (ಪಾಕಿಸ್ತಾನ) ಹಾಗೂ ಆಂಡ್ರ್ಯೂ ಫ್ಲಿಂಟಾಫ್ (ಇಂಗ್ಲೆಂಡ್) ಯುವಿ ಹೆಸರಿಸಿದ ತಂಡದಲ್ಲಿದ್ದಾರೆ.
ಧೋನಿಗೆ ಸ್ಥಾನ ನೀಡದಿರುವುದು ಧೋನಿ ಅಭಿಮಾನಿಗಳಿಗೆ ಕೊಂಚ ನಿರಾಸೆ ತಂದಿದೆ. ಅಲ್ಲದೆ, 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಆಲ್‌ರೌಂಡರ್ ಫ್ಲಿಂಟಾಫ್ ಜತೆ ಜಗಳವಾಡಿದ್ದರೂ ಯುವಿ ಅವರಿಗೆ ಸ್ಥಾನ ನೀಡಿರುವುದು ಗಮನಾರ್ಹವಾಗಿದೆ. (ಏಜೆನ್ಸೀಸ್)