ನವದೆಹಲಿ: 5 ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಕರೊನಾ ಪರಿಹಾರ ನಿಧಿ ಸಂಗ್ರಹಕ್ಕಾಗಿ ವಿವಿಧ ಸೆಲೆಬ್ರಿಟಿಗಳ ವಿರುದ್ಧ ಆಡಿದ ಪ್ರದರ್ಶನ ಚೆಸ್ ಪಂದ್ಯದ ವೇಳೆ ಯುವ ಬಿಲಿಯಾದೀಶ ಉದ್ಯಮಿ ನಿಖಿಲ್ ಕಾಮತ್ ಮೋಸ ಮಾಡಿ ಗೆಲುವು ಸಾಧಿಸಿದ್ದು ವಿವಾದಕ್ಕೀಡಾಗಿದೆ.
ದಿಗ್ಗಜ ಆನಂದ್‌ರನ್ನೇ ಹವ್ಯಾಸಿ ಆಟಗಾರ ಸೋಲಿಸಿದ ಬಗ್ಗೆ ಅಚ್ಚರಿ, ಮೋಸ ಮಾಡಿ ಗೆದ್ದಿರುವ ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ನಿಖಿಲ್ ಕಾಮತ್, ಕಂಪ್ಯೂಟರ್ ಮತ್ತು ಇತರ ನೆರವಿನ ಮೂಲಕ ಆನಂದ್‌ರನ್ನು ಮಣಿಸಿದ್ದನ್ನು ಒಪ್ಪಿಕೊಂಡಿದ್ದು, ಕ್ಷಮೆಯಾಚಿಸಿದ್ದಾರೆ. ‘ವಿಶ್ವನಾಥನ್ ಆನಂದ್ ವಿರುದ್ಧದ ಚೆಸ್ ಪಂದ್ಯದಲ್ಲಿ ನಾನು ಗೆದ್ದಿದ್ದೇನೆ ಎಂಬುದು ಅಸಂಬದ್ಧವಾದುದು. 100 ಮೀಟರ್ ಓಟದಲ್ಲಿ ಉಸೇನ್ ಬೋಲ್ಟ್ ಅವರನ್ನು ಸೋಲಿಸಿದ್ದೇನೆ ಎಂದಂತಾಗುತ್ತದೆ’ ಎಂದಿರುವ ನಿಖಿಲ್ ಕಾಮತ್, ‘ಪಂದ್ಯದ ವೇಳೆ ನಾನು ಆ ರೀತಿಯಾಗಿ ನಡೆದುಕೊಳ್ಳಬಾರದಾಗಿತ್ತು. ಅದರಿಂದ ಉಂಟಾದ ಗೊಂದಲವನ್ನು ನಂತರ ಅರಿತುಕೊಂಡೆ. ಇದಕ್ಕಾಗಿ ಕ್ಷಮೆಯಾಚಿಸುವೆ’ ಎಂದಿದ್ದಾರೆ.
ಪಂದ್ಯ ಆಯೋಜಿಸಿದ್ದ ಚೆಸ್ ಡಾಟ್ ಕಾಮ್ ಈಗ ನಿಖಿಲ್ ಪ್ರೊೈಲ್ ಅಳಿಸಿ ಹಾಕಿದ್ದರೆ, ‘ನಾನು ಪಂದ್ಯವನ್ನು ನೈತಿಕತೆಯಿಂದ ಆಡಿದೆ. ಇತರರಿಂದಲೂ ಅದನ್ನೇ ನಿರೀಕ್ಷಿಸಿದೆ’ ಎಂದು ಆನಂದ್ ವಿವಾದದಿಂದ ಅಂತರ ಕಾಯ್ದುಕೊಂಡಿದ್ದಾರೆ. ನಟರಾದ ಕಿಚ್ಚ ಸುದೀಪ್, ಆಮೀರ್ ಖಾನ್ ಮುಂತಾದ ಸೆಲೆಬ್ರಿಟಿಗಳ ವಿರುದ್ಧವೂ ‘ಚೆಕ್‌ಮೇಟ್ ಕೋವಿಡ್’ ಹೆಸರಿನ ಈ ಕಾರ್ಯಕ್ರಮದಲ್ಲಿ ಆಡಿದ್ದ ಆನಂದ್ ಗೆಲುವು ದಾಖಲಿಸಿದ್ದರು.