ಬೆಂಗಳೂರು: ಐಪಿಎಲ್ 18ನೇ ಆವೃತ್ತಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವನ್ನು ಮಾರಾಟ ಮಾಡುವುದು ಈಗಾಗಲೆ ಖಚಿತಗೊಂಡಿದೆ. ಅಲ್ಲದೆ ಮುಂದಿನ ವರ್ಷ ಮಾರ್ಚ್ 31ರೊಳಗೆ ಮಾರಾಟ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ವಿಶ್ವಾಸವನ್ನೂ ತಂಡದ ಮಾಲೀಕರಾದ ಡಿಯಾಜಿಯೋ ಕಂಪನಿಯ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್) ವ್ಯಕ್ತಪಡಿಸಿದೆ. ಆರ್ಸಿಬಿ ಪುರುಷರ ತಂಡದೊಂದಿಗೆ ಮಹಿಳೆಯರ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ (ಡಬ್ಲ್ಯುಪಿಎಲ್) ಆಡುವ ಆರ್ಸಿಬಿ ಮಹಿಳಾ ತಂಡವನ್ನೂ ಮಾರಾಟ ಮಾಡಲಾಗುವುದು ಕೂಡ ಖಚಿತಗೊಂಡಿದೆ. ಐಪಿಎಲ್ನ ಅತ್ಯಂತ ನಿಷ್ಠಾವಂತ ಅಭಿಮಾನಿಗಳಿಗೆ ಇದಕ್ಕಿಂತ ಆಘಾತಕಾರಿ ವಿಷಯವೂ ಇದೆ. ಅದೇನೆಂದರೆ, ಹೊಸ ಮಾಲೀಕರಿಗೆ ಮಾರಾಟವಾದ ಬಳಿಕ ಆರ್ಸಿಬಿ ತಂಡದ ಹೆಸರು ಕೂಡ ಬದಲಾಗಲಿದೆ!
2008ರ ಆರಂಭಿಕ ಆವೃತ್ತಿಯಿಂದಲೂ ಐಪಿಎಲ್ ಭಾಗವಾಗಿರುವ ಆರ್ಸಿಬಿ ಫ್ರಾಂಚೈಸಿ ಈ ಮುನ್ನ ವಿಜಯ್ ಮಲ್ಯ ಅವರ ಮಾಲೀಕತ್ವವನ್ನು ಹೊಂದಿತ್ತು. ವಿಜಯ್ ಮಲ್ಯ ಅವರು ತನ್ನ ಕಂಪನಿಯ ಅತ್ಯಂತ ಜನಪ್ರಿಯ ವಿಸ್ಕಿ ಬ್ರ್ಯಾಂಡ್ ಅಂದರೆ "ರಾಯಲ್ ಚಾಲೆಂಜ್' ಪ್ರಚಾರಕ್ಕಾಗಿ ತಂಡಕ್ಕೆ "ರಾಯಲ್ ಚಾಲೆಂಜರ್ಸ್ ಬೆಂಗಳೂರು' ಎಂಬ ಹೆಸರು ಇಟ್ಟಿದ್ದರು. ನಂತರ ಅವರ ಮದ್ಯದ ಉದ್ಯಮದ ಯುನೈಟೆಡ್ ಸ್ಪಿರಿಟ್ ಕಂಪನಿ ಮಾರಾಟವಾದಾಗ, ಆರ್ಸಿಬಿ ತಂಡವೂ ಡಿಯಾಜಿಯೋ ಪಾಲಾಗಿತ್ತು. ಆಗ ರಾಯಲ್ ಚಾಲೆಂಜ್ ವಿಸ್ಕಿ ಬ್ರ್ಯಾಂಡ್ ಕೂಡ ಅದರ ಒಡೆತನಕ್ಕೆ ಸೇರಿದ್ದರಿಂದ ಅದು ತಂಡದ ಬದಲಾವಣೆ ಮುಂದಾಗಲಿಲ್ಲ.
ಆದರೆ ಇದೀಗ ಆರ್ಸಿಬಿ ತಂಡ ಮಾರಾಟವಾದರೆ, ಹೊಸ ಮಾಲೀಕರು ಬರಲಿದ್ದಾರೆ. ಅವರು ಮತ್ತೆ ಅದೇ ರಾಯಲ್ ಚಾಲೆಂಜ್ ಬ್ರ್ಯಾಂಡ್ನ ಪ್ರಚಾರಕ್ಕೆ ಮುಂದಾಗುವ ಸಾಧ್ಯತೆ ಇಲ್ಲ. ಹೀಗಾಗಿ ಅವರು ತಂಡದ ಹೆಸರು ಬದಲಾವಣೆಗೆ ಮುಂದಾಗುವುದು ನಿಶ್ಚಿತ. ಬೇರೆ ಬ್ರ್ಯಾಂಡ್ ಪ್ರಚಾರಕ್ಕೆ ಬದಲಾಗಿ ಅವರು ತಮ್ಮದೇ ಬ್ರ್ಯಾಂಡ್ ಪ್ರಚಾರಕ್ಕಾಗಿ ಆರ್ಸಿಬಿ ತಂಡದ ಹೆಸರು ಬದಲಾಯಿಸಬಹುದು.
ಹೆಸರು ಬದಲಾವಣೆ ಮುಂದಿನ ದಿನಗಳಲ್ಲಿ ಆರ್ಸಿಬಿ ತಂಡದ ಬ್ರ್ಯಾಂಡ್ ಮೌಲ್ಯಕ್ಕೆ ಹೊಡೆತ ನೀಡಬಹುದು. ಆದರೂ ಇದಕ್ಕಾಗಿ ಹೊಸ ಮಾಲೀಕರು, 'ರಾಯಲ್ ಚಾಲೆಂಜ್' ಬ್ರ್ಯಾಂಡ್ ಪ್ರಚಾರವನ್ನು ಮುಂದುವರಿಸುವ ಸಾಧ್ಯತೆ ಇಲ್ಲ.
ಈ ಬೆಳವಣಿಗೆ ಆರ್ಸಿಬಿ ಅಭಿಮಾನಿಗಳಿಗೆ ಬೇಸರದ ಸಂಗತಿಯೇ ಆದರೂ ಅದರಲ್ಲೊಂದು ಖುಷಿ, ಹೆಮ್ಮೆಯೂ ಇದೆ. ಅದೇನೆಂದರೆ ಆರ್ಸಿಬಿ ತಂಡ ಕಪ್ ಗೆಲ್ಲದ ನೋವಿನೊಂದಿಗೆ ಹೆಸರು ಬದಲಾವಣೆ ಕಾಣುತ್ತಿಲ್ಲ. ಬದಲಾಗಿ ಕಪ್ ಗೆಲುವಿನೊಂದಿಗೆ ತನ್ನ ಹೆಸರು ಬದಲಾಯಿಸುತ್ತಿದೆ. ಹೀಗಾಗಿ ಆರ್ಸಿಬಿ ಹೆಸರಿನ ಜತೆಗಿನ ಅಭಿಮಾನಿಗಳ ಭಾವನಾತ್ಮಕ ಸಂಬಂಧ ಅದೇ ರೀತಿ ಮುಂದುವರಿಯಬಹುದು ಮತ್ತು ಹೆಮ್ಮೆ ಪಡುವುದನ್ನು ಮುಂದುವರಿಸಬಹುದು.