ಕ್ರೀಡೆ

ಧೋನಿ ಯಾವಾಗಲೂ ನನ್ನ ನಾಯಕ ಎಂದ ವಿರಾಟ್ ಕೊಹ್ಲಿ

ನವದೆಹಲಿ: ಎಂಎಸ್ ಧೋನಿ ನೀವು ಯಾವಾಗಲೂ ನನ್ನ ನಾಯಕರಾಗಿ ಇರುತ್ತೀರಿ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾನುವಾರ ಮಾಜಿ ನಾಯಕನ ವಿದಾಯಕ್ಕೆ ಗೌರವ ಸಲ್ಲಿಸಿದ್ದಾರೆ. ಬಿಸಿಸಿಐ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿರುವ ಕಿರು ವಿಡಿಯೋದಲ್ಲಿ ಕೊಹ್ಲಿ, ‘ಜೀವನದಲ್ಲಿ ಕೆಲವೊಮ್ಮೆ ಪದಗಳಿಗೆ ಕೊರತೆ ಉಂಟಾಗುತ್ತದೆ. ಇದು ಅಂಥದ್ದೇ ಒಂದು ಕ್ಷಣವಾಗಿದೆ. ನೀವು ಯಾವಾಗಲೂ ತಂಡದ ಬಸ್‌ನಲ್ಲಿ ಕೊನೆಯ ಸೀಟಿನಲ್ಲಿ ಕುಳಿತುಕೊಳ್ಳುವಂಥ ಸರಳ ವ್ಯಕ್ತಿಯೇ ಆಗಿರುತ್ತೀರಿ’ ಎಂದು ಹೇಳಿದ್ದಾರೆ.

‘ನಾವಿಬ್ಬರೂ ಶ್ರೇಷ್ಠವಾದ ನಂಬಿಕೆ, ಸ್ನೇಹ ಹೊಂದಿದ್ದೆವು ಮತ್ತು ಪರಸ್ಪರ ಅರ್ಥಮಾಡಿಕೊಂಡಿದ್ದೆವು. ಯಾಕೆಂದರೆ ನಾವಿಬ್ಬರೂ ಒಂದೇ ರೀತಿಯ ಪಾತ್ರ ನಿಭಾಯಿಸಿದ್ದೆವು ಮತ್ತು ಒಂದೇ ಗುರಿ ಹೊಂದಿದ್ದೆವು. ಅದುವೇ ತಂಡವನ್ನು ಗೆಲ್ಲಿಸುವುದು. ನಿಮ್ಮ ನಾಯಕತ್ವದಡಿಯಲ್ಲಿ ಮತ್ತು ನಿಮ್ಮೊಂದಿಗೆ ಆಡಿರುವುದು ನನ್ನ ಭಾಗ್ಯ. ನೀವು ನನ್ನ ಮೇಲೆ ನಂಬಿಕೆ ಇಟ್ಟಿದ್ದಿರಿ ಮತ್ತು ಅದಕ್ಕಾಗಿ ನಾನು ಯಾವಾಗಲೂ ಋಣಿಯಾಗಿರುತ್ತೇನೆ. ನಾನು ಈ ಹಿಂದೆಯೂ ಇದನ್ನು ಹೇಳಿದ್ದೆ ಮತ್ತು ಈಗಲೂ ಮತ್ತೊಮ್ಮೆ ಹೇಳುತ್ತೇನೆ, ನೀವು ಯಾವಾಗಲೂ ನನ್ನ ನಾಯಕರಾಗಿರುತ್ತೀರಿ’ ಎಂದು ಕೊಹ್ಲಿ ಹೇಳಿದ್ದಾರೆ.

ಟಾಸ್ ವೇಳೆ ಭೇಟಿಯಾಗೋಣ ಎಂದ ರೋಹಿತ್

ಧೋನಿ ನಾಯಕತ್ವ ಅವಧಿಯಲ್ಲೇ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಬಡ್ತಿ ಪಡೆದು ವೃತ್ತಿಜೀವನದಲ್ಲಿ ಮಹತ್ತರವಾದ ಬದಲಾವಣೆ ಕಂಡ ರೋಹಿತ್ ಶರ್ಮ, ‘ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿ. ಅವರು ಬೀರಿರುವ ಪರಿಣಾಮ ಅಪಾರವಾದುದು’ ಎಂದು ಮಾಜಿ ನಾಯಕನನ್ನು ಬಣ್ಣಿಸಿದ್ದಾರೆ.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿರುವ ರೋಹಿತ್, ಉದ್ಘಾಟನಾ ಪಂದ್ಯದ ಎದುರಾಳಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ನಾಯಕರಾಗಿರುವ ಧೋನಿಗೆ ಸೆ.19ರಂದು ಟಾಸ್ ವೇಳೆ ಭೇಟಿಯಾಗೋಣ ಎಂದೂ ಟ್ವಿಟರ್‌ನಲ್ಲಿ ಹೇಳಿದ್ದಾರೆ. ಧೋನಿಯನ್ನು ನೀಲಿ ಜೆರ್ಸಿಯಲ್ಲಿ ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ಹಳದಿ ಜೆರ್ಸಿಯಲ್ಲಿ ಅವರು ಇನ್ನೂ ಕೆಲಕಾಲ ನಮ್ಮೊಂದಿಗೆ ಇರುತ್ತಾರೆ ಎಂದಿದ್ದಾರೆ.

ಅವರಂಥ ಆಟಗಾರರನ್ನು ಮತ್ತೆ ಪಡೆಯುವುದು ಅಸಾಧ್ಯ. ಎಂಎಸ್ ಅವರಂತೆ ಯಾರೂ ಇಲ್ಲ, ಯಾರೂ ಇರಲಿಲ್ಲ, ಯಾರೂ ಇರಲಾರರು. ಆಟಗಾರರು ಬರಬಹುದು ಮತ್ತು ಹೋಗಬಹುದು. ಆದರೆ ಅವರಷ್ಟು ತಾಳ್ಮೆಯ ವ್ಯಕ್ತಿ ಯಾರೂ ಇರಲಾರರು. ಹಲವು ಕ್ರಿಕೆಟ್ ಪ್ರೇಮಿಗಳಿಗೆ ಅವರು ಕುಟುಂಬದ ಸದಸ್ಯರೇ ಆಗಿದ್ದರು. ಓಂ ಫಿನಿಶಾಯ ನಮಃ ಎಂದು ವೀರೇಂದ್ರ ಸೆಹ್ವಾಗ್ ಟ್ವೀಟಿಸಿದ್ದಾರೆ.

ಎಂಎಸ್ ಧೋನಿ ಒಬ್ಬರೇ. ನನ್ನ ವೃತ್ತಿಜೀವನದ ಅತಿದೊಡ್ಡ ಸ್ಫೂರ್ತಿಯಾಗಿದ್ದಕ್ಕೆ ಧನ್ಯವಾದಗಳು ಗೆಳೆಯ ಮತ್ತು ಹಿರಿಯ ಸಹೋದರ. ನೀಲಿ ಜೆರ್ಸಿಯೊಂದಿಗೆ ನಿಮ್ಮ ಜತೆ ಆಡುವುದನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಆದರೆ ನನಗೆ ಮಾರ್ಗದರ್ಶನ ನೀಡಲು ಯಾವಾಗಲೂ ನನ್ನ ಜತೆಗೆ ಇರುತ್ತೀರಿ ಎಂಬ ನಂಬಿಕೆ ಇದೆ ಎಂದು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

‘ಯಾವ ಶಬ್ದವೂ ಸಾಕಾಗದು. ಮಹಿ ಭಾಯಿ ನಿಮ್ಮ ತಾಳ್ಮೆ, ಮಾಗದರ್ಶನ ಮತ್ತು ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳು. ನೀವು ಯಾವಾಗಲೂ ಸ್ಫೂರ್ತಿಯಾಗಿರುತ್ತೀರಿ ಮತ್ತು ನಮ್ಮಂಥ ಸಾಕಷ್ಟು ಜನರು ಕನಸಿನ ಮೇಲೆ ನಂಬಿಕೆ ಇಡಲು ಕಾರಣರಾಗಿದ್ದೀರಿ. 7 ಫಾರೆವರ್’ ಎಂದು ಕನ್ನಡಿಗ ಕೆಎಲ್ ರಾಹುಲ್ ಟ್ವೀಟ್ ಮಾಡಿದ್ದಾರೆ.