ಕ್ರೀಡೆ

ಹೀಗೇ ಆಡಿದರೆ ಎಲ್ಲಾ ಪಂದ್ಯ ಗೆಲ್ಲಲು ಸಾಧ್ಯವಿಲ್ಲ: ಟೀಮ್ ಇಂಡಿಯಾ ಬ್ಯಾಟರ್​ಗಳಿಗೆ ಮಾಜಿ ಕ್ರಿಕೆಟಿಗರ ಕಿವಿಮಾತು

ಅಡಿಲೇಡ್​ ಓವಲ್​: ಬಾರ್ಡರ್ ಗವಾಸ್ಕರ್ ಟ್ರೋಫಿ ಅಂಗವಾಗಿ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ನಡೆಯುತ್ತಿರುವ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಐದು ಟೆಸ್ಟ್​ ಪಂದ್ಯಗಳಲ್ಲಿ ಇಂದು ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲು ಅನುಭವಿಸಿತು. ಐದು ದಿನಗಳ ಪಿಂಕ್ ಬಾಲ್​ ಅಹರ್ನಿಶಿ ಟೆಸ್ಟ್​ ಪಂದ್ಯವನ್ನು ಆಸ್ಟ್ರೇಲಿಯಾ ಕೇವಲ ಮೂರು ದಿನಗಳಲ್ಲೇ ಕೊನೆಗೊಳಿಸುವ ಮೂಲಕ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ 10 ವಿಕೆಟ್‌ಗಳ ಸೋಲನ್ನು ಕಂಡಿರುವುದು ಇದೀಗ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರ ಬೇಸರಕ್ಕೆ ಕಾರಣವಾಗಿದೆ.

ಅಡಿಲೇಡ್ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳ ವೈಫಲ್ಯಕ್ಕೆ ಟೀಕೆಗಳು ವ್ಯಕ್ತವಾಗಿವೆ. ತಂಡವು ಎರಡೂ ಇನಿಂಗ್ಸ್‌ಗಳಲ್ಲಿ 180 ಮತ್ತು 175 ರನ್ ಗಳಿಸಿ, 10 ವಿಕೆಟ್‌ಗಳಿಂದ ಸೋಲು ಅನುಭವಿಸಿದ್ದು, ಇದೀಗ ಮಾಜಿ ಕ್ರಿಕೆಟಿಗರಿಗೆ ಸಲಹೆ ನೀಡಲು ದಾರಿ ಮಾಡಿಕೊಟ್ಟಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಮಿಚೆಲ್ ಸ್ಟಾರ್ಕ್ 6 ವಿಕೆಟ್ ಪಡೆದರೆ, ಪ್ಯಾಟ್ ಕಮ್ಮಿನ್ಸ್ ಐವರು ಬ್ಯಾಟರ್​​ಗಳನ್ನು ಪೆವಿಲಿಯನ್​ಗೆ ಕಳಿಸುವಲ್ಲಿ ಮೇಲುಗೈ ಸಾಧಿಸಿದರು. ಟೀಮ್ ಇಂಡಿಯಾ ಬ್ಯಾಟರ್​ಗಳು ಪ್ರತಿ ಪಂದ್ಯವನ್ನು ಆಕ್ರಮಣಕಾರಿಯಾಗಿ ಗೆಲ್ಲಲು ಸಾಧ್ಯವಿಲ್ಲ ಎಂದು ಹರ್ಭಜನ್ ಸಿಂಗ್​, ಚೇತೇಶ್ವರ್ ಪೂಜಾರ ಅಭಿಪ್ರಾಯಿಸಿದ್ದಾರೆ.

ಅಲ್ಲಿಗೆ ತಕ್ಕಂತೆ ಆಡಬೇಕು

“ನೀವು ಪ್ರತಿ ಬಾಲ್​ಗೂ ಹೊಡೆಯಲು ಸಾಧ್ಯವಿಲ್ಲ ಮತ್ತು ಆಕ್ರಮಣಕಾರಿ ಆಟವು ಆಸ್ಟ್ರೇಲಿಯಾದಲ್ಲಿ ನಿಮಗೆ ಸಹಾಯ ಮಾಡುವುದಿಲ್ಲ. ನೀವು ಬೌಲರ್‌ಗಳಿಗೆ ಗೌರವ ನೀಡುವುದರ ಜತೆಗೆ ನಿಮ್ಮ ಆಟದ ಮೇಲೆ ಬಲವಾದ ನಂಬಿಕೆ ಇಡಬೇಕು. ಇಲ್ಲಿ ನಾನು ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸಲು ಹೇಳುತ್ತಿಲ್ಲ. ಬದಲಿಗೆ ಪರಿಸ್ಥಿತಿಗಳು ಮತ್ತು ಸನ್ನಿವೇಶಗಳಿಗೆ ತಕ್ಕಂತೆ ಹೊಂದಿಕೊಳ್ಳಬೇಕು. ಟೆಸ್ಟ್ ಕ್ರಿಕೆಟ್‌ನಲ್ಲಿ ನೀವು ಒಂದೇ ಶೈಲಿಯಲ್ಲಿ ಬ್ಯಾಟ್ ಮಾಡಲು ಆಗಲ್ಲ. ತಂಡದಲ್ಲಿ ಸರಿಯಾದ ಪ್ಲ್ಯಾನಿಂಗ್ ಇರದೆ ಇರುವುದೇ ಬ್ಯಾಟಿಂಗ್ ಲೈನ್ ವಿಫಲವಾಗಲು ಕಾರಣ" ಎಂದು ಚೇತೇಶ್ವರ ಪೂಜಾರ ಹೇಳಿದ್ದಾರೆ.

ಆಕ್ರಮಣಕಾರಿಯಾಗಿ ಆಡುವುದು ಸರಿಯಲ್ಲ

''ಪೂಜಾರ ಅವರ ಮಾತನ್ನು ನಾನು ಕೂಡ ಒಪ್ಪುತ್ತೇನೆ. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ನೀವು ಅಬ್ಬರಿಸಲು ಸಾಧ್ಯವಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಲ್​ಗಳನ್ನು ಬಾರಿಸದೆ ಬಿಟ್ಟರೆ ಯಾವುದೇ ಲಾಸ್​ ಬ್ಯಾಟರ್​ಗಳಿಗಿಲ್ಲ. ನೀವು ಹೇಗಾದರೂ ಬ್ಯಾಟಿಂಗ್ ಮಾಡಿ. ಆದರೆ, ಪ್ರತಿ ಬಾರಿಯೂ ಆಕ್ರಮಣಕಾರಿಯಾಗಿ ಆಡುವುದು ಸರಿಯಲ್ಲ. ಟೆಸ್ಟ್ ಕ್ರಿಕೆಟ್ ಆಡುವುದು ಹೀಗಲ್ಲ. ನಮ್ಮ ಬ್ಯಾಟರ್‌ಗಳ ಶಾಟ್ ಆಯ್ಕೆ ನಿಜಕ್ಕೂ ಕಳಪೆಯಾಗಿತ್ತು" ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).