ಕಾನ್ಪುರ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ (Test Match) ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ರನ್ ಹೊಳೆಯೇ ಹರಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಭಿಮಾನಿಗಳ ಹಾಗೂ ಕ್ರೀಡಾ ಪಂಡಿತರ ನಿರೀಕ್ಷೆಯನ್ನು ಹುಸಿಯಾಗಿಸಿದ್ದ ವಿರಾಟ್ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿದ್ದರು. ಏಕದಿನ ವಿಶ್ವಕಪ್, ಐಪಿಎಲ್ ಹಾಗೂ ಟಿ-20 ತಂಡದ ಪರ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ವಿರಾಟ್ ಯಾಕೋ ಟೆಸ್ಟ್ ಮಾದರಿಯಲ್ಲಿ ರನ್ ಗಳಿಸಲು ತಿಣುಕಾಡುತ್ತಿದ್ದು, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
ಕಾನ್ಪುರದಲ್ಲಿ ಈಗಾಗಲೇ ಕಠಿಣ ಅಭ್ಯಾಸ ನಡೆಸುತ್ತಿರುವ ಟೀಮ್ ಇಂಡಿಯಾದ ಆಟಗಾರರು ಸರಣಿಯ ಎರಡನೇ ಪಂದ್ಯದಲ್ಲೂ ಭರ್ಜರಿ ಗೆಲುವು ಸಾಧಿಸುವ ಮುನ್ಸೂಚನೆ ನೀಡುತ್ತಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಮಾತ್ರ ಯಾಕೋ ತಮ್ಮ ಕಳಪೆ ಫಾರ್ಮ್ಅನ್ನು ಮುಂದುವರೆಸುವ ಸೂಚನೆ ನೀಡಿದ್ದು, ಇದಕ್ಕೆ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಎಸೆತವೇ ಕಾರಣವಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಇಂಡಿಯನ್ಸ್ ಎಕ್ಸ್ಪ್ರೆಸ್ ವರದಿ ಮಾಡಿರುವ ಪ್ರಕಾರ ನೆಟ್ಸ್ನಲ್ಲಿ ಅಭ್ಯಾಸ ಮಾಡುವಾಗ ವೇಗಿ ಜಸ್ಪ್ರೀತ್ ಬುಮ್ರಾ ಎಸೆದ 15 ಎಸೆತಗಳನ್ನು ಎದುರಿಸಿದ ವಿರಾಟ್ 4 ಬಾರಿ ಔಟಾಗಿದ್ದಾರೆ. ಇದನ್ನು ನೋಡಿದ ಬುಮ್ರಾ ಅಷ್ಟು ಎಸೆತಗಳನ್ನು ನಿಮ್ಮ ಮುಂದೆಯೇ ಎಸೆಯಲಾಗಿದೆ. ಕೊನೆಯ ಎಸೆತವನ್ನು ಶಾರ್ಟ್ ಲೆಗ್ ಆರಾಮಾಗಿ ಹಿಡಿಯಬಹುದಿತ್ತು. ನೀನೊಬ್ಬ ದಡ್ಡ ಎಂದು ಬುಮ್ರಾ ಕೊಹ್ಲಿಗೆ ಸಲಹೆ ನೀಡಿರುವ ಬಗ್ಗೆ ವರದಿಯಾಗಿದೆ.
ಸೆಪ್ಟೆಂಬರ್ 27ರಿಂದ ಸರಣಿಯ ಎರಡನೇ ಪಂದ್ಯ ಆರಂಭವಾಗಲಿದ್ದು, ಉಭಯ ತಂಡದ ಆಟಗಾರರು ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು, ಮಳೆಯಿಂದಾಗಿ ಸರಣಿಯ ಎರಡನೇ ಪಂದ್ಯ ರದ್ದಾದರೆ ಟ್ರೋಫಿ ಭಾರತದ ಪಾಲಾಗಲಿದೆ.