ಕ್ರೀಡೆ

ಅಹರ್ನಿಶಿ ಟೆಸ್ಟ್​ನಲ್ಲಿ ಶೂನ್ಯಕ್ಕೆ ಔಟ್​; ಬೇಡದ ದಾಖಲೆಗಳಿಗೆ ಕೊರಳೊಡ್ಡಿದ Yashasvi Jaiswal

ಅಡಿಲೇಡ್​: ಇಲ್ಲಿನ ಅಡಿಲೇಡ್​ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಹರ್ನಿಶಿ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿದ್ದು, 180 ರನ್​ಗಳಿಗೆ ಆಲೌಟ್​ ಆಗಿದೆ. ಇನ್ನೂ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ಮೂಲಕ ತಂಡಕ್ಕೆ ಆಸರೆಯಾಗಿದ್ದ ಯುವ ಆರಂಭಿಕ ಯಶಸ್ವಿ ಜೈಸ್ವಾಲ್​ (Yashasvi Jaiswal) ಎರಡನೇ ಪಂದ್ಯದಲ್ಲಿ ಶೂನ್ಯ ಸುತ್ತಿದ್ದು, ಬೇಡದ ದಾಖಲೆಗಳಿಗೆ ಕೊರಳೊಡಿದ್ದಾರೆ.

ಅಡಿಲೇಡ್‌ನಲ್ಲಿ ನಡೆಯುತ್ತಿರುವ ಅಹರ್ನಿಶಿ ಟೆಸ್ಟ್​ ಪಂದ್ಯದ ಮೊದಲ ಎಸೆತದಲ್ಲೇ ಗೋಲ್ಡನ್​ ಡಕ್​ ಆದ ಯಶಸ್ವಿ ಜೈಸ್ವಾಲ್​ (Yashasvi Jaiswal) ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಶೂನ್ಯಕ್ಕೆ ಔಟಾಗಿದ್ದಾರೆ. ಒಟ್ಟು ಮೂರು ಬಾರಿ ಶೂನ್ಯಕ್ಕೆ ಔಟಾಗಿರುವ ಯಶಸ್ವಿ ಜೈಸ್ವಾಲ್​ ಗೋಲ್ಡನ್ ಡಕ್​ ಆಗಿರುವುದು ಇದೇ ಮೊದಲು ಎಂದು ಹೇಳಲಾಗಿದೆ.

ಯಶಸ್ವಿ ಜೈಸ್ವಾಲ್ (Yashasvi Jaiswal) ಅವರು ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಮೊದಲ ಎಸೆತದಲ್ಲಿ ಔಟಾದ ವಿಶ್ವದ ಮೂರನೇ ಆರಂಭಿಕ ಆಟಗಾರ ಮತ್ತು ಭಾರತದ ಮೊದಲ ಆಟಗಾರ ಎಂಬ ಬೇಡದ ಅಪಕೀರ್ತಿಗೆ ಪಾತ್ರರಾಗಿದ್ದಾರೆ. ಅಹರ್ನಿಶಿ ಟೆಸ್ಟ್​ನಲ್ಲಿ ಯಶಸ್ವಿ ಜೈಸ್ವಾಲ್​ ಗೋಲ್ಡನ್ ಡಕ್​ಗೆ ಔಟಾದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು, ಆರ್ ಅಶ್ವಿನ್ 2020 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅಹರ್ನಿಶಿ ಟೆಸ್ಟ್​ನಲ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದರು.

ಚೇತೇಶ್ವರ ಪೂಜಾರ, ಪೃಥ್ವಿ ಶಾ, ಅಜಿಂಕ್ಯ ರಹಾನೆ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಅಶ್ವಿನ್, ಉಮೇಶ್ ಯಾದವ್ ಸೇರಿದಂತೆ 8 ಭಾರತೀಯ ಆಟಗಾರರು ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಇದೀಗ ಈ ಪಟ್ಟಿಗೆ ಯಶಸ್ವಿ ಜೈಸ್ವಾಲ್ ಕೂಡ ಸೇರ್ಪಡೆಯಾಗಿದ್ದಾರೆ. ಮೊದಲ ಎಸೆತದಲ್ಲೇ ಔಟಾಗುವ ಮೂಲಕ ಯಶಸ್ವಿ ಜೈಸ್ವಾಲ್​ (Yashasvi Jaiswal) ಬೇಡದ ದಾಖಲೆಗಳಿಗೆ ಕೊರಳೊಡ್ಡಿದ್ಧಾರೆ.