Rohit Sharma : ಮೆಲ್ಬೋರ್ನ್ ಟೆಸ್ಟ್ ಅಥವಾ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿದೆ. ನಾಥನ್ ಲಿಯಾನ್ (41) ಮತ್ತು ಸ್ಕಾಟ್ ಬೋಲ್ಯಾಂಡ್ (10) ಕ್ರೀಸ್‌ನಲ್ಲಿದ್ದಾರೆ. ಸದ್ಯ ಆಸೀಸ್ 333 ರನ್ ಮುನ್ನಡೆಯಲ್ಲಿದೆ. ವಾಸ್ತವವಾಗಿ, ಆಸೀಸ್ ಒಂದು ಹಂತದಲ್ಲಿ ಆಲೌಟ್ ಆಗಬೇಕಿತ್ತು. ನಾಲ್ಕನೇ ದಿನದಲ್ಲಿ ಟೀಮ್ ಇಂಡಿಯಾ ಆಟಗಾರ ಯಶಸ್ವಿ ಜೈಸ್ವಾಲ್ ಮೂರು ಕ್ಯಾಚ್‌ಗಳನ್ನು ಕೈಬಿಟ್ಟಿರುವುದು ಕೂಡ ಆಸೀಸ್‌ಗೆ ವರವಾಗಿ ಪರಿಣಮಿಸಿತು.
ಅದರಲ್ಲೂ ಆಕಾಶ್ ದೀಪ್ ಬೌಲಿಂಗ್‌ನಲ್ಲಿ 46 ರನ್ ಗಳಿಸಿದ್ದಾಗ ಸ್ಲಿಪ್ನಲ್ಲಿ ಮಾರ್ನಸ್ ಲಬುಶೇನ್ ನೀಡಿದ ಕ್ಯಾಚ್ ಅನ್ನು ಯಶಸ್ವಿ ಜೈಸ್ವಾಲ್ ಬಿಟ್ಟರು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಲಬುಶೇನ್ 70 ರನ್ ಗಳಿಸಿದರು. ಈ ಮೂಲಕ ತಂಡಕ್ಕೆ ಉತ್ತಮ ರನ್ ಕಾಣಿಕೆ ನೀಡಿದರು. ಅಲ್ಲದೆ, ಪ್ಯಾಟ್ ಕಮಿನ್ಸ್ ಕ್ಯಾಚ್ ಸಹ ಜೈಸ್ವಾಲ್ ಕೈಬಿಟ್ಟರು. ಪರಿಣಾಮ ಕಮಿನ್ಸ್ 41 ರನ್ ಗಳಿಸಿ ಮಿಂಚಿದರು.
ಆಕಾಶ್ ದೀಪ್ ಅವರ ಬೌಲಿಂಗ್‌ನಲ್ಲಿ ಜೈಸ್ವಾಲ್ ಅವರು ಲಬುಶೇನ್ ಕ್ಯಾಚ್ ಬಿಟ್ಟಾಗ ನಾಯಕ ರೋಹಿತ್ ಶರ್ಮ ತಾಳ್ಮೆ ಕಳೆದುಕೊಂಡರು. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಆದಾಗ್ಯೂ, ನೆಟ್ಟಿಗರು ಮತ್ತು ಆಸ್ಟ್ರೇಲಿಯಾದ ಅನೇಕ ಮಾಜಿ ಆಟಗಾರರು ರೋಹಿತ್ ಅವರ ನಡವಳಿಕೆಯನ್ನು ಟೀಕಿಸುತ್ತಿದ್ದಾರೆ.
ಆ ಸಮಯದಲ್ಲಿ ಯಶಸ್ವಿ ಜೈಸ್ವಾಲ್‌ಗೆ ನಾಯಕನ ಬೆಂಬಲದ ಅಗತ್ಯವಿತ್ತು ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕ್ ಹಸ್ಸಿ ಹೇಳಿದ್ದಾರೆ. ಯಾರೂ ಕ್ಯಾಚ್‌ಗಳನ್ನು ಬೇಕಂತಲೇ ಬಿಡುವುದಿಲ್ಲ. ನಿರ್ಣಾಯಕ ಹಂತದಲ್ಲಿ ಕ್ಯಾಚ್‌ಗಳನ್ನು ಬಿಟ್ಟಿದ್ದಕ್ಕೆ ಯಶಸ್ವಿ ಜೈಸ್ವಾಲ್‌ಗೆ ತುಂಬಾ ಬೇಸರವಾಗಿರಬೇಕು. ಈ ವೇಳೆ ತಂಡದ ಬೆಂಬಲ ಬೇಕಿತ್ತು. ಅದರಲ್ಲೂ ನಾಯಕನ ಕಾರ್ಯವೈಖರಿ ಮಹತ್ವದ್ದಾಗಿದೆ. ಯಶಸ್ವಿ ಜೈಸ್ವಾಲ್ ಅವರನ್ನು ಪ್ರೋತ್ಸಾಹಿಸಬೇಕೇ ಹೊರತು ಒತ್ತಡವನ್ನು ಹೇರಬಾರದು ಎಂದು ಮೈಕ್ ಹಸ್ಸಿ ಹೇಳಿದ್ದಾರೆ.
ಯಶಸ್ವಿ ಜೈಸ್ವಾಲ್ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವುದು ಬಹಳ ಮುಖ್ಯ ಎಂದು ಆಸ್ಟ್ರೇಲಿಯಾದ ಮಹಿಳಾ ನಾಯಕಿ ಅಲಿಸ್ಸಾ ಹೀಲಿ ಅಭಿಪ್ರಾಯಪಟ್ಟಿದ್ದಾರೆ. ಜೈಸ್ವಾಲ್ ಅವರು ಆರಂಭಿಕ ಬ್ಯಾಟ್ಸ್‌ಮನ್. ಹಾಗಾಗಿ ಚೇಸಿಂಗ್ ವೇಳೆ ಆತ್ಮವಿಶ್ವಾಸದಿಂದ ಮೈದಾನಕ್ಕೆ ಇಳಿಯುವ ವಾತಾವರಣ ನಿರ್ಮಾಣವಾಗಬೇಕು. ಆಗ ಮಾತ್ರ ತನ್ನ ಪ್ರತಿಭೆಯನ್ನು ಹೊರತರಲು ಸಾಧ್ಯವಾಗುತ್ತದೆ. ಇದರಿಂದ ತಂಡಕ್ಕೆ ಲಾಭವಾಗಲಿದೆ. ಪಂದ್ಯದ ನಂತರ ತಪ್ಪುಗಳತ್ತ ಗಮನ ಹರಿಸುವುದು ಒಳ್ಳೆಯದು ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಜೈಸ್ವಾಲ್‌ಗೆ ಧೈರ್ಯ ತುಂಬಿದರು. ಈ ನಡೆಯನ್ನು ಆಸ್ಟ್ರೇಲಿಯಾದ ಮಾಜಿ ಕೋಚ್ ಡ್ಯಾರೆನ್ ಲೆಹ್ಮನ್ ಶ್ಲಾಘಿಸಿದ್ದಾರೆ. ಪಂತ್ ಮಾಡಿದ್ದು ಸರಿ ಎಂದು ಹೇಳಿದ್ದಾರೆ. ಅಂತಹ ನಾಯಕತ್ವದ ಅಗತ್ಯವಿದೆ ಎಂದಿದ್ದಾರೆ. ತಪ್ಪುಗಳು ಸಂಭವಿಸುತ್ತವೆ. ಆದರೆ ತಂಡವಾಗಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಬಹಳ ಮುಖ್ಯ ಎಂದು ಹೇಳಿದ ಡ್ಯಾರೆನ್ ಲೆಹ್ಮನ್, ಈ ವಿಷಯಗಳನ್ನು ಇಲ್ಲಿಗೆ ಬಿಟ್ಟು ಯಶಸ್ವಿ ಅವರು ತಮ್ಮ ಆಟದತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. (ಏಜೆನ್ಸೀಸ್)