ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ನ್ಯೂಜಿಲೆಂಡ್ (NewZealand) ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಪ್ರವಾಸಿ ತಂಡವು ಮತ್ತೊಮ್ಮೆ ಮೇಲುಗೈ ಸಾಧಿಸಿದ್ದು, 294 ರನ್ಗಳ ಭರ್ಜರಿ ಮುನ್ನಡೆಯನ್ನು ಸಾಧಿಸಿದ್ದಾರೆ. ಮೊದಲ ದಿನದಾಟ ಪ್ರವಾಸಿ ತಂಡದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದ್ದ ಭಾರತ ತಂಡವು ಎರಡನೇ ದಿನದಾಟದ ಆರಂಭದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ 156 ರನ್ಗಳಿಗೆ ಆಲೌಟ್ ಆಯಿತು.
156 ರನ್ಗಳಿಗೆ ಆಲೌಟ್ ಆಗುವ ಮೂಲಕ ತವರಿನಲ್ಲಿ ಭಾರತ ತಂಡ ಮತ್ತೊಮ್ಮೆ ಮುಖಭಂಗವನ್ನು ಅನುಭವಿಸಬೇಕಾಯಿತು. ಇದೆಲ್ಲದರ ನಡುವ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ (Yashasvi Jaiswal) ಹೊಸ ದಾಖಲೆಯೊಂದನ್ನು ಬರೆದಿದ್ದು, ತವರು ನೆಲದಲ್ಲಿ ತಮ್ಮ ಸಾಧನೆಯನ್ನು ಮುಂದುವರೆಸಿದ್ದಾರೆ.
ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ (Yashasvi Jaiswal) 30 ರನ್ಗಳನ್ನು ಬಾರಿಸಿ ಗ್ಲೆನ್ ಫಿಲಿಪ್ಸ್ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಒಂದು ಕ್ಯಾಲೆಂಡರ್ ವರ್ಷದಲ್ಲಿ ಒಂದು ಸಾವಿರ ರನ್ ಪೂರೈಸಿದ ಭಾರತದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಈ ದಾಖಲೆ ದಿಲೀಪ್ ವೆಂಗ್‌ಸರ್ಕರ್ (Dilip Vengsarkar) ಹೆಸರಿನಲ್ಲಿತ್ತು. ದಿಲೀಪ್ 23 ವರ್ಷದವರಿದ್ದಾಗ ಈ ಸಾಧನೆ ಮಾಡಿದ್ದು, 22 ವರ್ಷದ ಜೈಸ್ವಾಲ್ ಇದೀಗ ಹಿರಿಯ ಕ್ರಿಕೆಟಿಗನ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಟೆಸ್ಟ್ ಸರಣಿಗಳು ನಡೆಯಲಿದ್ದು, ಜೈಸ್ವಾಲ್ (Yashas Jaiswal) ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಳ್ಳುವ ಅವಕಾಶವನ್ನು ಹೊಂದಿದ್ದಾರೆ. 2010ರಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಒಂದೇ ವರ್ಷದಲ್ಲಿ 1562 ರನ್ ಗಳಿಸುವ ಮೂಲಕ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.