ಕ್ರೀಡೆ

ತಾಯ್ತನದ ಬಳಿಕ ಟೋಕಿಯೊ ಒಲಿಂಪಿಕ್ಸ್​ನತ್ತ ಗೀತಾ ಪೋಗಟ್​ ಗಮನ

ನವದೆಹಲಿ: ಭಾರತ ಮಹಿಳಾ ಕುಸ್ತಿಯಲ್ಲಿ ಹೊಸ ಸಂಚಲನವನ್ನೇ ಮೂಡಿಸಿದ ಕುಸ್ತಿಪಟು ಗೀತಾ ಪೋಗಟ್​. ತಂದೆ ಮಹಾವೀರ ಅವರ ಕನಸಿನ ಪ್ರಕಾರ ಕುಸ್ತಿ ಅಖಾಡಕ್ಕೆ ಪ್ರವೇಶಿಸಿದ ಗೀತಾ ಪೋಗಟ್​ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಅವರ ಕುಸ್ತಿ ಕುಟುಂಬದ ಸಾಧನೆಯ ಬಗ್ಗೆ ಬಾಲಿವುಡ್​ನಲ್ಲಿ ಈಗಾಗಲೆ 'ದಂಗಲ್​' ಎಂಬ ಸಿನಿಮಾವೂ ಬಂದುಹೋಗಿದೆ. ಆದರೆ ಗೀತಾ ಪೋಗಟ್​ ಕಳೆದ ಕೆಲ ಸಮಯದಿಂದ ಅಖಾಡದಿಂದ ದೂರ ಉಳಿದಿದ್ದರು. ಇದಕ್ಕೆ ಕಾರಣ ತಾಯ್ತನ. ಕಳೆದ ಡಿಸೆಂಬರ್​ನಲ್ಲಿ ಪುತ್ರ ಅರ್ಜುನ್​ಗೆ ಜನ್ಮ ನೀಡಿರುವ ಅವರು ಈಗ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಕರೊನಾ ಹಾವಳಿಯಿಂದಾಗಿ ಟೋಕಿಯೊ ಒಲಿಂಪಿಕ್ಸ್​ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವುದು ಗೀತಾ ಪೋಗಟ್​ಗೆ ವರದಾನವಾಗಿ ಪರಿಣಮಿಸಿದೆ. ತಾಯ್ತನದ ಬಿಡುವಿನ ಬಳಿಕ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸುವತ್ತ ಅವರು ಗಮನಹರಿಸಿದ್ದಾರೆ. 'ಒಲಿಂಪಿಕ್ಸ್​ ಮುಂದೂಡಿಕೆಯಾಗಿರುವುದರಿಂದ ನನಗೆ ಅದರಲ್ಲಿ ಸ್ಪರ್ಧಿಸುವ ಹಂಬಲ ಹೆಚ್ಚಾಗಿದೆ. ಒಂದು ವರ್ಷದ ಕಾಲಾವಕಾಶ ನನಗೆ ಆಯ್ಕೆ ಟ್ರಯಲ್ಸ್​ ಮತ್ತು ಅರ್ಹತಾ ಕೂಟಗಳಿಗೆ ಸಿದ್ಧತೆ ನಡೆಸಲು ಸೂಕ್ತವೆನಿಸಿದೆ' ಎಂದು 31 ವರ್ಷದ ಗೀತಾ ಹೇಳಿದ್ದಾರೆ. ಅವರು 2010ರ ದೆಹಲಿ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಸ್ವರ್ಣ ಪದಕ ಜಯಿಸಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ದಾಖಲೆಯನ್ನೂ ಅವರು ಬರೆದಿದ್ದರು.

ಪೈಲ್ವಾನ್​ ಪವನ್​ಕುಮಾರ್​ ಅವರನ್ನು 2016ರಲ್ಲಿ ವಿವಾಹವಾಗಿದ್ದ ಗೀತಾ ಪೋಗಟ್​, ತಾಯ್ತನದ ಸಮಯದಲ್ಲಿ ಸಾಕಷ್ಟು ತೂಕ ಹೆಚ್ಚಿಸಿಕೊಂಡಿದ್ದಾರೆ. ಕಳೆದ ವರ್ಷ ಮೇನಲ್ಲಿ 66 ಕೆಜಿ ತೂಕ ಇದ್ದ ಅವರು ಈಗ 83 ಕೆಜಿ ಆಗಿದ್ದಾರೆ. ಈ ಅಖಾಡಕ್ಕೆ ಮರಳುವ ಮುನ್ನ ಈ ತೂಕ ಇಳಿಸಿಕೊಳ್ಳುವ ಸವಾಲು ಕೂಡ ಅವರ ಮುಂದಿದೆ.

'ಪ್ರೆಗ್ನನ್ಸಿ ಸಮಯದಲ್ಲಿ ಸಹಜವಾಗಿಯೇ ನನ್ನ ದೇಹತೂಕ ಹೆಚ್ಚಿದೆ. ಮತ್ತೆ ಫಿಟ್​ ಆಗುವುದು ಈಗ ನನ್ನ ಮೊದಲ ಆದ್ಯತೆಯಾಗಿದೆ. ಬಳಿಕ ಅರ್ಹತಾ ಕೂಟಗಳತ್ತ ಗಮನಹರಿಸುವೆ. ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಟೋಕಿಯೊ ಒಲಿಂಪಿಕ್ಸ್​ ಟಿಕೆಟ್​ ಸಂಪಾದಿಸಲು ಪ್ರಯತ್ನಿಸುವೆ' ಎಂದು 2012ರ ವಿಶ್ವ ಚಾಂಪಿಯನ್​ಷಿಪ್​ ಕಂಚು ವಿಜೇತೆ ಹೇಳಿದ್ದಾರೆ. ಅವರ ಸಹೋದರಿಯರಾದ ಬಬಿತಾ ಪೋಗಟ್​, ರಿತು ಪೋಗಟ್​, ವಿನೇಶ್​ ಪೋಗಟ್​ ಕೂಡ ಕುಸ್ತಿಪಟುಗಳಾಗಿದ್ದಾರೆ.

'ನಾನು ಕೆಲ ಸಮಯದ ಹಿಂದೆಯೇ ಫಿಟ್ನೆಸ್​ ಟ್ರೇನಿಂಗ್​ ಆರಂಭಿಸಿದ್ದೆ. ಆದರೆ ನಾನಿನ್ನೂ ಮಗುವಿಗೆ ಹಾಲುಣಿಸಬೇಕಾಗಿರುವ ಕಾರಣ, ಸ್ವಲ್ಪ ತಡ ಮಾಡುವಂತೆ ವೈದ್ಯರು ಸೂಚಿಸಿದ್ದರು. ನಮ್ಮಂಥ ಕುಸ್ತಿಪಟುಗಳು ಲಘುವಾದ ವರ್ಕ್​ಔಟ್​ ಮಾಡಿದರೆ ಸಾಲದು. ಆದರೂ ಕಳೆದ ಕೆಲ ಸಮಯದಿಂದ ನಾನು ಸ್ವಲ್ಪ ಸ್ವಲ್ಪ ವ್ಯಾಯಾಮಗಳನ್ನು ಮಾತ್ರ ಮಾಡುತ್ತಿದ್ದೇನೆ. ಎದುರಾಳಿ ಇಲ್ಲದೆ ಕುಸ್ತಿ ತರಬೇತಿ ಪಡೆದುಕೊಳ್ಳುವುದು ಸಾಧ್ಯವಾಗದು. ಮನೆಯೊಳಗೆ ಸಾಧ್ಯವಿರುವ ಎಲ್ಲ ವ್ಯಾಯಾಮಗಳನ್ನೂ ಮಾಡುತ್ತಿದ್ದೇನೆ' ಎಂದು ಗೀತಾ ವಿವರಿಸಿದ್ದಾರೆ. ಅವರು ಮೊದಲಿಗೆ 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. 2015ರಲ್ಲಿ ಕೊನೆಯದಾಗಿ 58 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು.

ತಾವು ಅಖಾಡದಿಂದ ದೂರ ಉಳಿದ ಕಳೆದ ಕೆಲ ವರ್ಷಗಳ ಅವಧಿಯಲ್ಲಿ ಭಾರತದ ಕುಸ್ತಿ ಸ್ಪರ್ಧೆಯ ಗುಣಮಟ್ಟ ಸಾಕಷ್ಟು ಬದಲಾಗಿದೆ ಎಂದು ಒಪ್ಪಿಕೊಳ್ಳುವ ಗೀತಾ, 'ಕಳೆದ 4-5 ವರ್ಷಗಳಲ್ಲಿ ಸ್ಪರ್ಧೆಯ ಮಟ್ಟ ಪ್ರಗತಿಯಾಗಿದೆ. ಮುಂಬರುವ ವಿಶ್ವ ಚಾಂಪಿಯನ್​ಷಿಪ್​ಗೆ ದೇಶದ ನಾಲ್ವರು ಕುಸ್ತಿಪಟುಗಳು ಈಗಾಗಲೆ ಅರ್ಹತೆ ಸಂಪಾದಿಸಿದ್ದಾರೆ. ಇದು ಒಲಿಂಪಿಕ್ಸ್​ಗೆ ಭಾರತ ಎಷ್ಟರ ಮಟ್ಟಿಗೆ ಸಜ್ಜಾಗಿದೆ ಎಂಬುದನ್ನು ತೋರಿಸುತ್ತಿದೆ. ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಪದಕ ಗೆಲ್ಲುವುದು ಭಾರಿ ಸವಾಲಿನ ಕೆಲಸ. 2019ರ ಸಾಧನೆಯನ್ನು ನಾವು ಪುನರಾವರ್ತಿಸಿದರೆ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಉತ್ತಮ ಸಾಧನೆಯ ನಿರೀಕ್ಷೆ ಇಡಬಹುದು' ಎಂದು ಗೀತಾ ಹೇಳಿದ್ದಾರೆ. ಆಮೀರ್​ ಖಾನ್​ ನಾಯಕರಾಗಿ ನಟಿಸಿದ್ದ 'ದಂಗಲ್'​ ಸಿನಿಮಾದಲ್ಲಿ ಪ್ರಮುಖವಾಗಿದ್ದ ಗೀತಾ ಪೋಗಟ್​ ಪಾತ್ರವನ್ನು ಫಾತಿಮಾ ಸನಾ ಶೇಕ್​ ನಿರ್ವಹಿಸಿದ್ದರು.