ಕ್ರೀಡೆ

WPL 2024: ಕಳೆದ ಬಾರಿ ಅನ್​ಸೋಲ್ಡ್​ ಆಗಿದ್ದ ಕಶ್ವಿಗೆ ಈ ಬಾರಿ ಬಂಪರ್​: ಕನ್ನಡತಿ ವೃಂದಾಗೂ ಕುಲಾಯಿಸಿದ ಲಕ್​!

ನವದೆಹಲಿ: ಮಹಿಳಾ ಐಪಿಎಲ್​ ಎಂದೇ ಖ್ಯಾತವಾಗಿರುವ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಎರಡನೇ ಆವೃತ್ತಿಯ ಹರಾಜು ಪ್ರಕ್ರಿಯೆ ಇಂದು ಮುಂಬೈ ಮಹಾನಗರದಲ್ಲಿ ನಡೆದಿದ್ದು, ಅಚ್ಚರಿಯ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಕಳೆದ ಬಾರಿ ಸೋಲ್ಡೌಟ್​ ಆಗದೇ ಉಳಿದಿದ್ದ ಚಂಡೀಗಢ ಮೂಲದ ಕಶ್ವಿ ಗೌತಮ್​ ಮತ್ತು ಬೆಂಗಳೂರಿನ ವೃಂದಾ ದಿನೇಶ್​ ದಾಖಲೆ ಮೊತಕ್ಕೆ ಬಿಕರಿಯಾಗಿದ್ದಾರೆ.

ಆಲ್​ರೌಂಡರ್​ ಆಟಗಾರ್ತಿ ಕಶ್ವಿ ಗೌತಮ್​ 2 ಕೋಟಿ ರೂಪಾಯಿ ಗುಜರಾತ್​ ಜೈಂಟ್ಸ್​ ತಂಡದ ಪಾಲಾಗಿದ್ದಾರೆ. ಅಲ್ಲದೆ, ದಾಖಲೆ ಮೊತ್ತಕ್ಕೆ ಬಿಕರಿಯಾದ ಅನ್​ಕ್ಯಾಪ್ಡ್​ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಕಾಶ್ವೀ ಮುಖಬೆಲೆ 10 ಲಕ್ಷ ರೂ. ಇತ್ತು. ಯುಪಿ ವಾರಿಯರ್​ ಮತ್ತು ಗುಜರಾತ್​ ಜೈಂಟ್ಸ್​ ನಡುವೆ ನಡೆದ ತೀರ್ವ ಪೈಪೋಟಿಯಲ್ಲಿ ಅಂತಿಮವಾಗಿ ಕಾಶ್ವೀ ಗುಜರಾತ್​ ತಂಡವನ್ನು ಸೇರಿಕೊಂಡಿದ್ದಾರೆ.

ಕಳೆದ ಬಾರಿ ಸೇಲಾಗದೆ ಉಳಿದಿದ್ದ ಮತ್ತೊಬ್ಬ ಆಟಗಾರ್ಟಿ ಕನ್ನಡತಿ ವೃಂದಾ ದಿನೇಶ್​ ಕೂಡ 1.3 ಕೋಟಿ ರೂ. ದಾಖಲೆ ಬೆಲೆಗೆ ಈ ಬಾರಿ ಯುಪಿ ವಾರಿಯರ್ಸ್​ ತಂಡದ ಪಾಲಾಗಿದ್ದಾರೆ. ಸೋಲ್ಡೌಟ್​ ಆಗದೇ ಉಳಿದಿದ್ದ ಈ ಇಬ್ಬರು ಆಟಗಾರ್ತಿಯರಿಗೆ ಈ ಬಾರಿ ಬಂಪರ್​ ಒಡೆದಿದೆ. ವೃಂದಾ ಮತ್ತು ಕಶ್ವಿ ಇತ್ತೀಚೆಗೆ ಇಂಗ್ಲೆಂಡ್ ಎ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಎ ತಂಡದಲ್ಲಿ ಕಾಣಿಸಿಕೊಂಡಿದ್ದರು.

ಕಶ್ವಿ ಗೌತಮ್​ ದೇಶೀಯ ಕ್ರಿಕೆಟ್​ನಲ್ಲಿ ತಮ್ಮ ಅಮೋಘ ಪ್ರದರ್ಶನದಿಂದ ಅನೇಕರನ್ನು ಮೆಚ್ಚಿಸಿದ್ದಾರೆ. ಚಂಡೀಗಢದವರಾದ ಕಾಶ್ವೀ 2020ರ ಫೆಬ್ರವರಿಯಲ್ಲಿ ನಡೆದ ದೇಶೀಯ U-19 ಏಕದಿನ ಪಂದ್ಯದಲ್ಲಿ ಎಲ್ಲ ಹತ್ತು ವಿಕೆಟ್‌ಗಳನ್ನು ಪಡೆದಾಗ ಮೊದಲ ಬಾರಿಗೆ ಸುದ್ದಿಯಾದರು. ಈ ಸಾಧನೆಯ ನಂತರ ಕಾಶ್ವೀ ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ಭವಿಷ್ಯದ ಸೂಪರ್‌ಸ್ಟಾರ್ ಎಂದು ಕರೆಸಿಕೊಂಡಿದ್ದಾರೆ.

ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು 1.80 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದು, ಕಶ್ವಿ ಅವರನ್ನೂ ಸಹ ಮೀರಿಸಿದ್ದಾರೆ. ಆರಂಭಿಕ ಹರಾಜಿನಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗರು ಅತಿ ಹೆಚ್ಚು ಬಿಡ್‌ಗಳನ್ನು ಆಕರ್ಷಿಸಿದರು, ಆಲ್‌ರೌಂಡರ್ ಅನ್ನಾಬೆಲ್ ಸದರ್‌ಲ್ಯಾಂಡ್‌ರನ್ನು 2 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಖರೀದಿಸಿದರೆ, ಬ್ಯಾಟರ್ ಫೋಬೆ ಲಿಚ್‌ಫೀಲ್ಡ್‌ರನ್ನು 1 ಕೋಟಿ ರೂ.ಗೆ ಗುಜರಾತ್ ಜೈಂಟ್ಸ್‌ಗೆ ಮಾರಾಟವಾದರು.

ಆರ್‌ಸಿಬಿ ತಂಡ ಇಂಗ್ಲೆಂಡ್‌ನ ಕೇಟ್ ಕ್ರಾಸ್ ಅವರನ್ನು 30 ಲಕ್ಷ ರೂ. ಮತ್ತು 37 ವರ್ಷದ ಭಾರತದ ಸ್ಪಿನ್ನರ್ ಏಕ್ತಾ ಬಿಶ್ತ್ ಅವರನ್ನು 60 ಲಕ್ಷ ರೂ.ಗೆ ಖರೀದಿಸಿತು. (ಏಜೆನ್ಸೀಸ್​)