ಕ್ರೀಡೆ

ಹಾಲಿ ವಿಶ್ವಕಪ್​ನಲ್ಲಿ ಮೊದಲ ಪಂದ್ಯದ ಆತಿಥ್ಯಕ್ಕೆ ಸಜ್ಜಾದ ಈಡನ್​ ಗಾರ್ಡನ್ಸ್​; ಇಂದು ಬಾಂಗ್ಲಾ-ನೆದರ್ಲೆಂಡ್​ ಫೈಟ್​

ಕೋಲ್ಕತ: ಆಡಿರುವ ಮೊದಲ 5 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದು 4ರಲ್ಲಿ ಸೋತಿರುವ ತಂಡಗಳಾದ ಬಾಂಗ್ಲಾದೇಶ ಮತ್ತು ನೆದರ್ಲೆಂಡ್​ ತಂಡಗಳು ಏಕದಿನ ವಿಶ್ವಕಪ್​ನಲ್ಲಿ ಶನಿವಾರ 2ನೇ ಗೆಲುವು ಒಲಿಸಿಕೊಳ್ಳಲು ಪೈಪೋಟಿ ನಡೆಸಲಿವೆ. ಸೆಮಿಫೈನಲ್​ ಸಹಿತ 5 ಪಂದ್ಯಗಳಿಗೆ ಆತಿಥ್ಯ ವಹಿಸಬೇಕಿರುವ ಈಡನ್​ ಗಾರ್ಡನ್ಸ್​ ಅಂಗಣದಲ್ಲಿ ಇದು ಹಾಲಿ ವಿಶ್ವಕಪ್​ನ ಮೊದಲ ಪಂದ್ಯವಾಗಿದೆ.

ಶಕೀಬ್​ ಅಲ್​ ಹಸನ್​ ಪಡೆ ಆರಂಭಿಕ ಪಂದ್ಯದ ಗೆಲುವಿನ ಬಳಿಕ ಸತತ 4 ಸೋಲಿನಿಂದ ಕಂಗೆಟ್ಟಿದ್ದರೆ, ನೆದರ್ಲೆಂಡ್​ ತಂಡ ಕೂಡ 4 ಪಂದ್ಯ ಸೋತಿದ್ದರೂ, ದಣ ಆಫ್ರಿಕಾ ಎದುರು ಸಾಧಿಸಿದ ಅಚ್ಚರಿಯ ಗೆಲುವಿನ ಬಲ ಹೊಂದಿದೆ. ಉಭಯ ತಂಡಗಳು ಸೆಮೀಸ್​ ರೇಸ್​ನಲ್ಲಿ ಇರದಿದ್ದರೂ, ಈ ಪಂದ್ಯದ ಗೆಲುವು ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ತಪ್ಪಿಸಿಕೊಳ್ಳುವ ಅವಕಾಶ ಸೃಷ್ಟಿಸಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ 399 ರನ್​ ಬಿಟ್ಟುಕೊಟ್ಟಿದ್ದರೂ, ಮಹಮದುಲ್ಲಾ ಶತಕದಿಂದಾಗಿ ಬಾಂಗ್ಲಾ ಸೋಲಿನಲ್ಲಿ ಮಾನ ಉಳಿಸಿಕೊಂಡಿತ್ತು. ಟೂರ್ನಿ ಆರಂಭಕ್ಕೆ ಮುನ್ನ ಒಳಜಗಳದಿಂದಾಗಿ ಸುದ್ದಿಯಾಗಿದ್ದ ಬಾಂಗ್ಲಾಗೆ ಬಳಿಕ ನಾಯಕ ಶಕೀಬ್​ ಗಾಯದ ಸಮಸ್ಯೆ ಹಿನ್ನಡೆ ತಂದಿತ್ತು.

ಕಳೆದೆರಡು ಪಂದ್ಯಗಳಲ್ಲಿ ಶ್ರೀಲಂಕಾ, ಆಸ್ಟ್ರೆಲಿಯಾ ಎದುರು ಸೋತಿರುವ ನೆದರ್ಲೆಂಡ್​, ಮತ್ತೆ ಚೇತೋಹಾರಿ ನಿರ್ವಹಣೆ ತೋರುವ ತವಕದಲ್ಲಿದೆ. ಹಾಲಿ ವಿಶ್ವಕಪ್​ ಶುರುವಾಗಿ 23 ದಿನ ಮತ್ತು 27 ಪಂದ್ಯಗಳು ನಡೆದ ಬಳಿಕ ಈಡನ್​ ಗಾರ್ಡನ್ಸ್​ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ.

ಏಕದಿನ ಮುಖಾಮುಖಿ: 2

ನೆದರ್ಲೆಂಡ್​: 1, ಬಾಂಗ್ಲಾದೇಶ: 1

ವಿಶ್ವಕಪ್​ ಮುಖಾಮುಖಿ: 1

ಬಾಂಗ್ಲಾದೇಶ: 1, ನೆದರ್ಲೆಂಡ್​: 0

ಆರಂಭ: ಮಧ್ಯಾಹ್ನ 2.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​