ಬೆಂಗಳೂರು: ಅಕ್ಟೋಬರ್ 5ರಿಂದ ಭಾರತದಲ್ಲಿ ನಡೆಯಲಿರುವ 13ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯ ಬಹುಮಾನ ಮೊತ್ತವನ್ನು ಐಸಿಸಿ ಶುಕ್ರವಾರ ಪ್ರಕಟಿಸಿದೆ. ಇದರನ್ವಯ ಚಾಂಪಿಯನ್ ತಂಡ 33.18 ಕೋಟಿ ರೂ. (4 ದಶಲಕ್ಷ ಡಾಲರ್) ಬಹುಮಾನ ಪಡೆಯಲಿದ್ದರೆ, ರನ್ನರ್ಅಪ್ ತಂಡ 16.58 ಕೋಟಿ ರೂ. (2 ದಶಲಕ್ಷ ಡಾಲರ್) ಗಳಿಸಲಿದೆ.
ಸೆಮಿಫೈನಲ್ನಲ್ಲಿ ಸೋತ 2 ತಂಡಗಳು ತಲಾ 6.63 ಕೋಟಿ ರೂ. ಪಡೆಯಲಿವೆ. ನಾಕೌಟ್ ಹಂತಕ್ಕೇರಲು ವಿಫಲವಾದ ಉಳಿದ 6 ತಂಡಗಳು ತಲಾ 82.91 ಲಕ್ಷ ರೂ.ಗೆ ತೃಪ್ತಿಪಡಲಿವೆ. ಲೀಗ್ ಹಂತದ ಪ್ರತಿ ಪಂದ್ಯದಲ್ಲಿ ಗೆಲುವು ಕಾಣುವ ತಂಡ ತಲಾ 33.16 ಲಕ್ಷ ರೂ. ಪಡೆಯಲಿವೆ. 48 ಪಂದ್ಯಗಳ ಟೂರ್ನಿಯಲ್ಲಿ ಒಟ್ಟಾರೆ 82.91 ಕೋಟಿ ರೂ. ಬಹುಮಾನ ಮೊತ್ತ ಹಂಚಿಕೆಯಾಗಲಿದೆ.
ನವೆಂಬರ್ 19ರವರೆಗೆ ಭಾರತದ 10 ತಾಣಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 5ರಂದು ಅಹಮದಾಬಾದ್ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ಮುಖಾಮುಖಿಯೊಂದಿಗೆ ಟೂರ್ನಿಗೆ ಚಾಲನೆ ದೊರೆಯಲಿದೆ. ಅದಕ್ಕೆ ಹಿಂದಿನ ದಿನ ವರ್ಣರಂಜಿತ ಸಮಾರಂಭದೊಂದಿಗೆ ಟೂರ್ನಿಯ ಆರಂಭವನ್ನು ಘೋಷಿಸಲಾಗುತ್ತದೆ.