ಕ್ರೀಡೆ

ವಿಶ್ವ ಬ್ಯಾಡ್ಮಿಂಟನ್​ನಲ್ಲಿ ಉಪಾಂತ್ಯಕ್ಕೇರಿ ಪದಕ ಖಚಿತಪಡಿಸಿಕೊಂಡ ಎಚ್​ಎಸ್​ ಪ್ರಣಯ್​

ಕೋಪನ್​ಹೇಗನ್​ (ಡೆನ್ಮಾರ್ಕ್​): ಭಾರತದ ಎಚ್​ಎಸ್​ ಪ್ರಣಯ್​ ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಷಿಪ್​ನ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಉಪಾಂತ್ಯಕ್ಕೇರಿದ್ದಾರೆ. ವಿಶ್ವ ನಂ. 1 ಹಾಗೂ ಹಾಲಿ ಚಾಂಪಿಯನ್​ ವಿಕ್ಟರ್​ ಅಕ್ಸೆಲ್​ಸನ್​ಗೆ ತವರು ಅಂಗಣದಲ್ಲೇ ಆಘಾತಕಾರಿ ಸೋಲುಣಿಸಿದ ಪ್ರಣಯ್​ಗೆ ಪದಕ ಖಾತ್ರಿಯಾಗಿದೆ. ಪುರುಷರ ಡಬಲ್ಸ್​ ವಿಭಾಗದ ಕ್ವಾರ್ಟರ್​ೈನಲ್​ನಲ್ಲಿ ಸಾತ್ವಿಕ್​ ಸಾಯಿರಾಜ್​ ಮತ್ತು ಚಿರಾಗ್​ ಶೆಟ್ಟಿ ಜೋಡಿ ಆಘಾತಕಾರಿ ಸೋಲು ಕಂಡು ನಿರಾಸೆ ಅನುಭವಿಸಿತು.

ಪ್ರಣಯ್​ ಶುಕ್ರವಾರ ನಡೆದ ಎಂಟರ ಟ್ಟದ ಪಂದ್ಯದಲ್ಲಿ ಅಕ್ಸೆಲ್​ಸನ್​ ವಿರುದ್ಧ 13-21, 21-15, 21-16ರಿಂದ ದಿಟ್ಟ ಗೆಲುವು ಸಾಧಿಸಿ ಇತಿಹಾಸ ಬರೆದರು. ಅವರು ಟೂರ್ನಿಯಲ್ಲಿ ಸವಾಲು ಜೀವಂತ ಉಳಿಸಿಕೊಂಡಿರುವ ಏಕೈಕ ಭಾರತೀಯರೂ ಆಗಿದ್ದಾರೆ.

ಕೇರಳದ ಆಟಗಾರ ಎಚ್​ಎಸ್​ ಪ್ರಣಯ್​ ಭಾರತಕ್ಕೆ ವಿಶ್ವ ಚಾಂಪಿಯನ್​ಷಿಪ್​ ಇತಿಹಾಸದಲ್ಲಿ 14ನೇ ಪದಕ ಗೆದ್ದುಕೊಟ್ಟಿದ್ದಾರೆ. ಈ ಮುನ್ನ ಪಿವಿ ಸಿಂಧು 5 ಮತ್ತು ಸೈನಾ ನೆಹ್ವಾಲ್​ 2 ಪದಕ ಗೆದ್ದಿದ್ದರೆ, ಕಿಡಂಬಿ ಶ್ರೀಕಾಂತ್​, ಲಕ್ಷ$್ಯ ಸೇನ್​, ಸಾಯಿ ಪ್ರಣಿತ್​, ಪ್ರಕಾಶ್​ ಪಡುಕೋಣೆ ತಲಾ 1 ಪದಕ ಗೆದ್ದಿದ್ದಾರೆ. ಡಬಲ್ಸ್​ನಲ್ಲಿ ಸಾತ್ವಿಕ್​ ಸಾಯಿರಾಜ್​-ಚಿರಾಗ್​ ಶೆಟ್ಟಿ ಮತ್ತು ಜ್ವಾಲಾ ಗುಟ್ಟಾ-ಅಶ್ವಿನಿ ಪೊನ್ನಪ್ಪ ಜೋಡಿ ಪದಕ ಗೆದ್ದ ಸಾಧನೆ ಮಾಡಿದೆ.

ಸಾತ್ವಿಕ್​-ಚಿರಾಗ್​ಗೆ ನಿರಾಸೆ: ವಿಶ್ವ ನಂ. 2 ಸಾತ್ವಿಕ್​-ಚಿರಾಗ್​ ಜೋಡಿ 11ನೇ ಶ್ರೇಯಾಂಕಿತ ಡೆನ್ಮಾರ್ಕ್​ನ ಕಿಮ್​ ಆಸ್ಟುಪ್​ ಮತ್ತು ಆಂಡರ್ಸ್​ ಸ್ಕರುಪ್​ ಜೋಡಿಯ ವಿರುದ್ಧ 18-21, 19-21 ನೇರಗೇಮ್​ಗಳಿಂದ ಪರಾಭವಗೊಂಡಿತು. 2021ರಲ್ಲಿ ಕಂಚು ಗೆದ್ದಿದ್ದ ಸಾತ್ವಿಕ್​-ಚಿರಾಗ್​ ಈ ಪಂದ್ಯ ಗೆದ್ದರೆ ಪದಕ ಖಚಿತಪಡಿಸಿಕೊಳ್ಳುವ ಅವಕಾಶ ಹೊಂದಿದ್ದರು.