ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಉದ್ಯಾನನಗರಿಯ ಜನತೆಗೆ ಮುಂಜಾನೆಯಿಂದಲೇ ಜೋಶ್ ತುಂಬುವ ಓಟದ ಹಬ್ಬಕ್ಕೆ ವೇದಿಕೆ ಸಜ್ಜಾಗಿದೆ. 17ನೇ ಆವೃತ್ತಿಯ ಟಿಸಿಎಸ್ ವಿಶ್ವ 10ಕೆ ಬೆಂಗಳೂರು ಓಟ ಭಾನುವಾರ ನಡೆಯಲಿದೆ. 1.80 ಕೋಟಿ ರೂ. ಬಹುಮಾನ ಮೊತ್ತವನ್ನು ಹೊಂದಿರುವ ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ರೇಸ್ನಲ್ಲಿ ಈ ಬಾರಿ ಸುಮಾರು 35 ಓಟಗಾರರು ಭಾಗವಹಿಸುವ ನಿರೀಕ್ಷೆ ಇದೆ. ಆತಿಥೇಯ ಭಾರತದೊಂದಿಗೆ ಕೀನ್ಯಾ, ಉಗಾಂಡ, ಇಥಿಯೋಪಿಯಾ ಮುಂತಾದ ಆಫ್ರಿಕಾ ದೇಶದ ಎಲೀಟ್ ಓಟಗಾರರು ಕೂಟಕ್ಕೆ ಮೆರುಗು ತುಂಬಲಿದ್ದಾರೆ.
ಭಾರತೀಯ ಸೇನೆ, ಕರ್ನಾಟಕ ಮತ್ತು ಕೇರಳ ಉಪಪ್ರದೇಶದ ಬೆಂಬಲದೊಂದಿಗೆ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಪರೇಡ್ ಮೈದಾನದ ಹೊರಗೆ ಓಟ ಆರಂಭ ಮತ್ತು ಮುಕ್ತಾಯವನ್ನು ಕಾಣಲಿದೆ. ನಗರದ ಪ್ರಮುಖ ಹೆಗ್ಗುರುತುಗಳಾದ ಕಬ್ಬನ್ ಪಾರ್ಕ್, ಹಲಸೂರು ಕೆರೆ ಮತ್ತು ಚಿನ್ನಸ್ವಾಮಿ ಸ್ಟೇಡಿಯಂ ಮಾರ್ಗವಾಗಿ ರೇಸ್ ಹಾದು ಹೋಗಲಿದೆ.
ಮಜಾ ರನ್ ಉದ್ದಕ್ಕೂ ಚಿಯರ್ ವಲಯಗಳನ್ನು ಸ್ಥಾಪಿಸಲಾಗುತ್ತದೆ. ವಿಧಾನಸೌಧ ಬಳಿಯ ಪ್ರಮುಖ ಸ್ಥಳಗಳು ಸಂಗೀತ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಪ್ರದರ್ಶನದ ಕೇಂದ್ರಗಳಾಗಿ ರೂಪಾಂತರಗೊಳ್ಳಲಿವೆ. ಕ್ಲಬ್ಗಳು, ಎನ್ಜಿಒಗಳು, ಶಾಲೆಗಳು, ಕಾಪೋರ್ರೇಟ್ ತಂಡಗಳು ಮತ್ತು ಸಮುದಾಯ ಸಮೂಹಗಳು ಸೇರಿದಂತೆ ಉತ್ಸಾಹಿ ಗುಂಪುಗಳು ಮಾರ್ಗವನ್ನು ಸಾಲುಗಟ್ಟಿ ನಿಲ್ಲಲಿವೆ. ಈ ಮೂಲಕ ಓಟದ ಉತ್ಸಾಹವನ್ನು ಹೆಚ್ಚಿಸುವ ಮತ್ತು ಪ್ರತಿ ಹೆಜ್ಜೆಯಲ್ಲೂ ಓಟಗಾರರನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸಲಾಗುತ್ತದೆ.
ಫೋರ್ಟಿಸ್ನಿಂದ ವೈದ್ಯಕಿಯ ಸೌಲಭ್ಯ: ವಿಶ್ವ 10ಕೆ ಓಟದ ಹೋಲ್ಡಿಂಗ್ ಪ್ರದೇಶದಲ್ಲಿ 1 ವೈದ್ಯಕಿಯ ನಿಲ್ದಾಣ ನಿರ್ಮಿಸಲಾಗಿದೆ. ರೇಸ್ ಮಾರ್ಗದಲ್ಲಿ 5 ವೈದ್ಯಕಿಯ ಕೇಂದ್ರ ಸ್ಥಾಪಿಸಲಾಗುವುದು. ಮಾಣೆಕ್ ಷಾ ಪರೇಡ್ ಮೈದಾನದೊಳಗೆ 1 ವೈದ್ಯಕಿಯ ಬೇಸ್ ಕ್ಯಾಂಪ್ ಇರಲಿದೆ. ತ್ವರಿತ ಪ್ರಕ್ರಿಯೆಗಾಗಿ 10 ಬೈಕುಗಳಲ್ಲಿ ವೈದ್ಯರು ತಿರುಗಲಿದ್ದಾರೆ. ರೇಸ್ ದಿನದಂದು ಒಟ್ಟು 290 ವೈದ್ಯಕಿಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
ಭಾನುವಾರದ ಓಟದ ಸ್ಪರ್ಧೆಯ ವೇಳಾಪಟ್ಟಿ
ಬೆಳಗ್ಗೆ: 5.30: ವಿಶ್ವ 10ಕೆ ಎಲೀಟ್ ಮಹಿಳೆಯರ ವಿಭಾಗ.
ಬೆಳಗ್ಗೆ 6.08: ವಿಶ್ವ 10ಕೆ ಎಲೀಟ್ ಪುರುಷರ ವಿಭಾಗ.
ಬೆಳಗ್ಗೆ 6.10: ಮುಕ್ತ 10ಕೆ ವಿಭಾಗ
ಬೆಳಗ್ಗೆ 8.00: ಅಂಕವಿಲಕರ ವಿಭಾಗದ 3 ಕಿಮೀ ಓಟ.
ಬೆಳಗ್ಗೆ 8.05: ಹಿರಿಯ ನಾಗರಿಕರ 3 ಕಿಮೀ ಓಟ.
ಬೆಳಗ್ಗೆ 8.30: ಮಜಾ ರನ್ (4.2 ಕಿಮೀ).
*ನೇರಪ್ರಸಾರ: ಸೋನಿ ಸ್ಪೋರ್ಟ್ಸ್1, ಎಚ್ಡಿ.
ದಲೀಲಾ ರಾಯಭಾರಿ
ಅಮೆರಿಕದ ಅವಳಿ ಒಲಿಂಪಿಕ್ಸ್ ಚಾಂಪಿಯನ್ ಓಟಗಾರ್ತಿ ದಲೀಲಾ ಮುಹಮ್ಮದ್ ವಿಶ್ವ 10ಕೆ ಓಟದ ಪ್ರಚಾರ ರಾಯಭಾರಿಯಾಗಿದ್ದಾರೆ. ಈಗಾಗಲೆ ಬೆಂಗಳೂರಿಗೆ ಆಗಮಿಸಿರುವ 34 ವರ್ಷದ ದಲೀಲಾ, ಭಾನುವಾರ ಓಟಗಾರರನ್ನು ಹುರಿದುಂಬಿಸಲಿದ್ದಾರೆ.
ಎಲೀಟ್ ಅಥ್ಲೀಟ್ಸ್ ಆಕರ್ಷಣೆ
ಉಗಾಂಡದ ಅವಳಿ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ ಜೋಶುವಾ ಚೆಪ್ಟೆಗಿ, ಕೀನ್ಯಾದ ವಿನ್ಸೆಂಟ್ ಲಂಗಟ್, ಇಥಿಯೋಪಿಯಾದ ಸ್ಟೀನ್ ಕಿಸ್ಸಾ, ಗೇಬ್ರಿಯಲ್ ಜೆರಾಲ್ಡ್ ಗೇ, ಕೀನ್ಯಾದ ಓಟಗಾರ್ತಿ ಸಿಂಟಿಯಾ ಚೆಪ್ಗೆನೊ, ಎರಿಟ್ರಿಯನ್ನ ರಾಹೆಲ್ ಡೇನಿಯಲ್, ಇಥಿಯೋಪಿಯಾದ ಅಸ್ಸಪರೆಚ್ ಆನ್ಲೆ ಎಲೀಟ್ ಪುರುಷ-ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಲಿರುವ ಪ್ರಮುಖ ತಾರೆಯರಾಗಿದ್ದಾರೆ. ಭಾರತೀಯ ಎಲೀಟ್ ವಿಭಾಗದಲ್ಲಿ ಕಿರಣ್ ಮಾತ್ರೆ, ಸಾವನ್ ರ್ಬವಲ್, ಅಭಿಷೇಲ್ ಪಾಲ್, ಕವಿತಾ ಯಾದವ್, ಸಂಜೀವನಿ ಜಾಧವ್, ಪೂಲನ್ ಪಾಲ್ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಪುಣೆ ಜಾಗ್ಲರ್ ಕೇತನ್ ಆಕರ್ಷಣೆ
ವಿಶ್ವ 10ಕೆ ಮುಕ್ತ ಓಟ ವಿಭಾಗದಲ್ಲಿ ಪುಣೆಯ ಜಾಗ್ಲರ್ ಕೇತನ್ ಅಭೋಂಕರ್ ಮೂರು ಚೆಂಡುಗಳನ್ನು ಜಾಗ್ಲಿಂಗ್ ಮಾಡುವ ಮೂಲಕ ಓಡಲಿದ್ದಾರೆ. ಬರೀ ಓಡುವುದು ಮಾತ್ರವಲ್ಲದೆ ಜಾಗ್ಲಿಂಗ್ ಮೂಲಕವೇ ಅವರು ರೇಸ್ ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದಾರೆ. ಅವರು ಜಾಗ್ಲಿಂಗ್ ಮೂಲಕ 10ಕೆ ಓಟ ಪೂರೈಸಿದ ದೇಶದ ಮೊದಲಿಗರಾಗಿದ್ದಾರೆ. 2015ರಲ್ಲಿ ಓಟಲು ಆರಂಭಿಸಿದ ಅವರು ಇದುವರೆಗೆ 100ಕ್ಕೂ ಅಧಿಕ 10ಕೆ ಓಟಗಳನ್ನು ಪೂರ್ಣಗೊಳಿಸಿದ್ದಾರೆ. "ಲಾಕ್ಡೌನ್ ಸಮಯದಲ್ಲಿ ಕುಟುಂಬದೊಂದಿಗೆ ಕ್ರಿಕೆಟ್ ಆಡುವಾಗ ನಾನು ಆಕಸ್ಮಿಕವಾಗಿ ಜಾಗ್ಲಿಂಗ್ ಅನ್ನು ಕಂಡುಕೊಂಡೆ. ನನಗೆ ಸ್ವಾಭಾವಿಕವಾಗಿಯೇ ಈ ಸಾಮರ್ಥ್ಯವಿದೆ ಎಂದು ಅರಿತುಕೊಂಡೆ. ನಂತರ ಅಂತಾರಾಷ್ಟ್ರೀಯ ಜಾಗ್ಲಿಂಗ್ ಮಾಡುವವರಿಂದ ಪ್ರೇರಿತನಾಗಿ, ಜಾಗ್ಲಿಂಗ್ ಮಾಡುವಾಗ ಓಡಲು ತರಬೇತಿ ಪಡೆದೆ. 5ಕೆ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಜಾಗ್ಲಿಂಗ್ ಮೂಲಕ ಓಡಿದೆ. ಜನರ ಸಕಾರಾತ್ಮಕ ಬೆಂಬಲ ನನಗೆ ಇದರಲ್ಲಿ ಮುಂದುವರಿಯಲು ಪ್ರೇರಣೆ ನೀಡಿತು' ಎಂದು ಸಾಫ್ಟ್ವೇರ್ ವೃತ್ತಿಪರರಾಗಿರುವ ಅಭೋಂಕರ್ ಹೇಳಿದ್ದಾರೆ.