ಕ್ರೀಡೆ

ಭಾರತ ವಿರುದ್ಧ ಮೂರನೇ ಟೆಸ್ಟ್‌ಗೆ ಮುನ್ನ ಆತಿಥೇಯ ಇಂಗ್ಲೆಂಡ್‌ಗೆ ಆಘಾತ!

ಲೀಡ್ಸ್: ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಭಾರತ ತಂಡದ ವಿರುದ್ಧ ಬುಧವಾರದಿಂದ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದರಿಂದ 2ನೇ ಟೆಸ್ಟ್ ಪಂದ್ಯದ ಸೋಲಿನ ಬಳಿಕ ಗೆಲುವಿನ ಹಾದಿಗೆ ಮರಳುವ ಹಂಬಲದಲ್ಲಿರುವ ಆತಿಥೇಯ ಇಂಗ್ಲೆಂಡ್‌ಗೆ ಮತ್ತಷ್ಟು ಹಿನ್ನಡೆ ಎದುರಾಗಿದೆ.

ಲಾರ್ಡ್ಸ್‌ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಭುಜಕ್ಕೆ ಗಾಯಮಾಡಿಕೊಂಡಿದ್ದ 31 ವರ್ಷದ ಮಾರ್ಕ್ ವುಡ್ ಅದರಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರು ತಂಡದ ಜತೆಗಿದ್ದು, ಪುನಶ್ಚೇತನದಲ್ಲಿ ಭಾಗವಹಿಸಲಿದ್ದಾರೆ. 4ನೇ ಟೆಸ್ಟ್‌ಗೆ ಮುನ್ನ ವುಡ್ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ.

ಲಾರ್ಡ್ಸ್ ಟೆಸ್ಟ್‌ನಲ್ಲಿ 5 ವಿಕೆಟ್ ಕಬಳಿಸಿದ್ದ ಮಾರ್ಕ್ ವುಡ್, ಬದಲಿಗೆ ಯುವ ವೇಗಿ ಸಾದಿಕ್ ಮಹಮೂದ್ 3ನೇ ಟೆಸ್ಟ್ ಆಡುವ ನಿರೀಕ್ಷೆ ಇದೆ. ಸರಣಿಯಲ್ಲಿ ಈಗಾಗಲೆ ಕೆಲ ಪ್ರಮುಖ ಆಟಗಾರರ ಗೈರು ಇಂಗ್ಲೆಂಡ್‌ಗೆ ಹಿನ್ನಡೆ ತಂದಿದೆ. ವೇಗಿ ಜೋಫ್ರಾ ಆರ್ಚರ್ ಗಾಯದಿಂದಾಗಿ ಸರಣಿಗೆ ಅಲಭ್ಯರಾಗಿದ್ದರೆ, ಮತ್ತೋರ್ವ ವೇಗಿ ಸ್ಟುವರ್ಟ್ ಬ್ರಾಡ್ ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿದ್ದರು. ವೇಗದ ಬೌಲಿಂಗ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮಾನಸಿಕ ಆರೋಗ್ಯಕ್ಕಾಗಿ ಕ್ರಿಕೆಟ್‌ನಿಂದ ಅನಿರ್ದಿಷ್ಟಾವಧಿಗೆ ಬಿಡುವು ಪಡೆದಿದ್ದಾರೆ.