Renuka Singh Thakur : ಹಿಂದೆ ಒಂದು ಕಾಲವಿತ್ತು ಆಗ ಹೆಣ್ಣು ಮಕ್ಕಳನ್ನು ದುರ್ಬಲರಂತೆ ನೋಡುತ್ತಿದ್ದರು. ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ ಎನ್ನುತ್ತಿದ್ದರು. ಒಂಟಿಯಾಗಿ ಓಡಾಡಲು ಹೆಣ್ಣು ಮಕ್ಕಳು ಹೆದರುತ್ತಿದ್ದರು. ಅಲ್ಲದೆ, ಹಿರಿಯರ ಮುಂದೆ ನಿಂತುಕೊಳ್ಳುವಂತೆಯೇ ಇರಲಿಲ್ಲ. ಆದರೆ, ಈಗ ಕಾಲ ಬದಲಾಗಿದೆ. ಪುರುಷರಷ್ಟೇ ಮಹಿಳೆ ಕೂಡ ಸಶಕ್ತಳು ಅನ್ನೋದನ್ನು ನಿರೂಪಿಸಿದ್ದಾರೆ. ಅಡುಗೆ ಮನೆಗೂ ಸೈ ಆಗಸದಲ್ಲಿ ವಿಮಾನ ಓಡಿಸಲು ಸೈ ಎನ್ನುತ್ತಿದ್ದಾರೆ. ಅಷ್ಟೇ ಏಕೆ ದೇಶಕ್ಕೆ ಅಪಾಯ ಬಂದಾಗ ಬಂದೂಕು ಹಿಡಿದು ರಕ್ಷಣೆಗೂ ಸಿದ್ಧ ಎಂಬ ಸಂದೇಶ ಸಾರುತ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಏಕದಿನ ಮಹಿಳಾ ವಿಶ್ವಕಪ್ನಲ್ಲಿ ನಮ್ಮ ನಾರಿ ಪಡೆ ಹೊಸ ಮೈಲಿಗಲ್ಲು ಸೃಷ್ಟಿಸಿರುವುದು.
ಅಂದಹಾಗೆ, ಯಾವುದೇ ಸಾಧನೆ ಸುಮ್ಮನೆ ಬರುವುದಿಲ್ಲ. ಅದಕ್ಕಾಗಿ ಕಠಿಣ ಪರಿಶ್ರಮ ಇರಬೇಕು. ಅಷ್ಟೇ ಅಲ್ಲ, ಒಬ್ಬರ ಸಾಧನೆ ಹಿಂದೆ ಇನ್ನೊಬ್ಬರ ತ್ಯಾಗವು ಕೂಡ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಮೊನ್ನೆಯಷ್ಟೇ ಏಕದಿನ ವಿಶ್ವಕಪ್ ಗೆದ್ದ ನಮ್ಮ ಮಹಿಳಾ ತಂಡವನ್ನು ನಾವೆಲ್ಲ ಮನಸಾರೆ ಹೊಗಳುತ್ತಿದ್ದೇವೆ. ಸಾಮಾಜಿಕ ಜಾಲತಾಣ ಓಪನ್ ಮಾಡಿದ್ರೆ ಸಾಕು ನಮ್ಮ ಭಾರತೀಯ ಮಹಿಳಾ ಕ್ರಿಕೆಟಿಗರ ವಿಡಿಯೋಗಳೇ ರಾರಾಜಿಸುತ್ತಿವೆ. ಈ ಹಿಂದೆ ಮಹಿಳಾ ಕ್ರಿಕೆಟ್ಗೆ ಅಷ್ಟೊಂದು ಕ್ರೇಜ್ ಇರಲಿಲ್ಲ. ವಿಶ್ವಕಪ್ ಗೆದ್ದಿದ್ದೇ ತಡ ಮಹಿಳಾ ಕ್ರಿಕೆಟ್ ಕ್ರೇಜ್ ಗಗನಕ್ಕೆ ಚಿಮ್ಮಿದೆ. ಭಾರತಕ್ಕೆ ಚೊಚ್ಚಲ ಮಹಿಳಾ ವಿಶ್ವಕಪ್ ತಂದುಕೊಟ್ಟ ನಮ್ಮ ಮಹಿಳೆಯರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂಥದ್ದೊಂದು ಮೆಚ್ಚುಗೆ ಪಡೆಯಲು ನಮ್ಮ ನಾರಿಯರು ಸಾಕಷ್ಟು ದಿನಗಳನ್ನು ಕಾದಿದ್ದಾರೆ. ಅಲ್ಲದೆ, ಅವರ ಸಾಧನೆಯ ಹಿಂದಿದ್ದ ಸವಾಲುಗಳು ಈಗ ಜನರಿಗೆ ಅರ್ಥವಾಗುತ್ತಿದೆ. ನಮ್ಮ ಮಹಿಳಾಮಣಿಗಳ ಹಿಂದೆ ಎಷ್ಟೋ ನೋವಿನ ಹಾಗೂ ತ್ಯಾಗದ ಕತೆ ಇದೆ ಎಂಬುದನ್ನು ನಾವು ಮರೆಯಬಾರದು. ನಾವೀಗ ಒಬ್ಬರ ಮನಮುಟ್ಟುವ ಕತೆಯನ್ನು ತಿಳಿದುಕೊಳ್ಳೋಣ.
ಭಾನುವಾರ (ನ.02) ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ನಮ್ಮ ಮಹಿಳಾ ತಂಡ ಭರ್ಜರಿ ಯಶಸ್ಸು ಗಳಿಸಿ, ಚೊಚ್ಚಲ ಬಾರಿ ಟ್ರೋಫಿ ಎತ್ತಿ ಹಿಡಿಯಿತು. ಈ ಐತಿಹಾಸಿಕ ಗೆಲುವಿನಲ್ಲಿ ಸ್ಟಾರ್ ವೇಗಿ ರೇಣುಕಾ ಸಿಂಗ್ ಠಾಕೂರ್ ಪ್ರಮುಖ ಪಾತ್ರ ವಹಿಸಿದ್ದನ್ನು ನಾವು ಮರೆಯುವಂತಿಲ್ಲ. ಫೈನಲ್ ಪಂದ್ಯದಲ್ಲಿ ರೇಣುಕಾ ಅವರು ಯಾವುದೇ ವಿಕೆಟ್ ಪಡೆಯದಿದ್ದರು ಕೂಡ ಉತ್ತಮವಾಗಿ ಬೌಲಿಂಗ್ ಮಾಡಿದರು. ಪವರ್ ಪ್ಲೇನಲ್ಲಿ ಚೆಂಡನ್ನು ಸ್ವಿಂಗ್ ಮಾಡುವ ಮೂಲಕ ಆಫ್ರಿಕಾದ ಬ್ಯಾಟ್ಸ್ವುಮೆನ್ಗಳನ್ನು ಕಾಡಿದರು. ಡೆತ್ ಓವರ್‌ಗಳಲ್ಲಿ ತಮ್ಮ ಪೇಸ್ ಬೌಲಿಂಗ್ ಮೂಲಕವೂ ರೇಣುಕಾ ಉತ್ತಮ ಪ್ರದರ್ಶನ ನೀಡಿದರು.
ಈ ಪಂದ್ಯಾವಳಿಯಲ್ಲಿ ರೇಣುಕಾ ಅವರು ಮೂರು ವಿಕೆಟ್‌ಗಳನ್ನು ಕಬಳಿಸಿದರು. ರೇಣುಕಾ ಅವರ ಯಶಸ್ಸಿನ ಹಿಂದೆ ಅವರ ತಾಯಿ ಸುನೀತಾ ಅವರ ಕಠಿಣ ಪರಿಶ್ರಮವಿದೆ. ತಂದೆ ಕೆಹರ್ ಸಿಂಗ್ ಠಾಕೂರ್, ರೇಣುಕಾ ಅವರು ಚಿಕ್ಕವರಿದ್ದಾಗಲೇ ನಿಧನರಾದರು. ಆದರೂ ಧೃತಿಗೆಡದ ತಾಯಿ ಸುನೀತಾ ತಮ್ಮ ಮಕ್ಕಳನ್ನು ತಾವೇ ನೋಡಿಕೊಂಡರು.
ಕೆಹರ್ಗೆ ಕ್ರಿಕೆಟ್ ಅಂದರೆ ತುಂಬಾ ಇಷ್ಟ. ತಮ್ಮ ಮಕ್ಕಳಲ್ಲಿ ಒಬ್ಬರನ್ನು ಕಬಡ್ಡಿ ಆಟಗಾರ ಅಥವಾ ಕ್ರಿಕೆಟಿಗರಾಗಿ ನೋಡಬೇಕೆಂದು ಕನಸು ಕಂಡಿದ್ದರು. ಇಂದು ಕೇಹರ್ ಸಿಂಗ್ ನಮ್ಮೊಂದಿಗೆ ಇಲ್ಲದಿದ್ದರೂ, ನಮ್ಮ ಮಗಳು ಆ ಕನಸನ್ನು ನನಸಾಗಿಸಿದ್ದಾಳೆ. ನನಗೆ ತುಂಬಾ ಸಂತೋಷವಾಗಿದೆ. ನನಗೆ ಮಾತು ಬರುತ್ತಿಲ್ಲ. ರೇಣುಕಾಳಿಗೆ ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಒಲವು ಇದೆ. ಅವಳು ಶಾಲಾ ದಿನಗಳಲ್ಲಿ ಹುಡುಗರೊಂದಿಗೆ ಕ್ರಿಕೆಟ್ ಆಡುತ್ತಿದ್ದಳು. ಮರದ ಬ್ಯಾಟ್ ಮತ್ತು ಬಟ್ಟೆಯಿಂದ ಮಾಡಿದ ಚೆಂಡನ್ನು ಹಿಡಿದು ರಸ್ತೆಬದಿಯಲ್ಲಿ ಆಟವಾಡುತ್ತಿದ್ದಳು. ಫೈನಲ್ ಪಂದ್ಯಕ್ಕೂ ಮೊದಲು ನಾನು ಅವಳೊಂದಿಗೆ ಮಾತನಾಡಿದೆ. ಇಂದು (ಫೈನಲ್‌ನಲ್ಲಿ) ನಿಮಗಾಗಿ ಅಲ್ಲ, ದೇಶಕ್ಕಾಗಿ ಆಟವಾಡಿ ಮತ್ತು ವಿಶ್ವಕಪ್ ಗೆಲ್ಲುವಂತೆ ನಾನು ಅವಳಿಗೆ ಹೇಳಿದ್ದೆ. ನಮ್ಮ ಹುಡುಗಿ ಇಂದು ಈ ಹಂತ ತಲುಪಿರುವುದು ನನಗೆ ತುಂಬಾ ಸಂತೋಷವಾಗಿದೆ. ಎಲ್ಲಾ ಹುಡುಗಿಯರು ಈ ರೀತಿ ಮುಂದುವರಿಯಬೇಕು. ನಾನು ಆ ದೇವರನ್ನು ಪ್ರಾರ್ಥಿಸುತ್ತೇನೆ ಎಂದು ರೇಣುಕಾ ಅವರ ತಾಯಿ ಸುನೀತಾ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ರೇಣುಕಾ ಅವರ ತಂದೆ ಕೆಹರ್ ಸಿಂಗ್ ಠಾಕೂರ್ ಹಿಮಾಚಲ ಪ್ರದೇಶ ರಾಜ್ಯ ನೀರಾವರಿ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆದಾಗ್ಯೂ, ಕೇಹರ್ ಸಿಂಗ್ ಠಾಕೂರ್, ರೇಣುಕಾ ಮೂರು ವರ್ಷದವಳಿದ್ದಾಗ ನಿಧನರಾದರು. ಕೇಹರ್ಗೆ ಕ್ರಿಕೆಟ್ ಎಂದರೆ, ತುಂಬಾ ಇಷ್ಟವಾಗಿದ್ದರಿಂದ ತಮ್ಮ ಮಗನಿಗೆ ಭಾರತೀಯ ಸ್ಟಾರ್ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಹೆಸರನ್ನು ಇಟ್ಟರು. ಆದಾಗ್ಯೂ, ವಿನೋದ್ ಠಾಕೂರ್ ಕೂಡ ಕ್ರಿಕೆಟಿಗನಾಗುವ ಕನಸು ಕಂಡಿದ್ದರು. ಆದರೆ, ವಿನೋದ್ ತನ್ನ ಸಹೋದರಿಗಾಗಿ ತನ್ನ ಕನಸನ್ನು ತ್ಯಜಿಸಿದರು. ಆರ್ಥಿಕ ತೊಂದರೆಗಳಿಂದಾಗಿ, ವಿನೋದ್ ಠಾಕೂರ್ ತನ್ನ ತಾಯಿಗೆ ರೇಣುಕಾಳನ್ನು ತನ್ನ ಬದಲು ಕ್ರಿಕೆಟ್ ಅಕಾಡೆಮಿಗೆ ಸೇರುವಂತೆ ಸೂಚಿಸಿದರು.
ಆದಾಗ್ಯೂ, ರೇಣುಕಾ ಅವರ ಪ್ರತಿಭೆಯನ್ನು ಗುರುತಿಸಿದವರು ಅವರ ಮಾವ ಭೂಪಿಂದರ್ ಠಾಕೂರ್. ರೇಣುಕಾ ಅವರನ್ನು ಎಲ್ಲಾ ರೀತಿಯಲ್ಲೂ ಬೆಂಬಲಿಸುತ್ತಿದ್ದರು ಎಂದು ಅವರ ತಾಯಿ ಸುನೀತಾ ಸ್ಪಷ್ಟಪಡಿಸಿದರು. ಭೂಪಿಂದರ್, ರೇಣುಕಾ ಅವರನ್ನು ಧರ್ಮಶಾಲಾ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು. ಅಲ್ಲಿಂದ ಅವರ ಕ್ರಿಕೆಟ್ ವೃತ್ತಿಜೀವನ ಪ್ರಾರಂಭವಾಯಿತು ಎಂದು ತಾಯಿ ಸುನಿತಾ ಅವರು ಹೇಳಿದರು. (ಏಜೆನ್ಸೀಸ್)