ಏಷ್ಯನ್​ ಗೇಮ್ಸ್ 
ಕ್ರೀಡೆ

ಸಿಂಹಿಣಿಯರ ಘರ್ಜನೆ ಅಡಗಿಸಿದ ಹರ್ಮನ್​ ಪಡೆ! ಏಷ್ಯನ್​ ಗೇಮ್ಸ್ ಕ್ರಿಕೆಟ್​ ವಿಭಾಗದಲ್ಲಿ ಭಾರತಕ್ಕೆ ಚಿನ್ನ | Asian Games

ಲಂಕಾ ಬೌಲರ್​ಗಳನ್ನು ಬೆಂಡೆತ್ತಿದ ಮಂಧಾನ (79 ರನ್​, 45 ಎಸೆತ) ಆಕರ್ಷಕ ಅರ್ಧಶತಕ ಬಾರಿಸಿದರು. ಇನ್ನು ಶಫಾಲಿ (48 ರನ್​, 29 ಎಸೆತ) ಅರ್ಧಶತಕದಿಂದ ವಂಚಿತರಾದರು.

ಮೋಹನ್​ ಶೆಟ್ಟಿ

Asian Games: ಪ್ರಸಕ್ತ ಆತಿಥೇಯ ಜಪಾನ್​ನಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದಲ್ಲಿ ಇಂದು ನಡೆದ ಭಾರತ ಮತ್ತು ಶ್ರೀಲಂಕಾ ಮಹಿಳೆಯರ ಟಿ20 ಕ್ರಿಕೆಟ್​ ಅಂತಿಮ ಹಣಾಹಣಿಯಲ್ಲಿ ಟೀಮ್ ಇಂಡಿಯಾ ವನಿತೆಯರು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ ನಾಯಕಿ ಹರ್ಮನ್​ಪ್ರೀತ್​ ಕೌರ್​, ಲಂಕಾ ಪಡೆಗೆ ಬೌಲಿಂಗ್ ಮಾಡುವಂತೆ ಆಹ್ವಾನಿಸಿದರು. ಎಂದಿನಂತೆ ಆರಂಭಿಕ ಬ್ಯಾಟ್ಸ್​ವುಮನ್​ಗಳಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅವರಿಂದ ಸ್ಫೋಟಕ ಓಪನಿಂಗ್​ ಸಿಕ್ಕಿತು. ಲಂಕಾ ಬೌಲರ್​ಗಳನ್ನು ಬೆಂಡೆತ್ತಿದ ಮಂಧಾನ (79 ರನ್​, 45 ಎಸೆತ) ಆಕರ್ಷಕ ಅರ್ಧಶತಕ ಬಾರಿಸಿದರು. ಇನ್ನು ಶಫಾಲಿ (48 ರನ್​, 29 ಎಸೆತ) ಅರ್ಧಶತಕದಿಂದ ವಂಚಿತರಾದರು.

ಇವರ ಬೆನ್ನಲ್ಲೇ ಬಂದ ನಾಯಕಿ ಹರ್ಮನ್​ಪ್ರೀತ್​ ಕೌರ್​ (19 ರನ್​, 17 ಎಸೆತ) ಹೆಚ್ಚು ಕಾಲ ಕ್ರೀಸ್​ನಲ್ಲಿ ಉಳಿಯಲಿಲ್ಲ. ಮೂರು ವಿಕೆಟ್​ ಕಳೆದುಕೊಂಡ ಭಾರತಕ್ಕೆ ರಿಚಾ ಘೋಷ್​ (ಅಜೇಯ 49 ರನ್​, 22 ಎಸೆತ) ಅವರ ಸ್ಫೋಟಕ ಬ್ಯಾಟಿಂಗ್ ತಂಡದ ಒಟ್ಟು ಮೊತ್ತವನ್ನು 200ರ ಗಡಿದಾಟಿಸಲು ಸಹಾಯ ಮಾಡಿತು. ಅಲ್ಲಿಗೆ, 20 ಓವರ್​ ಅಂತ್ಯಕ್ಕೆ 3 ವಿಕೆಟ್​ ಕಳೆದುಕೊಂಡ ಟೀಮ್ ಇಂಡಿಯಾ 216 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಲಂಕಾ ಪಡೆಗೆ ಆರಂಭಿಕ ಹಂತದಲ್ಲೇ ಮುಗ್ಗರಿಸಿತು.

ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ಬೌಲಿಂಗ್ ದಾಳಿಗೆ ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಎನ್ನುವಂತೆ ವಿಕೆಟ್​ ಕಳೆದುಕೊಂಡು ಗುರಿ ತಲುಪಲು ಸಂಪೂರ್ಣವಾಗಿ ಎಡವಿದ ಲಂಕಾ ಮಹಿಳೆಯರು, ಕೇವಲ 69 ರನ್​ಗೆ ಆಲ್​ಔಟ್ ಆಯಿತು. ಈ ಮೂಲಕ 15.4 ಓವರ್​ಗೆ ಮುಕ್ತಾಯಗೊಂಡ ಫೈನಲ್​ನಲ್ಲಿ ಟೀಮ್ ಇಂಡಿಯಾ ವನಿತೆಯರು 147 ರನ್​ಗಳ ಭಾರಿ ಅಂತರದಿಂದ ಭರ್ಜರಿ ಜಯ ಗಳಿಸಿ, ಚಿನ್ನದ ಪದಕಕ್ಕೆ ಮುತ್ತಿಟ್ಟಿತು. 

ಇದನ್ನೂ ಓದಿ: 46 ಕೋಟಿ ರೂ. ಮೌಲ್ಯದ ಚೆಕ್​ ವಂಚನೆ ಆರೋಪ: ಸಹೋದರಿ ರಾಧಾಗೆ ಖಡಕ್ ವಾರ್ನಿಂಗ್ ಕೊಟ್ಟ ನಟಿ ಅಂಬಿಕಾ | Radha vs Ambika

ತಂಡದ ಪರ ಬೌಲಿಂಗ್​ನಲ್ಲಿ ಕಮಾಲ್​ ಮಾಡಿ ದೀಪ್ತಿ ಶರ್ಮಾ ಮೂರು ವಿಕೆಟ್​ ಕಬಳಿಸಿದರೆ, ಶಫಾಲಿ ವರ್ಮಾ, ಶ್ರೇಯಾಂಕಾ ಪಾಟೀಲ್​, ಶ್ರೀಚರಣಿ ತಲಾ ಎರಡು ವಿಕೆಟ್​ ಪಡೆದಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ ಶಫಾಲಿ ಆಟಕ್ಕೆ ಭಾರತೀಯ ಕ್ರಿಕೆಟ್​ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.