ಕ್ರೀಡೆ

ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ ರಾಜ್ಯದ ರಕ್ಷಿತಾಗೆ ಸ್ವರ್ಣ, ಶರತ್​ಗೆ ಬೆಳ್ಳಿ ಪದಕ

ಹಾಂಗ್​ರೆೌ: ಕರ್ನಾಟಕದ ಅಂಧ ಓಟಗಾರ್ತಿ ರಕ್ಷಿತಾ ರಾಜು ಏಷ್ಯನ್​ ಪ್ಯಾರಾ ಗೇಮ್ಸ್​ನ ಮಹಿಳೆಯರ 1,500 ಮೀ. ಓಟದ ಟಿ11 ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಕೋಚ್​ ಹಾಗೂ ಗೈಡ್​ ರಾಹುಲ್​ ಮಾರ್ಗದರ್ಶನದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಭಾರತದ ಮತ್ತೋರ್ವ ಓಟಗಾರ್ತಿ ಲಲಿತಾ ಕೆ. ಈ ವಿಭಾಗದಲ್ಲಿ ಬೆಳ್ಳಿ ಜಯಿಸಿದರು.

ರಕ್ಷಿತಾ 2018ರ ಆವೃತ್ತಿಯಲ್ಲೂ ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಕರ್ನಾಟಕದ ಅಂಧ ಓಟಗಾರ ಶರತ್​ ಶಂಕರಪ್ಪ ಎಂ. ಪುರುಷರ 1,500 ಮೀ. ಓಟದಲ್ಲಿ ಬೆಳ್ಳಿ ಪದಕ ಒಲಿಸಿಕೊಂಡರೆ, ಭಾರತದ ಮತ್ತೋರ್ವ ಓಟಗಾರ ಬಲ್ವಂತ್​ ಸಿಂಗ್​ ರಾವತ್​ ಕಂಚು ಜಯಿಸಿದರು.

ಜಾವೆಲಿನ್​ ಎಸೆತದಲ್ಲಿ ಸುಮಿತ್​ ವಿಶ್ವದಾಖಲೆ

ಪ್ಯಾರಾಲಿಂಪಿಕ್ಸ್​ ಚಾಂಪಿಯನ್​ ಸುಮಿತ್​ ಆಂತಿಲ್​ ಜಾವೆಲಿನ್​ ಎಸೆತದ ಎಫ್​64 ವಿಭಾಗದಲ್ಲಿ 73.29 ಮೀ. ದೂರದ ಎಸೆತದೊಂದಿಗೆ ವಿಶ್ವದಾಖಲೆ ಬರೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 25 ವರ್ಷದ ಸುಮಿತ್​ ಹಾಲಿ ವರ್ಷ ವಿಶ್ವ ಪ್ಯಾರಾ ಅಥ್ಲೆಟಿಕ್ಸ್​ನಲ್ಲಿ 70.83 ಮೀ. ದೂರ ಎಸೆದಿದ್ದ ತನ್ನದೇ ವಿಶ್ವದಾಖಲೆಯನ್ನು ಸುಧಾರಿಸಿಕೊಂಡರು. ಸ್ಪರ್ಧೆಯಲ್ಲಿದ್ದ ಮತ್ತೋರ್ವ ಭಾರತೀಯ ಪುಷ್ಪೇಂದ್ರ ಸಿಂಗ್​ 62.09 ಮೀ. ಎಸೆತದೊಂದಿಗೆ ಕಂಚಿನ ಪದಕ ಒಲಿಸಿಕೊಂಡರು.