ಕ್ರೀಡೆ

Women’s Asia Cup 2024: ಬಾಂಗ್ಲಾ ವಿರುದ್ಧ 10 ವಿಕೆಟ್​ಗಳಿಂದ ಗೆದ್ದು ಫೈನಲ್​ ಪ್ರವೇಶಿಸಿದ ಭಾರತ

ದಂಬುಲಾ (ಶ್ರೀಲಂಕಾ): ಮಹಿಳೆಯರ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಇಂದು ನಡೆದ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಬರೋಬ್ಬರಿ 10 ವಿಕೆಟ್​ ಅಂತರದ ಭರ್ಜರಿ ಜಯಗಳಿಸಿರುವ ಭಾರತ ಅಜೇಯ ತಂಡವಾಗಿ ಫೈನಲ್ ಪ್ರವೇಶಿಸಿದೆ.

ಲೀಗ್​ ಸುತ್ತಿನಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್​ಗೆ ಲಗ್ಗೆ ಇಟ್ಟಿದ್ದ ಟೀಂ ಇಂಡಿಯಾ, ಇದೀಗ ಸೆಮಿಫೈನಲ್ ಪಂದ್ಯದಲ್ಲೂ ಬಾಂಗ್ಲಾ ತಂಡವನ್ನು ಸುಲಭವಾಗಿ ಮಣಿಸಿ ಸತತ ಐದನೇ ಬಾರಿಗೆ ಫೈನಲ್​ಗೇರಿದೆ.

ಶ್ರೀಲಂಕಾದ ದಂಬುಲಾದ ರಂಗಿರಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಟೀಂ ಇಂಡಿಯಾ ಬೌಲರ್​ಗಳ ದಾಳಿಗೆ ನಲುಗಿದ ಬಾಂಗ್ಲಾ ಎಂಟು ವಿಕೆಟ್​ಗೆ ಕೇವಲ 80 ರನ್​ ಮಾತ್ರ ಗಳಿಸಿತು. 81 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ 11 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗುರಿ ತಲುಪಿತು. ಸ್ಮೃತಿ ಮಂದಾನ ಆಕರ್ಷಕ ಅರ್ಧಶತಕ (55) ಗಳಿಸಿದರೆ ಶೆಫಾಲಿ ವರ್ಮಾ ಅಜೇಯ 26 ರನ್​ಗಳಿಸಿದರು.

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಆರಂಭಿಸಿದ ಬಾಂಗ್ಲಾ ತಂಡಕ್ಕೆ ಮೊದಲ ಓವರ್​ನಲ್ಲೇ ವೇಗಿ ರೇಣುಕಾ ಶಾಕ್ ನೀಡಿದರು. ಆರಂಭಿಕ ಮೂರು ಆಟಗಾರರ ವಿಕೆಟ್​ಗಳನ್ನು ಕಿತ್ತು ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇವರ ಬೌಲಿಂಗ್​ ದಾಳಿಗೆ ತತ್ತರಿಸಿದ ಬಾಂಗ್ಲಾ 21 ರನ್​ಗೆ ಮೂರು ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು.

4 ಓವರ್​ ಬೌಲಿಂಗ್​ ನಡೆಸಿದ ರೇಣುಕಾ ಸಿಂಗ್ 1 ಮೇಡನ್​ ಸಹಿತ ಕೇವಲ 10 ರನ್​ ನೀಡಿ 3 ವಿಕೆಟ್​ ಉರುಳಿಸಿದರು. ಇದೇ ವೇಳೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 50 ವಿಕೆಟ್​ಗಳ ಮೈಲುಗಲ್ಲು ತಲುಪಿದರು.