ದುಬೈ: ಈ ವರ್ಷ ಫೆಬ್ರವರಿ-ಮಾರ್ಚ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಜನರು ವೀಕ್ಷಿಸಿದ ಟೂರ್ನಿಯಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೋಮವಾರ ಪ್ರಕಟಿಸಿದೆ. ಐಸಿಸಿ ಡಿಜಿಟಲ್ ಚಾನಲ್ ಮೂಲಕ 1.1 ಶತಕೋಟಿ ವಿಡಿಯೋ ವೀಕ್ಷಣೆ ಮಾಡಲಾಗಿದೆ ಎಂದು ಐಸಿಸಿ ತಿಳಿಸಿದೆ. ಇದು 2018ರ ಮಹಿಳಾ ಟಿ20 ವಿಶ್ವಕಪ್ಗಿಂತ 20 ಪಟ್ಟು ಅಧಿಕವಾಗಿದೆ.
2017ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಏಕದಿನ ವಿಶ್ವಕಪ್ ಈ ಹಿಂದೆ ಅತಿ ಹೆಚ್ಚು ಜನರು ವೀಕ್ಷಿಸಿದ ಮಹಿಳಾ ಕ್ರಿಕೆಟ್ ಟೂರ್ನಿಯಾಗಿತ್ತು. ಅದಕ್ಕಿಂತ 10 ಪಟ್ಟು ಅಧಿಕ ವಿಡಿಯೋ ವೀಕ್ಷಣೆಯನ್ನು ಈ ಬಾರಿ ಮಾಡಲಾಗಿದೆ ಎಂದು ಐಸಿಸಿ ತಿಳಿಸಿದೆ. ಇವೆರಡೂ ಟೂರ್ನಿಗಳಲ್ಲಿ ಭಾರತ ತಂಡ ರನ್ನರ್ಅಪ್ ಆಗಿತ್ತು ಎಂಬುದು ಗಮನಾರ್ಹ.
2019ರ ಪುರುಷರ ಏಕದಿನ ವಿಶ್ವಕಪ್ ಬಳಿಕ ಈ ವರ್ಷದ ಮಹಿಳೆಯರ ಟಿ20 ವಿಶ್ವಕಪ್ 2ನೇ ಅತ್ಯಂತ ಯಶಸ್ವಿ ಐಸಿಸಿ ಟೂರ್ನಿಯಾಗಿದೆ. ಟೂರ್ನಿಯ ಫೈನಲ್ ಪಂದ್ಯವನ್ನು ದಾಖಲೆಯ ಜನರು ವೀಕ್ಷಿಸಿದ್ದರು ಎಂದು ಐಸಿಸಿ ತಿಳಿಸಿದೆ. ಅಂತಾರಾಷ್ಟ್ರೀಯ ಮಹಿಳೆಯರ ದಿನವಾದ ಮಾರ್ಚ್ 8ರಂದು ಮೆಲ್ಬೋರ್ನ್ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯಕ್ಕೆ ದಾಖಲೆಯ 86,174 ಪ್ರೇಕ್ಷಕರು ಸಾಕ್ಷಿಯಾಗಿದ್ದರು. ಭಾರತವನ್ನು ಮಣಿಸಿ ಆಸ್ಟ್ರೇಲಿಯಾ ತಂಡ ಪ್ರಶಸ್ತಿ ಜಯಿಸಿತ್ತು.
ಭಾರತದಲ್ಲಿ ಅತ್ಯಧಿಕ ವೀಕ್ಷಕರು: ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ವೀಕ್ಷಿಸಲಾಗಿದೆ. ಭಾರತದಲ್ಲಿ ನೇರ ವೀಕ್ಷಣೆಯ ಅವಧಿ 86.15 ದಶಲಕ್ಷವಿತ್ತು. ಇದು 2018ರ ಟೂರ್ನಿಗಿಂತ ಶೇ. 152ರಷ್ಟು ಅಧಿಕವಾಗಿದೆ. ಟೂರ್ನಿಯಲ್ಲಿ ಭಾರತ ತಂಡ ಯಶಸ್ಸು ಮತ್ತು ಸ್ಟಾರ್ ಸ್ಪೋರ್ಟ್ಸ್ ವಾಹಿತಿ ಭಾರತದ ಪಂದ್ಯಗಳನ್ನು ಇಂಗ್ಲಿಷ್, ಹಿಂದಿ ಮಾತ್ರವಲ್ಲದೆ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲೂ ಪ್ರಸಾರ ಮಾಡಿದ್ದು ಕಾರಣ ಎನ್ನಲಾಗಿದೆ. ಟೂರ್ನಿಯ ಒಟ್ಟು ವೀಕ್ಷಕರಲ್ಲಿ ಶೇ. 76ರಷ್ಟು ಭಾರತದ್ದೇ ಆಗಿದೆ. ಅದರಲ್ಲೂ ನಾಕೌಟ್ ಪಂದ್ಯಗಳಿಗೆ ಭಾರತೀಯ ವೀಕ್ಷಕರ ಸಂಖ್ಯೆ ಹೆಚ್ಚಿತ್ತು.