ಕ್ರೀಡೆ

ಆತನ ಕೆರಿಯರ್​ನಲ್ಲಿ ಇದೊಂದು ಕೆಲಸ ಬಾಕಿ ಉಳಿದಿದೆ; ವಿರಾಟ್​ ಕೊಹ್ಲಿ ಕುರಿತು ಪಾಕ್ ಮಾಜಿ ಕ್ರಿಕೆಟಿಗನ ಹೇಳಿಕೆ ವೈರಲ್

ನವದೆಹಲಿ: ಮುಂದಿನ ವರ್ಷ ಅಂದರೆ 2025ರ ಫೆಬ್ರವರಿ-ಮಾರ್ಚ್​ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಿನ ಕಿತ್ತಾಟದಿಂದ ಸಖತ್​ ಸೌಂಡ್​ ಮಾಡುತ್ತಿದೆ.  ಏಕೆಂದರೆ ಈ ಬಾರಿಯ ಟೂರ್ನಿ ಪಾಕಿಸ್ತಾನದಲ್ಲಿ ನಡೆಯುತ್ತಿರುವುದರಿಂದ ಭದ್ರತೆಯ ಕಾರಣದಿಂದಾಗಿ ಭಾರತ ತಂಡ ಭಾಗವಹಿಸುವುಡು ಡೌಟ್​ ಎಂದು ಹೇಳಲಾಗಿದ್ದು, ಬಿಸಿಸಿಐ ಹೈಬ್ರಿಡ್​ ಮಾದರಿಯಲ್ಲಿ ಪಂದ್ಯಗಳನ್ನು ನಡೆಸುವಂತೆ ಐಸಿಸಿಗೆ ಮನವಿ ಮಾಡಿದೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನ ಕ್ರಿಕೆಟ್​ ಮಂಡಳಿ (PCB) ಭಾರತ ಪಾಕಿಸ್ತಾನದ ನೆಲದಲ್ಲಿ ಆಡಲೇಬೇಕು ಎಂದು ಆಗ್ರಹಿಸಿದೆ.

2025ರ ಫೆಬ್ರವರಿ-ಮಾರ್ಚ್​ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿ  ಪಾಕಿಸ್ತಾನ ಹಾಗೂ ಭಾರತ ನಡುವಿನ ಕಿತ್ತಾಟಕ್ಕೆ ಹೆಚ್ಚು ಸೌಂಡ್​ ಮಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ಪಾಕಿಸ್ತಾನದ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ನೀಡುತ್ತಿರುವ ಹೇಳಿಕೆ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಇದೀಗ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಯೂನಿಸ್​ ಖಾನ್​ ನೀಡಿರುವ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದೆ.

ಈ ಕುರಿತು ಮಾತನಾಡಿರುವ ಯೂನಿಸ್ ಖಾನ್, ಭಾರತ ತಂಡವು ಪಾಕಿಸ್ತಾನಕ್ಕೆ ಬಂದು ಆಡಲಿದೆ ಎಂಬ ವಿಶ್ವಾಸ ನಮಗಿದೆ. ಎಂದಿನಂತೆ ವಿರಾಟ್​ ಕೊಹ್ಲಿ ಪಾಕಿಸ್ತಾನಕ್ಕೆ ಬಂದು ತಮ್ಮ ಪ್ರದರ್ಶನವನ್ನು ನೀಡಬೇಕು. ಆತ ಪಾಕಿಸ್ತಾನದ ನೆಲದಲ್ಲಿ ಎಂದೂ ಆಡಿಲ್ಲ. ಆತ ಬಂದರೆ ನಮಗೆ ಸಂತೋಷವಾಗುತ್ತದೆ. ಭಾರತ ತಂಡ ಪಾಕಿಸ್ತಾನಕ್ಕೆ ಬಂದು ಆಡುವ ನಿರೀಕ್ಷೆ ನಮಗಿದೆ. ಇದು ಖಂಡಿತವಾಗಿಯೂ ಆಗುತ್ತದೆ ಎಂದು ಯೂನಿಸ್​ ಖಾನ್​ ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ, ಇತ್ತೀಚಿಗೆ ಕೊಲಂಬೊದಲ್ಲಿ ಮುಕ್ತಾಯಗೊಂಡ ಐಸಿಸಿ ವಾರ್ಷಿಕ ಸಭೆಯಲ್ಲಿ ಚಾಂಪಿಯನ್ಸ್​ ಟ್ರೋಫಿ ವಿಚಾರವಾಗಿಯೂ ಮಾತುಕತೆ ನಡೆದಿದ್ದು, ಪಾಕಿಸ್ತಾನ ಕ್ರಿಕೆಟ್​ ಮಂಡಳಿಯು ತನ್ನ ನಿರ್ಧಾರವನ್ನು ತಿಳಿಸಿದ್ದು, ಐಸಿಸಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಈವೆಂಟ್​ ವೇಳಾಪಟ್ಟಿ ಹಾಗೂ ಬಜೆಟ್​ಅನ್ನು ಪಿಸಿಬಿ ಸಲ್ಲಿಸಿದ್ದು, ಭಾರತದ ಪಂದ್ಯಗಳನ್ನು ಲಾಹೋರ್​ನಲ್ಲಿ ನಡೆಸುವುದಾಗಿ ತಿಳಿಸಿದೆ. ಈ ಬಗ್ಗೆ ಐಸಿಸಿ ಚರ್ಚಿಸಿ ಆ ನಂತರ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ ಎಂದು ವರದಿಯಾಗಿದೆ.