ಹೈದರಾಬಾದ್: ಟೂರ್ನಿಯ ಮೊದಲ 3 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಧರಿಸಿರುವ ವೇಗಿ ಮುಸ್ತಾಫಿಜುರ್ ರೆಹಮಾನ್, ಸನ್ರೈಸರ್ಸ್ ವಿರುದ್ಧದ ಪಂದ್ಯ ಆಡಲು ಸಿಎಸ್ಕೆ ತಂಡಕ್ಕೆ ಅಲಭ್ಯರಾಗಿದ್ದಾರೆ.
ಮುಂಬರುವ ಟಿ20 ವಿಶ್ವಕಪ್ನಲ್ಲಿ ಆಡಲು ಅಮೆರಿಕ-ವೆಸ್ಟ್ ಇಂಡೀಸ್ಗೆ ತೆರಳುವ ಸಂಬಂಧ ಮುಸ್ತಾಫಿಜುರ್ಗೆ ವೀಸಾ ಸಮಸ್ಯೆ ಎದುರಾಗಿದೆ. ಇದನ್ನು ಬಗೆಹರಿಸುವ ಸಲುವಾಗಿ ಅವರು ತವರೂರು ಬಾಂಗ್ಲಾದೇಶಕ್ಕೆ ದಿಢೀರ್ ಮರಳಿದ್ದಾರೆ. ಸಮಸ್ಯೆ ಬಗೆಹರಿಸಲು ಬಯೋಮೆಟ್ರಿಕ್ ಪ್ರಕ್ರಿಯೆಗೆ ಒಳಗಾಗುವುದು ಅಗತ್ಯವಾಗಿರುವ ಕಾರಣ ಮುಸ್ತಾಫಿಜುರ್ ಅನಿವಾರ್ಯವಾಗಿ ತವರಿಗೆ ನಿರ್ಗಮಿಸಿದ್ದಾರೆ.
ಪ್ರಕ್ರಿಯೆ ಬೇಗನೆ ಮುಗಿದು ಅವರಿಗೆ ಪಾರ್ಸ್ಪೋರ್ಟ್ ಲಭಿಸಿದರೆ, ಭಾನುವಾರ ಅಥವಾ ಸೋಮವಾರ ಭಾರತಕ್ಕೆ ಮರಳಲಿದ್ದಾರೆ. ಆಗ ಸಿಎಸ್ಕೆ ತಂಡ ಸೋಮವಾರ ಕೆಕೆಆರ್ ವಿರುದ್ಧ ತವರು ನೆಲ ಚೆನ್ನೈನಲ್ಲಿ ಆಡಲಿರುವ ಮುಂದಿನ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ಆದರೆ ಮೇ ನಂತರದ ಪಂದ್ಯಗಳಿಗೆ ಮುಸ್ತಾಫಿಜುರ್ ಮತ್ತೆ ಸಿಎಸ್ಕೆ ಅಲಭ್ಯರಾಗಲಿದ್ದಾರೆ. ಯಾಕೆಂದರೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಏಪ್ರಿಲ್ 30ರವರೆಗೆ ಮಾತ್ರ ಐಪಿಎಲ್ನಲ್ಲಿ ಆಡಲು ಮುಸ್ತಾಫಿಜುರ್ಗೆ ನಿರಾಕ್ಷೇಪಣಾ ಪತ್ರ ನೀಡಿದೆ. ಹೀಗಾಗಿ ಮೇ 3ರಿಂದ ಜಿಂಬಾಬ್ವೆ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಮುಸ್ತಾಫಿಜುರ್ ರಾಷ್ಟ್ರೀಯ ತಂಡಕ್ಕೆ ಮರಳಬೇಕಾಗಿದೆ.