New Zealand's captain Kane Williamson celebrates his century during day two of the second international cricket Test match between New Zealand and Pakistan at Hagley Oval in Christchurch on January 4, 2021. (Photo by Marty MELVILLE / AFP) (Photo by MARTY MELVILLE/AFP via Getty Images) 
ಕ್ರೀಡೆ

2021ರ ಮೊದಲ ಶತಕವೀರ ಕೇನ್ ವಿಲಿಯಮ್ಸನ್, ಮಹಾನ್ ಸಾಧನೆಯತ್ತ ಕಿವೀಸ್

ಕ್ರೈಸ್ಟ್‌ಚರ್ಚ್: ಭರ್ಜರಿ ಫಾರ್ಮ್‌ನಲ್ಲಿರುವ ಹಾಲಿ ವಿಶ್ವ ನಂ. 1 ಟೆಸ್ಟ್ ಬ್ಯಾಟ್ಸ್‌ಮನ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ (112*ರನ್, 175 ಎಸೆತ, 16 ಬೌಂಡರಿ) ಅಮೋಘ ಶತಕದಾಟದ ನೆರವಿನಿಂದ ನ್ಯೂಜಿಲೆಂಡ್ ತಂಡ ಪ್ರವಾಸಿ ಪಾಕಿಸ್ತಾನ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆಯತ್ತ ಸಾಗಿದೆ. ಈ ಪಂದ್ಯವನ್ನು ಗೆದ್ದರೆ ಕಿವೀಸ್ ತಂಡ 2-0ಯಿಂದ ಸರಣಿ ವಶಪಡಿಸಿಕೊಳ್ಳುವ ಜತೆಗೆ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಮೊಟ್ಟಮೊದಲ ಬಾರಿಗೆ ನಂ. 1 ಪಟ್ಟಕ್ಕೇರಲಿದೆ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದೆ.

ಹ್ಯಾಗ್ಲೆ ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಾಕಿಸ್ತಾನದ 297 ರನ್‌ಗೆ ಪ್ರತಿಯಾಗಿ ಸೋಮವಾರ 2ನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ ತಂಡ ದಿನದಂತ್ಯಕ್ಕೆ 3 ವಿಕೆಟ್‌ಗೆ 286 ರನ್ ಪೇರಿಸಿದೆ. ಕಿವೀಸ್ ತಂಡ ಸದ್ಯ ಕೇವಲ 11 ರನ್ ಹಿನ್ನಡೆಯಲ್ಲಿದೆ.

ಕಿವೀಸ್ ತಂಡ ಒಂದು ಹಂತದಲ್ಲಿ 71 ರನ್‌ಗೆ 3 ವಿಕೆಟ್ ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿತ್ತು. ಆಗ ಜತೆಗೂಡಿದ ಕೇನ್ ವಿಲಿಯಮ್ಸನ್ ಮತ್ತು ಹೆನ್ರಿ ನಿಕೋಲ್ಸ್ (89*) ಜೋಡಿ ಮುರಿಯದ 4ನೇ ವಿಕೆಟ್‌ಗೆ 215 ರನ್ ಜತೆಯಾಟವಾಡಿ ತಂಡವನ್ನು ಸುರಕ್ಷಿತ ಸ್ಥಿತಿಗೆ ಕೊಂಡೊಯ್ದಿತು.

ಅರ್ಧಶತಕ ಪೂರೈಸಲು 105 ಎಸೆತ ಎದುರಿಸಿದ್ದ ಕೇನ್ ವಿಲಿಯಮ್ಸ್, ಮುಂದಿನ 50 ರನ್‌ಗಳನ್ನು ಕೇವಲ 35 ಎಸೆತಗಳಲ್ಲಿ ಸಿಡಿಸಿದರು. ಈ ಮೂಲಕ 140 ಎಸೆತಗಳಲ್ಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ 24ನೇ ಶತಕ ಬಾರಿಸಿದರು. ಇದರೊಂದಿಗೆ ಸತತ 3ನೇ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದರು. 2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಶತಕದ ಸಾಧನೆಯನ್ನೂ ದಾಖಲಿಸಿದರು.

ಪಾಕಿಸ್ತಾನ: 297, ನ್ಯೂಜಿಲೆಂಡ್: 85 ಓವರ್‌ಗಳಲ್ಲಿ 3 ವಿಕೆಟ್‌ಗೆ 286 (ಲಾಥಮ್ 33, ಬ್ಲಂಡೆಲ್ 16, ಕೇನ್ ವಿಲಿಯಮ್ಸನ್ 112*, ರಾಸ್ ಟೇಲರ್ 12, ಹೆನ್ರಿ ನಿಕೋಲ್ಸ್ 89*, ಶಹೀನ್ ಅಫ್ರಿದಿ 45ಕ್ಕೆ 1, ಅಬ್ಬಾಸ್ 37ಕ್ಕೆ 1, ಅಶ್ರಫ್​ 55ಕ್ಕೆ 1).