ಕ್ರೀಡೆ

ವಿಶ್ವಕಪ್​ನಲ್ಲಿ ಮುಂದಿನ 3 ಪಂದ್ಯಗಳಿಗೆ ಕೇನ್​ ವಿಲಿಯಮ್ಸನ್​ ಅಲಭ್ಯ; ಭಾರತಕ್ಕೂ ಸಿಹಿಸುದ್ದಿ!

ಚೆನ್ನೈ: ಗಾಯದಿಂದ ಚೇತರಿಸಿಕೊಂಡು 7 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳಿದ ನ್ಯೂಜಿಲೆಂಡ್​ ನಾಯಕ ಕೇನ್​ ವಿಲಿಯಮ್ಸನ್​ ಮತ್ತೆ ಗಾಯಗೊಂಡಿದ್ದಾರೆ. ಇದರಿಂದಾಗಿ ಕಿವೀಸ್​ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ ಗೆಲುವಿನೊಂದಿಗೆ ಬೀಗುತ್ತಿರುವ ನಡುವೆಯೂ ಹಿನ್ನಡೆ ಎದುರಿಸಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ರನ್​ ಓಡುವಾಗ ಎಡಗೈಗೆ ಬಡಿದ ಚೆಂಡು ಅವರ ಹೆಬ್ಬೆರಳಿನ ಮೂಳೆ ಮುರಿತಕ್ಕೆ ಕಾರಣವಾಗಿದೆ.

ಪಂದ್ಯದ ಬಳಿಕ ನಡೆಸಿದ ಎಕ್ಸ್​-ರೇ ಪರೀಕ್ಷೆಯಲ್ಲಿ ಇದು ದೃಢಪಟ್ಟಿದೆ. ಇದರಿಂದಾಗಿ ಅವರು ಅಕ್ಟೋಬರ್​ 22ರಂದು ಧರ್ಮಶಾಲಾದಲ್ಲಿ ಆತಿಥೇಯ ಭಾರತ ವಿರುದ್ಧ ನಡೆಯಲಿರುವ ಪಂದ್ಯವನ್ನೂ ಸೇರಿದಂತೆ ಮುಂದಿನ ಒಟ್ಟು 3 ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಅಫ್ಘಾನಿಸ್ತಾನ (ಅ.18) ಮತ್ತು ಆಸ್ಟ್ರೆಲಿಯಾ (ಅ.28) ವಿರುದ್ಧದ ಪಂದ್ಯಗಳಿಂದಲೂ ಅವರು ಹೊರಗುಳಿಯಲಿದ್ದಾರೆ. ಈ ಮುನ್ನ ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲೂ ಅವರು ಆಡಿರಲಿಲ್ಲ.

ಶೀಘ್ರ ಚೇತರಿಕೆ ಕಂಡರೆ ಕೊನೇ 3 ಪಂದ್ಯಗಳಲ್ಲಿ ಆಡಬಹುದಾಗಿದೆ. ಕೇನ್​ಗೆ ಮೀಸಲು ಆಟಗಾರರಾಗಿ ತಂಡದಲ್ಲಿರಲು ಅನುಭವಿ ಬ್ಯಾಟರ್​ ಟಾಮ್​ ಬ್ಲಂಡೆಲ್​ ಭಾರತದತ್ತ ಪ್ರಯಾಣ ಬೆಳೆಸಿದ್ದಾರೆ. ಕೇನ್​ ಈ ಮುನ್ನ ಮಾರ್ಚ್​ನಲ್ಲಿ ಐಪಿಎಲ್​ ಉದ್ಘಾಟನಾ ಪಂದ್ಯದ ವೇಳೆ ಮೊಣಕಾಲು ಗಾಯಕ್ಕೊಳಗಾಗಿದ್ದರು.