Virat Kohli : ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ವಿಶ್ವ ಕ್ರಿಕೆಟ್ನಲ್ಲೇ ಅತ್ಯಂತ ಜನಪ್ರಿಯ ಆಟಗಾರ. ಯಾವ ಕ್ರಿಕೆಟಿಗನೂ ಇಲ್ಲದ ಅತಿದೊಡ್ಡ ಅಭಿಮಾನಿ ಬಳಗ ಕೊಹ್ಲಿಗಿದೆ. ಇತ್ತೀಚೆಗಷ್ಟೇ ಕೊಹ್ಲಿ ಟೆಸ್ಟ್ ಸ್ವರೂಪಕ್ಕೆ ವಿದಾಯ ಹೇಳಿದ್ದು, ಅನೇಕರಿಗೆ ಬೇಸರ ತರಿಸಿತು. ಆದರೆ, ಇತ್ತೀಚೆಗೆ ಮುಗಿದ 18ನೇ ಐಪಿಎಲ್ ಆವೃತ್ತಿಯಲ್ಲಿ ಆರ್ಸಿಬಿ ಅಮೋಘ ಗೆಲುವು ದಾಖಲಿಸುವ ಮೂಲಕ ಚೊಚ್ಚಲ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. 17 ವರ್ಷಗಳಿಂದ ಕನಸಾಗಿದ್ದ ಐಪಿಎಲ್ ಟ್ರೋಫಿ ಕೊನೆಗೂ ಕೈಸೇರಿದ್ದಕ್ಕೆ ಕೊಹ್ಲಿ ಭಾವುಕರಾದರು. ಕೊಹ್ಲಿ ಟೆಸ್ಟ್ ನಿವೃತ್ತಿಯ ನೋವನ್ನು ಐಪಿಎಲ್ ಪ್ರಶಸ್ತಿ ಮರೆಸಿತು. ಆದರೆ, ಐಪಿಎಲ್ ಟ್ರೋಫಿ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದು ಸಂಭ್ರಮಾಚರಣೆಯನ್ನು ಕಸಿಯಿತು. ಈ ಘಟನೆ ಕೊಹ್ಲಿಗೂ ನೋವುಂಟು ಮಾಡಿದೆ. ಈ ಘಟನೆಯ ಬೆನ್ನಲ್ಲೇ ಕೊಹ್ಲಿ ಭಾರತ ತೊರೆದು ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳೊಂದಿಗೆ ಲಂಡನ್‌ಗೆ ಹಾರಿದರು.
ಕೆಲ ವರ್ಷಗಳಿಂದ ಕೊಹ್ಲಿ ಬಗ್ಗೆ ಒಂದು ಮಾತು ಹೆಚ್ಚಾಗಿ ಕೇಳಿಬರುತ್ತಿದೆ. ಅದೇನೆಂದರೆ, ಕೊಹ್ಲಿ ಭಾರತವನ್ನು ತೊರೆಯಲಿದ್ದು, ಇಂಗ್ಲೆಂಡ್ನ ಲಂಡನ್ನಲ್ಲೇ ಕುಟುಂಬ ಸಮೇತ ಶಾಶ್ವತವಾಗಿ ನೆಲೆಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಭಾರತದಲ್ಲಿ ತನ್ನ ಮಕ್ಕಳು ಎಂದಿಗೂ ಖಾಸಗಿ ಜೀವನವನ್ನು ನಡೆಸಲು ಸಾಧ್ಯವಿಲ್ಲ ಎಂದು ಭಾವಿಸಿರುವುದರಿಂದ ಕೊಹ್ಲಿ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ವರದಿಗಳಿವೆ. ಆದರೆ, ಸದ್ಯದ ಬೆಳವಣಿಗೆ ನೋಡಿದರೆ ಕೊಹ್ಲಿ ಕುಟುಂಬ ಸಮೇತ ಲಂಡನ್‌ಗೆ ಶಿಫ್ಟ್ ಆದ್ರಾ ಅನ್ನೋ ಅನುಮಾನ ಮೂಡತೊಡಗಿದೆ.
ಇತ್ತೀಚೆಗೆ ಕ್ರಿಕೆಟ್ನಿಂದ ದೂರವಿರುವ ಸಮಯದಲ್ಲಿ ಕುಟುಂಬದೊಂದಿಗೆ ಲಂಡನ್ನಲ್ಲಿ ನೆಲೆಸಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಪೂರ್ವಭಾವಿಯಾಗಿ ಭಾರತ ತಂಡದ ಆಟಗಾರರಾದ ಶುಭಮಾನ್ ಗಿಲ್, ರಿಷಭ್ ಪಂತ್, ಮೊಹಮದ್ ಸಿರಾಜ್ಗೆ ಆತಿಥ್ಯ ನೀಡಿದ್ದಾರೆ. ಲಂಡನ್ನ ತನ್ನ ಮನೆಗೆ ಈ ಆಟಗಾರರನ್ನು ಕರೆಸಿಕೊಂಡು ಕೊಹ್ಲಿ ಔತಣ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೊಹ್ಲಿ ಅವರು ಲಂಡನ್‌ಗೆ ಶಿಫ್ಟ್ ಆಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಟಿ20 ಹಾಗೂ ಟೆಸ್ಟ್ ಸ್ವರೂಪಕ್ಕೆ ವಿದಾಯ ಹೇಳಿರುವ ಕೊಹ್ಲಿ, ಏಕದಿನ ಸ್ವರೂಪದಲ್ಲಿ ಮಾತ್ರ ಉಳಿದಿದ್ದಾರೆ. ಕ್ರಿಕೆಟ್ನಿಂದ ಸಂಪೂರ್ಣ ನಿವೃತ್ತಿ ಘೋಷಣೆ ಮಾಡಿದ ಬಳಿಕ ಲಂಡನ್ನಲ್ಲಿ ಶಾಶ್ವತವಾಗಿ ನೆಲೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊಹ್ಲಿ ಭಾರತ ತೊರೆಯುವ ಬಗ್ಗೆ ಈ ಹಿಂದೆ ಕೊಹ್ಲಿ ಅವರ ಕ್ರಿಕೆಟ್ ಕೋಚ್ ರಾಜ್‌ಕುಮಾರ್ ಶರ್ಮಾ ಕೂಡ ಮಾತನಾಡಿದ್ದರು. ಹೌದು, ವಿರಾಟ್ ಕೊಹ್ಲಿ ಅವರು ಸಂಪೂರ್ಣವಾಗಿ ಲಂಡನ್‌ಗೆ ಸ್ಥಳಾಂತರಗೊಳ್ಳಲು ಯೋಜಿಸಿದ್ದಾರೆ. ಶೀಘ್ರದಲ್ಲೇ ಅವರು ಶಾಶ್ವತವಾಗಿ ಭಾರತವನ್ನು ತೊರೆಯಲಿದ್ದಾರೆ ಎಂದಿದ್ದರು. ಆದರೆ, ಕಾರಣ ಏನು ಎಂಬುದನ್ನು ತಿಳಿಸಿರಲಿಲ್ಲ.
ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಹಾಗೂ ಆರ್ಸಿಬಿ ತಂಡದ ಮಾಜಿ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಈ ಹಿಂದೆ LiSTNR ಸ್ಪೋರ್ಟ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುವಾಗ ಕೊಹ್ಲಿ ಲಂಡನ್ನಲ್ಲಿ ನೆಲೆಸಲು ಕಾರಣ ಏನೆಂಬುದನ್ನು ತಿಳಿಸಿದ್ದರು. ಐಪಿಎಲ್‌ನಲ್ಲಿ ಒಟ್ಟಿಗೆ ಆಡುತ್ತಿದ್ದಾಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತರಬೇತಿ ಮುಗಿಸಿ ಹೋಟೆಲ್ಗೆ ಕೊಹ್ಲಿ ಜತೆ ಹೋಗುವಾಗ ನಡೆದ ಘಟನೆಯನ್ನು ಆಸ್ಟ್ರೇಲಿಯಾದ ಸೂಪರ್‌ಸ್ಟಾರ್ ಮ್ಯಾಕ್ಸಿ ವಿವರಿಸಿದ್ದಾರೆ. ಸ್ಟೇಡಿಯಂ ತಲುಪಿ ಬಹಳ ಹೊತ್ತು ಇಬ್ಬರು ಒಟ್ಟಿಗೆ ಬ್ಯಾಟಿಂಗ್ ಅಭ್ಯಾಸ ನಡೆಸಿದೆವು. ಬಳಿಕ ಕೊಹ್ಲಿ ಹೋಟೆಲ್ಗೆ ಹಿಂತಿರುಗಬೇಕಾಯಿತು. ನಾವಿಬ್ಬರು ಕಾರಿನಲ್ಲಿ ಹಿಂತಿರುಗಿದೆವು. ನಮ್ಮ ಕಾರಿನ ಮುಂದಿನ ಸೀಟಿನಲ್ಲಿ ಒಬ್ಬ ಸೆಕ್ಯುರಿಟಿ ಗಾರ್ಡ್ ಇದ್ದ. ಭದ್ರತೆಯ ಭಾಗವಾಗಿ ನಮ್ಮ ಕಾರಿನ ಹಿಂದೆ ಪೊಲೀಸರು ತುಂಬಿದ್ದ ಮತ್ತೊಂದು ಕಾರು ಕೂಡ ಹಿಂಬಾಲಿಸುತ್ತಿತ್ತು. ಕಾರು ಸ್ಟೇಡಿಯಂನಿಂದ ಹೊರಗೆ ಬರುತ್ತಿದ್ದಂತೆ ವಿರಾಟ್ ಕೊಹ್ಲಿ ಒಳಗಿರುವುದನ್ನು ಅರಿತ ಜನರು ಕಾರಿನತ್ತ ಓಡಿ ಬಂದರು. ಕಾರು ಮತ್ತು ಕಾರಿನ ಕಿಟಕಿ ಗಾಜನ್ನು ಬಡಿಯಲು ಪ್ರಾರಂಭಿಸಿದರು ಮತ್ತು ತೆರೆಯಲು ಪ್ರಯತ್ನಿಸಿದರು. ಕೊಹ್ಲಿ ತಮ್ಮತ್ತ ನೋಡಲಿ ಎಂದು ಆ ರೀತಿ ಮಾಡುತ್ತಿದ್ದರು. ಆ ಪರಿಸ್ಥಿತಿಯಲ್ಲಿ ನನಗೂ ತುಂಬಾ ಭಯವಾಯಿತು. ಇಂತಹ ಪರಿಸ್ಥಿತಿಯಲ್ಲಿ ನೀವು ಪ್ರತಿದಿನ ಇಲ್ಲಿ ಹೇಗೆ ವಾಸಿಸುತ್ತೀರಿ ಎಂದು ವಿರಾಟ್ಗೆ ಪ್ರಶ್ನೆ ಮಾಡಿದೆ. ಅದಕ್ಕೆ ಅವರು ನಾನು ಪ್ರತಿನಿತ್ಯ ಎದುರಿಸುತ್ತಿರುವುದು ಇದನ್ನೇ ಎಂದು ಉತ್ತರಿಸಿದರು ಎಂದು ಮ್ಯಾಕ್ಸಿ ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ ಭಾರತದಲ್ಲಿ ಖಾಸಗಿತನ ಸಿಗುವುದಿಲ್ಲ ಎಂಬ ಕಾರಣಕ್ಕೆ ಕೊಹ್ಲಿ ಭಾರತವನ್ನು ತೊರೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ಮ್ಯಾಕ್ಸಿ ಹೇಳಿದ್ದರು. (ಏಜೆನ್ಸೀಸ್)