ಕ್ರೀಡೆ

2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಭಾರತ ತಂಡ ಹೋಗಲ್ಲ?

ನವದೆಹಲಿ: ಪಾಕಿಸ್ತಾನ ವಿರುದ್ಧ ಸದ್ಯಕ್ಕೆ ದ್ವಿಪಕ್ಷೀಯ ಕ್ರಿಕೆಟ್​ ಸರಣಿ ಆಡುವ ಸಾಧ್ಯತೆ ಬಿಡಿ, 2025ರಲ್ಲಿ ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಐಸಿಸಿ ಚಾಂಪಿಯನ್ಸ್​ ಟ್ರೋಫಿಗೂ ಭಾರತ ತಂಡ ತೆರಳುವ ಸಾಧ್ಯತೆಗಳಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ 2023ರ ಏಷ್ಯಾಕಪ್​ನಂತೆ ಚಾಂಪಿಯನ್ಸ್​ ಟ್ರೋಫಿ ಕೂಡ ಹೈಬ್ರಿಡ್​ ಮಾದರಿಯಲ್ಲಿ ನಡೆಯಲಿದೆ ಅಂದರೆ ಭಾರತದ ಎಲ್ಲ ಪಂದ್ಯಗಳು ತಟಸ್ಥ ತಾಣದಲ್ಲಿ ನಿಗದಿಯಾಗಲಿವೆ ಎನ್ನಲಾಗಿದೆ.

2025ರ ಫೆಬ್ರವರಿ-ಮಾರ್ಚ್​ನಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ಚಾಂಪಿಯನ್ಸ್​ ಟ್ರೋಫಿ ನಿಗದಿಯಾಗಿದೆ. ಇದು 1996ರ ಏಕದಿನ ವಿಶ್ವಕಪ್​ ನಂತರ ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಮೊದಲ ಐಸಿಸಿ ಟೂರ್ನಿಯಾಗಿದೆ.

ಚಾಂಪಿಯನ್ಸ್​ ಟ್ರೋಫಿಗೆ ಭಾರತ ತಂಡವನ್ನು ಕಳುಹಿಸಿದರೆ ಅದರೊಂದಿಗೆ ದ್ವಿಪಕ್ಷೀಯ ಸರಣಿ ಆಡುವ ಬಗ್ಗೆ ಯೋಚಿಸುವುದಾಗಿ ಪಾಕ್​ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಮೊಹ್ಸಿನ್​ ನಖ್ವಿ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಬಿಸಿಸಿಐ ಅಧಿಕಾರಿ, "ದ್ವಿಪಕ್ಷೀಯ ಸರಣಿ ಮರೆತುಬಿಡಿ, ಚಾಂಪಿಯನ್ಸ್​ ಟ್ರೋಫಿಗೂ ಭಾರತ ತಂಡವನ್ನು ಕಳುಹಿಸುವ ಸಾಧ್ಯತೆ ಇಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಚಾಂಪಿಯನ್ಸ್​ ಟ್ರೋಫಿಗೆ ಬಿಸಿಸಿಐ, ಭಾರತ ತಂಡವನ್ನು ಕಳುಹಿಸುವುದಾದರೂ, ಕೇಂದ್ರ ಸರ್ಕಾರದ ಅನುಮತಿ ಅತ್ಯಗತ್ಯವಾಗಿದೆ.