ನವದೆಹಲಿ: ಫೆಬ್ರವರಿ 23ರಂದು ಶುರುವಾದ ವುಮೆನ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಅಂತಿಮ ಹಂತ ತಲುಪಿದ್ದು, ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಫಿನಾಲೆಗೆ ಲಗ್ಗೆ ಇಟ್ಟಿದೆ. ಶುಕ್ರವಾರ (ಮಾರ್ಚ್ 15) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಈ ಪಂದ್ಯ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಎಲ್ಲರ ಹಾಟ್ ಫೇವರಿಟ್ ಆಗಿದ್ದು, ಪ್ರಶಸ್ತಿ ಗೆಲ್ಲಲು ಗೋಲ್ಡನ್ ಅವಕಾಶವಿದೆ. ಒಂದು ವೇಳೆ ಇದು ಸಾಧ್ಯವಾದರೆ ಸ್ಮೃತಿ ಪಡೆ ಐತಿಹಾಸ ನಿರ್ಮಿಸಲಿದೆ. ಹಾಗೆಯೇ ಈ ಗೆಲುವು ಆರ್‌ಸಿಬಿ ಅಭಿಮಾನಿಗಳ 16 ವರ್ಷಗಳ ಕಾಯುವಿಕೆಯನ್ನು ಕೊನೆಗೊಳ್ಳಿಸಲಿದೆ.
2008ರಿಂದಲೂ ಐಪಿಎಲ್ನ ಭಾಗವಾಗಿರುವ ಆರ್‌ಸಿಬಿ ಮೂರು ಬಾರಿ ಫಯನಲ್ ಪ್ರವೇಶಿಸಿದರೂ ಕಪ್ ಗೆಲಲ್ಲು ವಿಫಲವಾಗಿದೆ. ತಂಡದ ಅಭಿಮಾನಿಗಳು ಬಹಳ ಸಮಯದಿಂದ ಪ್ರಶಸ್ತಿಗಾಗಿ ಕಾಯುತ್ತಿದ್ದಾರೆ. ಆದರೆ ಪ್ರತಿ ಬಾರಿಯೂ ನಿರಾಸೆಯೊಂದಿಗೆ ಲೀಗ್ ಕೊನೆಗೊಳ್ಳುತ್ತಿದೆ. ಇದೀಗ ಸ್ಮೃತಿ ಪಡೆ ಆರ್‌ಸಿಬಿ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಈ ಬಾರಿ WPLನಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಪಡೆದುಕೊಂಡಿದೆ. ಆದರೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವುದು ಆರ್‌ಸಿಬಿಗೆ ದೊಡ್ಡ ಸವಾಲಾಗಿದೆ.
ಈ ಬಾರಿಯ WPLನಲ್ಲಿ ಉಭಯ ತಂಡಗಳ ನಡುವೆ ಎರಡು ಪಂದ್ಯಗಳು ನಡೆದಿವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಸೀಸನ್ನ ಮೊದಲ ಪಂದ್ಯದಲ್ಲಿ ಮುಂಬೈ ತಂಡ ಆರ್‌ಸಿಬಿ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತ್ತು. ಆ ನಂತರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಮಂದಾನ ಪಡೆ ಮುಂಬೈ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ಹಳೆಯ ಸೋಲಿಗೆ ಸೇಡು ತೀರಿಸಿಕೊಂಡಿತ್ತು.
ಆಡಿರುವ 8 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿರುವ ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನದಲ್ಲಿದೆ. ಎಲಿಮಿನೇಟರ್‌ನಲ್ಲಿ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಬೇಕಾದರೆ, ಮುಂಬೈ ತಂಡದ ಅಗ್ರ ಕ್ರಮಾಂಕವನ್ನು ಬೇಗ ಕಟ್ಟಿಹಾಕಬೇಕಿದೆ. ನಾಯಕಿ ಸ್ಮೃತಿ ಮಂದಾನ ಸೇರಿದಂತೆ ಆರ್ಸಿಬಿಯ ಅಗ್ರಕಮಾಂಕ ಬ್ಯಾಟರ್ಗಳು ಮೈಚಳಿ ಬಿಟ್ಟು ಬ್ಯಾಟ್ ಬೀಸಬೇಕಿದೆ. ತಂಡದಲ್ಲಿರುವ ಭಾರತದ ಬೌಲರ್ಗಳು ಮ್ಯಾಜಿಕ್ ಮಾಡುತ್ತಿಲ್ಲ. ಇದು ತಂಡಕ್ಕೆ ಸಾಕಷ್ಟು ಹಿನ್ನಡೆಯನ್ನುಂಟು ಮಾಡಿದೆ. ಹೀಗಾಗಿ ಮುಂಬೈ ವಿರುದ್ಧ ಇಡೀ ತಂಡ ಅದ್ಭುತ ಪ್ರದರ್ಶನ ನೀಡಿದರಷ್ಟೇ ಆರ್‌ಸಿಬಿಗೆ ಫೈನಲ್ಗೇರುವ ಅವಕಾಶ ಸಿಗಲಿದೆ.