ಕ್ರೀಡೆ

ಆರ್​ಸಿಬಿ-ಗುಜರಾತ್​ ಪಂದ್ಯಕ್ಕೆ ಮಳೆ ಭೀತಿ?; ಪ್ಲೇ ಆಫ್ ಆಸೆ ​ ಜೀವಂತವಾಗಿರಿಸಲು ಉಭಯ ತಂಡಗಳ ಹೋರಾಟ

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 17ನೇ ಆವೃತ್ತಿಯ 52ನೇ ಐಪಿಎಲ್​ ಪಂದ್ಯದ್ಲಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಗುಜರಾತ್​ ಟೈಟಾನ್ಸ್​ ಎದುರಾಗಲಿದ್ದು, ಬ್ಯಾಕ್ ಟು​ ಬ್ಯಾಕ್​ ಪಂದ್ಯಗಳನ್ನು ಗೆಲ್ಲುವ ಮೂಲಕ ಫಾಫ್​ ಡು ಪ್ಲೆಸಿಸ್​ ಪಡೆಯೂ ಸಂಪೂರ್ಣ ವಿಶ್ವಾಸದಲ್ಲಿದ್ದು, ಆರ್​ಸಿಬಿ ವಿರುದ್ಧ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಶುಭಮನ್​ ಗಿಲ್​​ ಪಡೆ ಸಜ್ಜಾಗುತ್ತಿದೆ.

ಏಪ್ರಿಲ್​ 28 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಲ್​​ ಜಾಕ್ಸ್​ ಶತಕ ಹಾಗೂ ವಿರಾಟ್​ ಕೊಹ್ಲಿ ಅರ್ಧಶತಕದ ಫಲವಾಗಿ ಆರ್​ಸಿಬಿ 200 ರನ್​ಗಳ ಗುರಿಯನ್ನು 16 ಓವರ್​ಗಳಲ್ಲಿ ಬೆನ್ನಟ್ಟುವ ಮೂಲಕ ಗೆಲುವಿನ ನಗೆ ಬೀರಿತ್ತು. ಇತ್ತ ಬ್ಯಾಕ್​ ಟು ಬ್ಯಾಕ್​ ಸೋಲು ಕಂಡಿರುವ ಗುಜರಾತ್​ ಪ್ಲೇಆಫ್​ ಆಸೆಯನ್ನು ಜೀವಂತವಾಗಿರಿಕೊಳ್ಳಲು ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿದೆ.

ಆರ್​ಸಿಬಿ ಹಾಗೂ ಗುಜರಾತ್​ ನಡುವಿನ ಪಂದ್ಯಕ್ಕೆ ಮಳೆರಾಯ ಕಾಟ ಕೊಡಲಿದ್ದಾನೆ ಎಂದು ಹೇಳಲಾಗಿದ್ದು, ಇದಕ್ಕೆ ಪೂರಕವೆಂಬಂತೆ ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯೇ ಸಾಕ್ಷಿಯಾಗಿದೆ. ಆದರೆ, ರಾತ್ರಿಯ ಆಟವಾಗಿರುವುದರಿಂದ ಇಬ್ಬನಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಲಾಗಿದೆ. ಆದರೆ, ಚಿನ್ನಸ್ವಾಮಿ ಪಿಚ್​ ಬ್ಯಾಟ್ಸ್​ಮನ್​ಗಳಿಗೆ ಹೆಚ್ಚು ನೆರವೂ ನೀಡಲಿದ್ದು, ಇದಕ್ಕೆ ಹಲವು ನಿದರ್ಶನಗಳಿವೆ. ಅಂತಿಮವಾಗಿ ಗೆಲುವು ಯಾರು ಪಾಲಾಗಲಿದೆ ಎಂದು ಕಾದು ನೋಡಬೇಕಿದೆ.

ಪಿಚ್​ ಯಾರಿಗೆ ಸಹಕಾರಿ?

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎಂದು ಪರಿಗಣಿಸಲಾಗಿದೆ. ಇಲ್ಲಿ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ಸಹಾಯ ಪಡೆಯುತ್ತಾರೆ. ಮೈದಾನ ಚಿಕ್ಕದಾಗಿರುವುದರಿಂದ ಬೌಂಡರಿ, ಸಿಕ್ಸರ್​ಗಳ ಮಳೆ ಸುರಿಯುವುದನ್ನು ಈ ಹಿಂದಿನ ಪಂದ್ಯಗಳಲ್ಲಿ ನಾವು ನೋಡಿದ್ದೇವೆ. ಹೀಗಾಗಿ ಆರ್​​ಸಿಬಿ ಹಾಗೂ ಗುಜರಾತ್​ ನಡುವಿನ ಪಂದ್ಯದಲ್ಲೂ ಈ ರೀತಿಯ ಪ್ರದರ್ಶನವನ್ನು ನೋಡಬಹುದಾಗಿದೆ.

ಬೆಂಗಳೂರಿನ ಈ ಮೈದಾನದಲ್ಲಿ ಇದುವರೆಗೆ ಒಟ್ಟು 90ಕ್ಕೂ ಹೆಚ್ಚು ಐಪಿಎಲ್ ಪಂದ್ಯಗಳು ನಡೆದಿವೆ. ಈ ಪೈಕಿ ಮೊದಲು ಬ್ಯಾಟ್ ಮಾಡಿದ ತಂಡಕ್ಕಿಂತ ಚೇಸ್​ ಮಾಡಿದ ತಂಡಗಳು ಅತಿ ಹೆಚ್ಚು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಅಂಕಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯಾವ ತಂಡ ಟಾಸ್ ಗೆಲ್ಲುತ್ತದೆಯೋ ಆ ತಂಡ ಮೊದಲು ಬೌಲಿಂಗ್ ಮಾಡಲು ಮುಂದಾಗುತ್ತದೆ. ಅಂತಿಮವಾಗಿ ವಿಜಯಲಕ್ಷ್ಮೀ ಯಾರ ಕೈ ಹಿಡಿಯಲಿದ್ದಾಳೆ ಎಂದು ಕಾದು ನೋಡಬೇಕಿದೆ.