ಅಹಮದಾಬಾದ್: ಅವಳಿ ನಗರಗಳಾದ ಅಹಮದಾಬಾದ್ ಮತ್ತು ಗಾಂಧಿನಗರ 2036ರ ಒಲಿಂಪಿಕ್ಸ್ಗೆ ಆತಿಥ್ಯ ವಹಿಸುವ ಮಹತ್ವಾಕಾಂೆಯ ಯೋಜನೆಯನ್ನು ಸಿದ್ಧಪಡಿಸಿದೆ. ಇದರನ್ವಯ ಒಲಿಂಪಿಕ್ಸ್ ಆತಿಥ್ಯಕ್ಕೆ ಅಂದಾಜು 34,700 ಕೋಟಿಯಿಂದ 64,000 ಕೋಟಿ ರೂಪಾಯಿ ವೆಚ್ಚವಾಗುವ ರೂಪುರೇಷೆ ಸಿದ್ಧಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಒಲಿಂಪಿಕ್ಸ್ಗೆ ಬಿಡ್ ಸಲ್ಲಿಸಲಿರುವ ಭಾರತದ ಉನ್ನತ ಮಟ್ಟದ ಸಮನ್ವಯ ಸಮಿತಿಯು ಈ ವಾರ ಗಾಂಧಿನಗರದಲ್ಲಿ ಸಭೆ ನಡೆಸಿದೆ. ಈ ವೇಳೆ ಒಲಿಂಪಿಕ್ಸ್ ಆತಿಥ್ಯದ ಬಜೆಟ್ ರೂಪುರೇಷೆಯನ್ನೂ ಅಂತಿಮಗೊಳಿಸಲಾಗಿದೆ. ಗುಜರಾತ್ನ ಅವಳಿ ನಗರಗಳ ಜತೆಗೆ ಭಾರತದ ಇತರ 4 ನಗರಗಳಾದ ಭೋಪಾಲ್, ಮುಂಬೈ, ಗೋವಾ, ಪುಣೆಯಲ್ಲೂ ಒಲಿಂಪಿಕ್ಸ್ನ ಕೆಲ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ಒಲಿಂಪಿಕ್ಸ್ ಆತಿಥ್ಯ ಬಜೆಟ್ ಒಟ್ಟು 2 ವಿಧದಲ್ಲಿ ವಿಂಗಡನೆಯಾಗಲಿದೆ. ಒಂದನೆಯದು ಒಲಿಂಪಿಕ್ಸ್ ಆತಿಥ್ಯಕ್ಕೆ ನೇರವಾಗಿ ಸಂಬಂಧಿಸಿದ್ದು. ಇದನ್ನು ಒಲಿಂಪಿಕ್ ಗೇಮ್ಸ್ ಸಂಟನಾ ಸಮಿತಿ (ಒಸಿಒಜಿ) ನಿರ್ವಹಿಸುತ್ತದೆ. ಇದರಲ್ಲಿ ಕ್ರೀಡಾಸ್ಪರ್ಧೆ, ಕಾರ್ಯಪಡೆ, ವಸತಿ, ತಂತ್ರಜ್ಞಾನ, ಸಾರಿಗೆ ಮತ್ತು ತಾತ್ಕಾಲಿಕ ಮೂಲಸೌಕರ್ಯಗಳಂಥ ಕಾರ್ಯನಿರ್ವಹಣೆಯ ವೆಚ್ಚಗಳು ಒಳಗೊಂಡಿರಲಿವೆ. ಇದರ ಬಜೆಟ್ 18,600 ಕೋಟಿಯಿಂದ 41,100 ಕೋಟಿ ರೂ.ವರೆಗೆ ಇರಲಿದೆ.
ಇನ್ನೊಂದು ಒಲಿಂಪಿಕ್ಸ್ ಆತಿಥ್ಯಕ್ಕೆ ಪರೋಕ್ಷವಾಗಿ ಸಂಬಂಧಿಸಿದ ಬಜೆಟ್ ಆಗಿರುತ್ತದೆ. ಇದರಲ್ಲಿ ಆತಿಥೇಯ ನಗರಗಳ ಮೂಲಸೌಕರ್ಯ ಮತ್ತು ಕಾರ್ಯನಿರ್ವಹಣೆ ವೆಚ್ಚ ಇರುತ್ತದೆ. ಇದು ಒಸಿಒಜಿ ಯೇತರ ಬಜೆಟ್ ಆಗಿರುತ್ತದೆ. ಒಸಿಒಜಿ ಯೇತರ ಬಜೆಟ್ನಲ್ಲಿ ಕ್ರೀಡೆ ಮತ್ತು ಕ್ರೀಡೇತರ ತಾಣಗಳ ಬಂಡವಾಳ ಹೂಡಿಕೆ ಒಳಗೊಂಡಿರುತ್ತದೆ. ಇದರ ಬಜೆಟ್ 16,100 ಕೋಟಿಯಿಂದ 22,900 ಕೋಟಿ ರೂಪಾಯಿವರೆಗೆ ಅಂದಾಜು ಹಾಕಲಾಗಿದೆ. ಇದರಲ್ಲಿ ಕೆಲ ತಾಣಗಳ ನವೀಕರಣ, ಹೊಸ ತಾಣಗಳ ನಿರ್ಮಾಣ ಮತ್ತು ತಾತ್ಕಾಲಿಕ ವ್ಯವಸ್ಥೆಗಳ ವೆಚ್ಚವೂ ಒಳಗೊಂಡಿರುತ್ತದೆ.
ಅಹಮದಾಬಾದ್ ಯೋಜನೆಯ ಒಸಿಒಜಿ ಯೇತರ ಬಜೆಟ್, ಹಿಂದಿನ ಮತ್ತು ಭವಿಷ್ಯದ ಎಲ್ಲ ಒಲಿಂಪಿಕ್ಸ್ ಆತಿಥ್ಯದ ವೆಚ್ಚಕ್ಕಿಂತ ಕಡಿಮೆಯೇ ಆಗಿರಲಿದೆ. 2012ರ ಲಂಡನ್ ಒಲಿಂಪಿಕ್ಸ್ನ ಒಸಿಒಜಿ ಯೇತರ ವೆಚ್ಚ 71,073 ಕೋಟಿ ರೂ. ಆಗಿತ್ತು. ಆಗ ಸಮಗ್ರ ಲಂಡನ್ ಮೂಲಸೌಕರ್ಯ ಅಭಿವೃದ್ಧಿಗೊಳಿಸಿದ್ದು ಇದಕ್ಕೆ ಕಾರಣ. 2016ರ ರಿಯೋ ಒಲಿಂಪಿಕ್ಸ್ನ ಒಸಿಒಜಿ ಯೇತರ ವೆಚ್ಚ 49.956 ಕೋಟಿ ರೂ. ಆಗಿತ್ತು. 2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಇದು 27,046 ಕೋಟಿ ರೂ. ಆಗಿದ್ದರೆ, 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 21,343 ಕೋಟಿ ರೂ. ಆಗಿತ್ತು.
2036ರ ಒಲಿಂಪಿಕ್ಸ್ ವೇಳೆ ಶೇ.30ರಷ್ಟು ಅಸ್ತಿತ್ವದಲ್ಲಿರುವ ಸೌಕರ್ಯಗಳನ್ನೇ ಬಳಸುವ ಯೋಜನೆ ಹಾಕಿಕೊಳ್ಳಲಾಗಿದೆ. ಜತೆಗೆ ಶೇ. 60 ಯೋಜಿತ ಕ್ರೀಡಾ ಮೂಲಸೌಕರ್ಯವನ್ನೇ ಉಪಯೋಗಿಸಲಾಗುತ್ತದೆ. ಶೇ. 10 ಮಾತ್ರ ತಾತ್ಕಾಲಿಕ ಮೂಲಸೌಕರ್ಯದ ಅಗತ್ಯವಿದೆ ಎಂದು ರೂಪುರೇಷೆ ವರದಿಯಲ್ಲಿ ತಿಳಿಸಲಾಗಿದೆ.
ಹಿಂದಿನ&ಭವಿಷ್ಯದ ಒಲಿಂಪಿಕ್ಸ್ ಒಸಿಒಜಿ ವೆಚ್ಚ
2012-ಲಂಡನ್: 22,449 ಕೋಟಿ ರೂ.
2016-ರಿಯೋ: 16,461 ಕೋಟಿ ರೂ.
2021-ಟೋಕಿಯೊ: 21,425 ಕೋಟಿ ರೂ.
2024-ಪ್ಯಾರಿಸ್: 32,765 ಕೋಟಿ ರೂ.
2028-ಎಲ್ಎ: 43,633 ಕೋಟಿ ರೂ.*
2032-ಲಂಡನ್: 26,522 ಕೋಟಿ ರೂ.*
2036-ಭಾರತ: 41,100 ಕೋಟಿ ರೂ.*
*ಅಂದಾಜು ವೆಚ್ಚದ ಲೆಕ್ಕಾಚಾರ
3 ಆಶ್ರಮಗಳ ಭೂಮಿ ಬಳಕೆ!
ಅಹಮದಾಬಾದ್ನಲ್ಲಿ ಒಲಿಂಪಿಕ್ಸ್ ಆತಿಥ್ಯಕ್ಕಾಗಿ ಕ್ರೀಡಾಗ್ರಾಮ ಮತ್ತು ಇತರ ಸೌಕರ್ಯಗಳನ್ನು ನಿರ್ಮಿಸುವ ಸಲುವಾಗಿ 650 ಎಕರೆ ಭೂಮಿಯನ್ನು ಸ್ವಾಧಿನಪಡಿಸಿಕೊಳ್ಳಲು ಗುಜರಾತ್ ಸರ್ಕಾರ ಮುಂದಾಗಿದೆ. ಇದರನ್ವಯ 3 ಆಶ್ರಮಗಳಾದ ಸಂತ ಶ್ರೀ ಅಸರಮ್ ಆಶ್ರಮ, ಭಾರತೀಯ ಸೇವಾ ಸಮಾಜ ಮತ್ತು ಸದಾಶಿವ ಪ್ರಜ್ಞಾ ಮಂಡಲದ ಭೂಮಿಯನ್ನು ಭೂಪೇಂದ್ರ ಪಟೇಲ್ ನೇತೃತ್ವದ ಸರ್ಕಾರ ವಶಪಡಿಸಿಕೊಳ್ಳಲಿದೆ ಮತ್ತು ಅದಕ್ಕೆ ಬದಲಾಗಿ ಈ ಟ್ರಸ್ಟ್ಗಳಿಗೆ ಬೇರೆ ಕಡೆ ಜಾಗವನ್ನೂ ನೀಡಲಿದೆ ಎಂದು ವರದಿಯಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥನಾಗಿ ಜೈಲು ಸೇರಿರುವ ಅಸರಮ್ನ ಆಶ್ರಮ ಮೊಟೆರಾದಲ್ಲಿದೆ. ಇದು ಒಲಿಂಪಿಕ್ಸ್ ಆತಿಥ್ಯದ ಪ್ರಮುಖ ಕೇಂದ್ರವಾದ ಸರ್ದಾರ್ ಪಟೇಲ್ ಕ್ರೀಡಾ ಸಂಕೀರ್ಣದ ಸಮೀಪದಲ್ಲೇ ಇದೆ.
2026ರ ವೇಳೆ ಆತಿಥ್ಯ ನಿರ್ಧಾರ
ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ (ಐಒಸಿ) ಜಿಂಬಾಬ್ವೆಯ ಕ್ರಿಸ್ಟಿ ಕೋವೆಂಟ್ರಿ ಇತ್ತೀಚೆಗೆ ಹೊಸ ಅಧ್ಯೆಯಾಗಿ ಆಯ್ಕೆಯಾಗಿದ್ದು, 2036ರ ಒಲಿಂಪಿಕ್ಸ್ ಆತಿಥೇಯ ದೇಶದ ಆಯ್ಕೆ ಪ್ರಕ್ರಿಯೆಗೆ ಶ್ರೀ ಚಾಲನೆ ನೀಡುವುದಾಗಿ ಹೇಳಿದ್ದಾರೆ. 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಸದ್ಯ ಭಾರತದೊಂದಿಗೆ ಕತಾರ್, ಸೌದಿ ಅರೇಬಿಯಾ ಸಹಿತ ಒಟ್ಟು 10 ದೇಶಗಳು ರೇಸ್ನಲ್ಲಿವೆ. 2026ರ ವೇಳೆ ಈ ಪೈಕಿ ಒಂದು ದೇಶಕ್ಕೆ ಆತಿಥ್ಯವನ್ನು ಐಒಸಿ ಅಂತಿಮಗೊಳಿಸಲಿದೆ.