ನವದೆಹಲಿ: ಇಂಗ್ಲೆಂಡ್ ಮತ್ತು ವೆಸ್ಟ್ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ಅಚ್ಚರಿಯ ದೃಶ್ಯವೊಂದು ಕಂಡುಬಂದಿದೆ. ಇಂಗ್ಲೆಂಡ್ ಇನ್ನಿಂಗ್ಸ್ ಸಮಯದಲ್ಲಿ ಸ್ಟೇಡಿಯಂನಲ್ಲಿ ಇಬ್ಬರು ಬೆನ್ ಸ್ಟೋಕ್ಸ್ ಕಾಣಿಸಿಕೊಂಡರು. ಈ ದೃಶ್ಯವನ್ನು ನೋಡಿ ಅಭಿಮಾನಿಗಳು ಒಂದು ಕ್ಷಣ ತಮ್ಮ ಕಣ್ಣನ್ನು ತಾವೇ ನಂಬಲಿಲ್ಲ. ಅಭಿಮಾನಿಗಳು ಮಾತ್ರವಲ್ಲ, ಇತ್ತೀಚೆಗಷ್ಟೇ ನಿವೃತ್ತರಾದ ಜೇಮ್ಸ್ ಆಂಡರ್ಸನ್ ಕೂಡ ಇದನ್ನು ನಂಬಲಿಲ್ಲ. ಅಷ್ಟಕ್ಕೂ ಸ್ಟೇಡಿಯಂನಲ್ಲಿ ಕಂಡುಬಂದಿದ್ದೇನು ಎಂಬುದನ್ನು ನಾವೀಗ ವಿವರವಾಗಿ ತಿಳಿದುಕೊಳ್ಳೋಣ.
ನಿನ್ನೆ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ಮುಂದುವರಿಸಿತು. ಈ ಸಮಯದಲ್ಲಿ ಕ್ಯಾಮೆರಾಮನ್ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರನ್ನೇ ಹೋಲುವ ಮತ್ತೊಬ್ಬ ವ್ಯಕ್ತಿಯನ್ನು ಸ್ಟೇಡಿಯಂನಲ್ಲಿ ಸೆರೆಹಿಡಿದರು. ಬಳಿಕ ಇಬ್ಬರನ್ನು ಒಟ್ಟಿಗೆ ತೋರಿಸಿದರು. ಇದನ್ನು ನೋಡಿದ ಆ್ಯಂಡರ್ಸನ್ ಅವರು ಬೆನ್ ಸ್ಟೋಕ್ಸ್ ಕಡೆ ನೋಡಿ ನಕ್ಕರು. ಸ್ಟೋಕ್ಸ್ ಕೂಡ ಅಚ್ಚರಿ ವ್ಯಕ್ತಪಡಿಸಿದರು.
ತನ್ನ ತದ್ರೂಪಿಯನ್ನು ನೋಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಆರಂಭದಲ್ಲಿ ಅದನ್ನು ನಂಬಲಿಲ್ಲ. ನಾಲ್ಕೈದು ಬಾರಿ ಕಣ್ಣು ಮಿಟುಕಿಸುತ್ತಾ, ಆಶ್ಚರ್ಯದಿಂದ ತನ್ನ ತದ್ರೂಪಿಯನ್ನೇ ನೋಡುತ್ತಾ ಮುಗುಳ್ನಕ್ಕರು. ಬಳಿಕ ತನ್ನ ಬೆರಳುಗಳಿಂದ ಒಂದು ಚಿಹ್ನೆಯನ್ನು ಮಾಡಿ ಕಣ್ಣುಗಳ ಮೇಲೆ ಇಟ್ಟು ನನ್ನ ಕಣ್ಣನ್ನು ನಾನೇ ನಂಬಲಾಗುತ್ತಿಲ್ಲ ಎನ್ನುವ ಅರ್ಥದಲ್ಲಿ ಅಚ್ಚರಿ ವ್ಯಕ್ತಪಡಿಸಿದರು. ಬೆನ್ ಸ್ಟೋಕ್ಸ್ ಪ್ರತಿಕ್ರಿಯೆ ನೋಡಿ ಪಕ್ಕದಲ್ಲಿ ಕುಳಿತಿದ್ದ ಆ್ಯಂಡರ್ಸನ್ ಕೂಡ ನಕ್ಕರು. ಇದೇ ಸಂದರ್ಭದಲ್ಲಿ ಸ್ಟೋಕ್ಸ್ ತದ್ರೂಪಿ ಕೂಡ ತನ್ನನ್ನು ತೆರೆಯ ಮೇಲೆ ನೋಡಿ ಆಶ್ಚರ್ಯಚಕಿತನಾದನು. ಸದ್ಯಕ್ಕೆ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್ನ ಮೊದಲ ಓವರ್ನಲ್ಲಿ ಇಂಗ್ಲೆಂಡ್ ಒಂದು ವಿಕೆಟ್ ಕಳೆದುಕೊಂಡಿತು. ಆದಾಗ್ಯೂ, ನಂತರ ಕ್ರೀಸ್ನಲ್ಲಿ ನೆಲೆ ನಿಂತ ಬೆನ್ ಡಕೆಟ್ ಮತ್ತು ಒಲಿ ಪೋಪ್ ಇನ್ನಿಂಗ್ಸ್ ಅನ್ನು ಮುನ್ನಡೆಸಿದರು. ಡಕೆಟ್ ಕೇವಲ 59 ಎಸೆತಗಳಲ್ಲಿ 71 ರನ್ ಗಳಿಸಿದರೆ ಪೋಪ್ 121 ರನ್ ಗಳಿಸಿದರು. ನಂತರ ಸ್ಟೋಕ್ಸ್ ಅರ್ಧಶತಕದ ನೆರವಿನೊಂದಿಗೆ ಇಂಗ್ಲೆಂಡ್ 416 ರನ್ ಗಳಿಸಿತು.
ವೆಸ್ಟ್ ಇಂಡೀಸ್ ದಿಟ್ಟ ಉತ್ತರ ನೀಡಿ ಮೊದಲ ಇನ್ನಿಂಗ್ಸ್‌ನಲ್ಲಿ 457 ರನ್ ಗಳಿಸಿ 41 ರನ್‌ಗಳ ಮುನ್ನಡೆ ಸಾಧಿಸಿತು. ಇದರಲ್ಲಿ ಕ್ವೆಮ್ ಹಾಡ್ಜ್ (121), ಅಲಿಕ್ ಅತಾನಾಜೆ (82) ಮತ್ತು ಜೋಶುವಾ ಡಿಸಿಲ್ವಾ (82) ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 425 ರನ್ ಗಳಿಸಿದೆ. ಇದರೊಂದಿಗೆ 384 ರನ್‌ಗಳ ಮುನ್ನಡೆ ಪಡೆದೆ. ಸದ್ಯ ವೆಸ್ಟ್ ಇಂಡೀಸ್ ಚೇಸಿಂಗ್ನಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಸಂಕಷ್ಟದಲ್ಲಿದೆ. (ಏಜೆನ್ಸೀಸ್)