ಕ್ರೀಡೆ

LSG ಕೂಡಿಕೊಂಡ ವೆಸ್ಟ್​ಇಂಡೀಸ್​ನ ಮಾರಕ ವೇಗಿ; ಆರ್​ಸಿಬಿ ಕೈತಪ್ಪಿತ್ತು ಮಹತ್ತರ ಅವಕಾಶ

ನವದೆಹಲಿ: 17ನೇ ಆವೃತ್ತಿ ಐಪಿಎಲ್​ಗಾಗಿ ಈಗಾಗಲೇ ಬಿಸಿಸಿಐ ಸಿದ್ಧತೆಗಳನ್ನು ಆರಂಭಿಸಿದ್ದು, ಫ್ರಾಂಚೈಸಿಗಳು ತಯಾರಿ ಆರಂಭಿಸಿವೆ. ಈ ನಡುವೆ ಆಟಗಾರರ ಗಾಯದ ಸಮಸ್ಯೆ ಫ್ರಾಂಚೈಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಬದಲಿ ಆಟಗಾರರ ಆಯ್ಕೆಯಲ್ಲಿ ತಂಡಗಳು ನಿರತವಾಗಿವೆ.

ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಗಾಯದ ಸಮಸ್ಯೆಯಿಂದಾಗಿ ಐಪಿಎಲ್​ನಿಂದ ಹೊರಬಿದ್ದಿರುವ ಇಂಗ್ಲೆಂಡ್​ ವೇಗಿ ಮಾರ್ಕ್​ ವುಡ್​ ಬದಲಿಗೆ ವೆಸ್ಟ್​ ಇಂಡೀಸ್​ನ ಶಮರ್ ಜೋಸೆಫ್ ಲಖನೌ ಸೂಪರ್​ಜೈಂಟ್ಸ್​ ಕೂಡಿಕೊಂಡಿದ್ಧಾರೆ ಎಂದು ತಿಳಿದು ಬಂದಿದೆ. ಆದರೆ, ಈ ವೇಗಿ ಲಖನೌ ತಂಡ ಕೂಡಿಕೊಳ್ಳುತ್ತಿರುವುದರಿಂದ ಆರ್​ಸಿಬಿ ಪಾಲಿಗಿದ್ದ ಸುವರ್ಣಾವಕಾಶ ಕೈತಪ್ಪಿದೆ ಎಂದು ಕ್ರೀಡಾ ಪಂಡಿತರು ಅಭಿಪ್ರಾಯಪಟ್ಟಿದ್ಧಾರೆ.

ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ವಿಂಡೀಸ್ ಪಡೆ ಗೆಲ್ಲುವಲ್ಲಿ ಶಮರ್ ಜೋಸೆಫ್ ಪ್ರಮುಖ ಪಾತ್ರವಹಿಸಿದ್ದರು. ಎರಡನೇ ಇನ್ನಿಂಗ್ಸ್​ನಲ್ಲಿ 7 ವಿಕೆಟ್ ಕಬಳಿಸಿದ್ದ ಜೋಸೆಫ್, ಗಬ್ಬಾದಲ್ಲಿ ವಿಂಡೀಸ್​ಗೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು.

ಶಮರ್​ರಗೆ ಐಪಿಎಲ್​ನ ಹಲವು ಫ್ರಾಂಚೈಸಿಗಳು ಗಾಳ ಹಾಕುತ್ತಿವೆ ಎಂದು ಈ ಹಿಂದೆ ವರದಿಯಾಗಿತ್ತು. ಅದರಲ್ಲಿ ಆರ್​ಸಿಬಿ ತಂಡವೂ ಸೇರಿದೆ ಎಂಬ ಸುದ್ದಿಯೂ ವ್ಯಾಪಕವಾಗಿ ಕೇಳಿ ಬಂದಿತ್ತು. ಆದರೀಗ ಯುವ ಮಾರಕ ವೇಗಿಯನ್ನು ತನ್ನ ಬತ್ತಳಿಕೆಗೆ ಹಾಕಿಕೊಳ್ಳುವಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ.

ಮೊದಲ ಬಾರಿಗೆ ಐಪಿಎಲ್ ಲೋಕಕ್ಕೆ ಕಾಲಿಟ್ಟಿರುವ ಶಮರ್ ಜೋಸೆಫ್​ರನ್ನು ಲಕ್ನೋ ಫ್ರಾಂಚೈಸಿ 3 ಕೋಟಿ ರೂ.ಗೆ ಖರೀದಿಸಿದೆ. ಇದಕ್ಕೆ ಸಂಬಂಧಿಸಿದ ಪತ್ರಿಕಾ ಪ್ರಕಟಣೆಯನ್ನು ಐಪಿಎಲ್ ತನ್ನ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಂಡಿದೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿರುವ ಶಮರ್​ ಜೋಸೆಫ್​ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದು. ಆಡಿದ ಎರಡು ಟೆಸ್ಟ್​ಗಳಲ್ಲಿ 13 ವಿಕೆಟ್ ಪಡೆದಿದ್ಧಾರೆ. ಇದನ್ನು ಹೊರತುಪಡಿಸಿ ಜೋಸೆಫ್, 7 ಪ್ರಥಮ ದರ್ಜೆ ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದಾರೆ.