ಕ್ರೀಡೆ

ಮುಂಬೈ ಇಂಡಿಯನ್ಸ್​ಗೆ​ ಹಾರ್ದಿಕ್​ ಅತ್ಯುತ್ತಮ​​ ಕ್ಯಾಪ್ಟನ್! ಹೀಗೆ ಹೇಳಲು ಈ 3 ಕಾರಣಗಳು ಸಾಕಾ? | IPL 2025

ಮುಂಬೈ: ಕಳೆದ ವರ್ಷ ಇಂಡಿಯನ್​ ಪ್ರೀಮಿಯರ್ ಲೀಗ್ 2024ರ ಆವೃತ್ತಿ ಬಗ್ಗೆ ಹೊಸ ಮಾಹಿತಿ ಹೊರಬೀಳುತ್ತಿದ್ದಂತೆ ಮುಂಬೈ ಇಂಡಿಯನ್ಸ್​ ತಂಡಕ್ಕೆ ಕ್ಯಾಪ್ಟನ್​ ಆಗಿ ಗುಜರಾತ್ ಟೈಟನ್ಸ್​ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ, ವ್ಯಾಪಕ ಟೀಕೆ, ಟಿಪ್ಪಣಿಗಳ ನಡುವೆಯೇ ಎಂಐಗೆ ನಾಯಕನಾಗಿ ಆಯ್ಕೆಯಾದರು. ಐದು ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ಚಾಂಪಿಯನ್ಸ್​ ಪಟ್ಟಕೇರಿಸಿದ ರೋಹಿತ್ ಶರ್ಮಾರನ್ನು ದಿಢೀರ್​ ನಾಯಕನ ಸ್ಥಾನದಿಂದ ಕೆಳಗಿಳಿಸಿ ಹಾರ್ದಿಕ್​ಗೆ ಎಂಐ ನಾಯಕತ್ವವನ್ನು ವಹಿಸಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಕಿಂಚಿತ್ತು ಸರಿ ಅನಿಸಲಿಲ್ಲ. ಇದೊಂದು ವಿಚಾರಕ್ಕೆ ಕ್ರಿಕೆಟ್ ಪ್ರೇಮಿಗಳು ಮುಂಬೈ ಫ್ರಾಂಚೈಸಿ (IPL 2025) ವಿರುದ್ಧ ತೀವ್ರ ಕಿಡಿಕಾರಿದ್ದರು. ಅಂದಿನಿಂದಲೂ ಪಾಂಡ್ಯ ಕ್ಯಾಪ್ಟನ್ಸಿ ಬಗ್ಗೆ ಅಸಮಾಧಾನದ ಮಾತುಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿವೆ.

ಗುಜರಾತ್ ಟೈಟನ್ಸ್​ಗೆ ನಾಯಕನಾಗಿದ್ದ ಹಾರ್ದಿಕ್​, ಎರಡು ಬಾರಿ ತಂಡವನ್ನು​ ಫೈನಲ್ಸ್​ಗೆ ತಂದು, ಒಂದು ಸೀಸನ್​ನ ಟ್ರೋಫಿ ಗೆದ್ದು ಕೊಟ್ಟರು. ಈ ಮೂಲಕ ಯಶಸ್ವಿ ಕ್ಯಾಪ್ಟನ್​ಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಮುಂಚೂಣಿಯಲಿದ್ದರು. ತನ್ನ ಹಿಂದಿನ ತಂಡ ಮುಂಬೈ ಇಂಡಿಯನ್ಸ್​​ಗೆ ವಾಪಾಸ್​ ಆಗುವ ನಿರ್ಧಾರ ಕೈಗೊಂಡು ರೋಹಿತ್​ ಜಾಗ ಆವರಿಸಿದ ಪಾಂಡ್ಯ, 17ನೇ ಆವೃತ್ತಿಯಲ್ಲಿ ತಮ್ಮ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುವಲ್ಲಿ ಮುಗ್ಗರಿಸಿದರು. ಆರಂಭದಲ್ಲಿ ಫ್ಯಾನ್ಸ್ ನುಡಿದ ಭವಿಷ್ಯ, ಸೀಸನ್​ ಅಂತ್ಯದಲ್ಲಿ ನಿಜವಾಯಿತು. ಅತ್ಯಂತ ಕಳಪೆ ಪ್ರದರ್ಶನ ತೋರಿದ ಹಾರ್ದಿಕ್​, ತಂಡವನ್ನು ಮುನ್ನಡೆಸುವಲ್ಲಿ ಭಾರೀ ಹಿನ್ನಡೆ ಅನುಭವಿಸಿದರು. ಸದ್ಯ ಈ ವಿಷಯಗಳು ಅವರ ಕ್ಯಾಪ್ಟನ್ಸಿಗೆ ಉಳಿಗಾಲವಿಲ್ಲ ಎಂಬುದನ್ನು ಒತ್ತಿ ಹೇಳಿತ್ತು. ಇದೀಗ 2025ರಲ್ಲಿ ಪಾಂಡ್ಯ ನಾಯಕನಾಗಿ ಮುಂದುವರೆಯಲಿದ್ದಾರಾ ಎಂಬ ಚರ್ಚೆಗಳು ತೀವ್ರ ಭುಗಿಲೆದ್ದಿವೆ. ಒಂದೆಡೆ ಅವರು ಒಂದು ಬಾರಿಯೂ ಕಪ್ ಗೆಲ್ಲದ ಆರ್​ಸಿಬಿ ತಂಡ ಸೇರಲಿದ್ದಾರೆ ಎಂದು ಹೇಳಲಾಗಿದ್ದು, ಇದು ಖಚಿತ ಮಾಹಿತಿಯೇ ಎಂಬುದನ್ನು ಶೀಘ್ರದಲ್ಲೇ ನಡೆಯಲಿರುವ ಐಪಿಎಲ್ ಪ್ರಕ್ರಿಯೆ ದಿನದಂದು ಕಾದು ತಿಳಿಯಬೇಕಿದೆ.

ಅಸಲಿಗೆ ಈ ಮೂರು ಕಾರಣಗಳು ಅವರ ನಾಯಕತ್ವ ಉಳಿಯುವುದು ತಂಡಕ್ಕೆ ಸೂಕ್ತ ಎಂದು ಸೂಚಿಸಿವೆ. ಆ ಮೂರು ಕಾರಣಗಳು ಈ ಕೆಳಕಂಡಂತಿವೆ.

1. ಆಲ್​ರೌಂಡರ್ ಹಾರ್ದಿಕ್​

ಒಬ್ಬ ಕ್ಯಾಪ್ಟನ್ ಎಂದು ಹೇಳುವುದಕ್ಕಿಂತ ಮೊದಲು ಪಾಂಡ್ಯ ತಂಡದ ಉತ್ತಮ ಆಲ್​ರೌಂಡರ್​ ಎಂಬುದು ಇಲ್ಲಿ ಗಮನಾರ್ಹ. ಬೌಲಿಂಗ್, ಬ್ಯಾಟಿಂಗ್ ಮತ್ತು ಅತ್ಯುತ್ತಮ ಫೀಲ್ಡಿಂಗ್ ಕೌಶಲ್ಯ ಹೊಂದಿರುವ ಹಾರ್ದಿಕ್​, ಮುಂಬೈ ಇಂಡಿಯನ್ಸ್ ನಾಯಕನ ಜವಾಬ್ದಾರಿ ಹೊರಲು ಸಾಮರ್ಥ್ಯರಿದ್ದಾರೆ. ಒಂದು ತಂಡದ ಗೆಲುವಿಗೆ ಆಲ್​ರೌಂಡ್ ಪ್ರದರ್ಶನ ಕೂಡ ಪ್ರಮುಖ ಪಾತ್ರ ವಹಿಸಲಿದೆ.

2. ನಾಯಕತ್ವ ಬಲ

ಈ ಹಿಂದೆ ಎರಡು ವರ್ಷಗಳ ಕಾಲ ಗುಜರಾತ್ ಟೈಟನ್ಸ್ ನಾಯಕನಾಗಿ ತಂಡವನ್ನು ಮುನ್ನಡೆಸಿದ ಹಾರ್ದಿಕ್​, ಮೊದಲ ವರ್ಷವೇ ಟೀಮ್​ನ ಚಾಂಪಿಯನ್ಸ್ ಪಟ್ಟಕೇರಿಸಿದರು. ತದನಂತರದ ವರ್ಷದಲ್ಲಿ ಫೈನಲ್​ವರೆಗೂ ತಂಡವನ್ನು ಕರೆದೊಯ್ದ ಪಾಂಡ್ಯ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿ, ರನ್ನರ್​ ಅಪ್​ ಸ್ಥಾನ ಪಡೆದರು. ತಂಡದ ಆಟಗಾರರ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು, ಗೆಲುವಿನ ನಕ್ಷೆ ಹಾಕಿಕೊಳ್ಳುವುದನ್ನು ಕರಗತ ಮಾಡಿಕೊಂಡಿರುವ ಹಾರ್ದಿಕ್​ , ಮುಂಬರುವ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ತಂದುಕೊಡಬಹುದು ಎಂಬ ನಿರೀಕ್ಷೆಗಳಿವೆ.

3. ಮುಂಬೈ ಇಂಡಿಯನ್ಸ್​ನ ಭವಿಷ್ಯ ಆಟಗಾರ

ಈ ಹಿಂದೆ ಐದು ಬಾರಿ ತಂಡವನ್ನು ಚಾಂಪಿಯನ್ಸ್ ಆಗಿ ಮಾಡಿರುವ ರೋಹಿತ್ ಶರ್ಮ ಸದ್ಯ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಹೆಚ್ಚಿನ ಕಾಲ ಮುಂಬೈಗೆ ರೋಹಿತ್ ಆಡುವುದು ಬಹುತೇಕ ಡೌಟ್. ಹೀಗಿರುವ ಕಾರಣ ಅವರ ಸ್ಥಾನದಲ್ಲಿ ನಿಂತು ತಂಡವನ್ನು ಪಾಂಡ್ಯ ಮುನ್ನಡೆಸಬೇಕಿದೆ. ಯಶಸ್ವಿ ಆಲ್​ರೌಂಡರ್ ಆಗಿ ಗುರುತಿಸಿಕೊಂಡಿರುವ ಹಾರ್ದಿಕ್​, ಇನ್ನು ಹಲವು ವರ್ಷಗಳ ಕಾಲ ತಂಡಕ್ಕೆ ಆಡುವ ನಿರೀಕ್ಷೆಯಿದೆ. ಹೀಗಾಗಿ ಮುಂಬೈಗೆ ಪಾಂಡ್ಯ ಉಪಸ್ಥಿತಿ ಬಹಳ ಮುಖ್ಯವಾಗಲಿದ್ದು, ಭವಿಷ್ಯದ ಸ್ಟಾರ್​ ಆಟಗಾರರಾಗಿ ಗುರುತಿಸಿಕೊಳ್ಳುವ ಅವಕಾಶ ಹೆಚ್ಚಿದೆ. ಇದು ಕೂಡ ಒಂದು ಪ್ರಮುಖ ಕಾರಣವಾಗಬಹುದು,(ಏಜೆನ್ಸೀಸ್).