ಕ್ರೀಡೆ

ಭಾರತದಲ್ಲಿ 'ಫೇರ್​ ಆ್ಯಂಡ್​ ಲವ್ಲೀ' ಯಾಕಿದೆ? ವಿಂಡೀಸ್​ ಕ್ರಿಕೆಟಿಗ ಸ್ಯಾಮ್ಮಿ ಪ್ರಶ್ನೆ ಎತ್ತಿದ್ದೇಕೆ?

ನವದೆಹಲಿ: ಐಪಿಎಲ್​ನಲ್ಲಿ ವರ್ಣಭೇದ ಎದುರಿಸಿದ್ದೆ ಎಂದು ಆರೋಪಿಸಿ ವಿವಾದ ಸೃಷ್ಟಿಸಿದ್ದ ವೆಸ್ಟ್​ ಇಂಡೀಸ್​ ಕ್ರಿಕೆಟ್​ ತಂಡದ ಮಾಜಿ ನಾಯಕ ಡರೇನ್​ ಸ್ಯಾಮ್ಮಿ, ಜನಾಂಗೀಯ ಸಮಾನತೆಯ ಹೋರಾಟದ ಬಗ್ಗೆ ಸಾಕಷ್ಟು ಅಭಿಪ್ರಾಯಗಳನ್ನು ಮಂಡಿಸುತ್ತಲೇ ಇದ್ದಾರೆ. ಇದೀಗ ಅವರ ಕಣ್ಣು ಮತ್ತೊಮ್ಮೆ ಭಾರತದ ಮೇಲೆ ಬಿದ್ದಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಭಾರತದಂಥ ದೇಶದಲ್ಲಿ 'ಫೇರ್​ ಆ್ಯಂಡ್​ ಲವ್ಲೀ' ಹೆಸರಿನ ಫೇರ್​ನೆಸ್​ ಕ್ರೀಮ್​ ಯಾಕಿದೆ ಎಂದು ಅವರು ಈಗ ಪ್ರಶ್ನೆ ಎತ್ತಿದ್ದಾರೆ. ಈ ಮೂಲಕ, ಭಾರತದಲ್ಲಿ ವರ್ಣಭೇದವನ್ನು ಪ್ರೋತ್ಸಾಹಿಸಲಾಗುವುದೇ ಎಂದು ಪ್ರಶ್ನಿಸಿದ್ದಾರೆ.

'ಭಾರತದ ಜಾಹೀರಾತಿನಲ್ಲಿ, ಫೇರ್​ ಆ್ಯಂಡ್​ ಲವ್ಲೀ ಕಂಪನಿ ಹೇಳುತ್ತದೆ, ಗೌರವರ್ಣದ ಜನರೆಲ್ಲರೂ ಪ್ರೀತಿ ಪಾತ್ರರೆಂದು. ಹಾಗಂದರೆ ಅರ್ಥವೇನು? ಬೆಳ್ಳಗಿರುವವರೆಲ್ಲರೂ ಒಳ್ಳೆಯವರಾಗಿರುತ್ತಾರೆ ಎಂದು ಪರೋಕ್ಷವಾಗಿ ಹೇಳುತ್ತಿದೆಯೇ? ವರ್ಣಭೇದವನ್ನು ಇದು ಪ್ರೋತ್ಸಾಹಿಸುವುದೇ?' ಎಂದು 36 ವರ್ಷದ ಸ್ಯಾಮ್ಮಿ ಭಾರತದ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರಶ್ನೆ ಎತ್ತಿದ್ದಾರೆ. ದಶಕಗಳಿಂದ ಚಾಲ್ತಿಯಲ್ಲಿದ್ದ ತನ್ನ ಜಾಹೀರಾತಿಗೆ ಇತ್ತೀಚೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ 'ಫೇರ್​ ಆ್ಯಂಡ್​ ಲವ್ಲೀ' ಕಂಪನಿ, 'ಫೇರ್​' ಪದವನ್ನು ತೆಗೆದುಹಾಕುವುದಾಗಿ ಕೆಲದಿನಗಳ ಹಿಂದೆಯಷ್ಟೇ ಘೋಷಿಸಿತ್ತು.

'ವರ್ಣೀಯತೆ ಭಾರತದಲ್ಲಿ ಸಂಸ್ಕೃತಿಯ ಭಾಗ ಎಂದು ನನಗೆ ಇತ್ತೀಚೆಗೆ ಹೇಳಲಾಗಿತ್ತು. ಆದರೆ ಅದು ಸಂಸ್ಕೃತಿ ಎಂದ ಮಾತ್ರಕ್ಕೆ ಸರಿಯಾದುದೇ? ಜನರು ಎಲ್ಲರನ್ನೂ ಸಮಾನರಾಗಿ ಕಾಣಬೇಕಾಗಿದೆ. ಎಲ್ಲರಿಗೂ ಪ್ರೋತ್ಸಾಹ ಸಿಗಬೇಕು. ಈ ಬಗ್ಗೆ ಶಿಕ್ಷಣ ನೀಡಬೇಕಾದ ಅಗತ್ಯವಿದೆ' ಎಂದು ಸ್ಯಾಮ್ಮಿ ಹೇಳಿದ್ದಾರೆ.

ಅಮೆರಿಕದಲ್ಲಿ ಜಾರ್ಜ್​ ಫ್ಲಾಯ್ಡ್​ ಹತ್ಯೆಯಾದ ಬಳಿಕ ಜನಾಂಗೀಯ ಸಮಾನತೆಗೆ ವಿಶ್ವದೆಲ್ಲೆಡೆ ದೊಡ್ಡ ಮಟ್ಟದ ಹೋರಾಟವೇ ನಡೆಯುತ್ತಿದೆ. ವಿಂಡೀಸ್​ ಕ್ರಿಕೆಟಿಗರು ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 'ಬ್ಲ್ಯಾಕ್​ ಲೈವ್ಸ್​ ಮ್ಯಾಟರ್'​ ಲೋಗೋ ಧರಿಸಿ ಆಡುವುದಾಗಿ ಈಗಾಗಲೆ ತಿಳಿಸಿದ್ದಾರೆ. ಫುಟ್​ಬಾಲ್​ನಲ್ಲೂ ಹಲವು ಆಟಗಾರರು ಈ ಲಾಂಛನದ ಜೆರ್ಸಿ ಧರಿಸುವ ಮೂಲಕ ಜನಾಂಗೀಯ ಸಮಾನತೆಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಸ್ಯಾಮ್ಮಿ ಕೂಡ ಇತ್ತೀಚೆಗೆ, ಜನಾಂಗೀಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಾಗಿದೆ ಎಂದಿದ್ದರು. ವಿಂಡೀಸ್​ಗೆ 2 ಟಿ20 ವಿಶ್ವಕಪ್​ ಗೆದ್ದುಕೊಟ್ಟಿರುವ ನಾಯಕರಾಗಿರುವ ಸ್ಯಾಮ್ಮಿ, ಐಪಿಎಲ್​ನಲ್ಲಿ ಸನ್​ರೈಸರ್ಸ್​ ತಂಡದ ಪರ ಆಡುತ್ತಿದ್ದಾಗ ಸಹ-ಆಟಗಾರರು ತಮ್ಮನ್ನು 'ಕಾಲೂ' (ಕರಿಯ) ಎಂದು ಕರೆಯುತ್ತಿದ್ದರೆಂದು ಆರೋಪಿಸಿದ್ದರು.