ಕ್ರೀಡೆ

ಕೈಗೆ ಗ್ರೀನ್​ ಬ್ಯಾಂಡ್ ಧರಿಸಿ​ ಕಣಕ್ಕಿಳಿದ Team India-England ಆಟಗಾರರು; ಅಷ್ಟಕ್ಕೂ ಈ ರೀತಿ ಮಾಡಲು ಕಾರಣವೇನು?

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ಇಂಗ್ಲೆಂಡ್ (England) ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಪ್ರವಾಸಿ ತಂಡವು ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಆತಿಥೇಯರು ಭರ್ಜರಿ ಮೊತ್ತ ಪೇರಿಸುವ ಮುನ್ಸೂಚನೆಯನ್ನು ನೀಡಿದ್ದಾರೆ.

ಭಾರತ (Team India) ಹಾಗೂ ಇಂಗ್ಲೆಂಡ್​ (England) ನಡುವಿನ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಉಭಯ ದೇಶದ ಆಟಗಾರರು ಕೈಗೆ ಹಸಿರುಪಟ್ಟಿಯನ್ನ ಧರಿಸಿ ಕಣಕ್ಕಿಳಿದಿದ್ದು, ಇದು ಅಚ್ಚರಿಗೆ ಕಾರಣವಾಗಿದೆ. ಸಾಮಾನ್ಯವಾಗಿ ನಾವು ನೋಡಿರುವಂತೆ ಯಾರಾದರೂ ಗಣ್ಯರು ಮೃತಪಟ್ಟಾಗ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯುತ್ತಾರೆ. ಆದರೆ, ಇದೀಗ ಹಸಿರು ಬ್ಯಾಂಡ್ ಧರಿಸಿ ಕಣಕ್ಕಿಳಿದಿದ್ದು, ಈ ರೀತಿ ಮಾಡಿದರ ಹಿಂದೆ ಕಾರಣವನ್ನು ತಿಳಿಸಲಾಗಿದೆ.

ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಬಿಸಿಸಿಐ ಅಂಗಾಂಗ ದಾನದ ಮಹತ್ವವನ್ನು ಸಾರಲು ಮುಂದಾಗಿದ್ದು, ಈ ಕಾರಣಕ್ಕಾಗಿ ಉಭಯ ದೇಶದ ಆಟಗಾರರು ಕೈಗೆ ಹಸಿರು ಬ್ಯಾಂಡ್ ಧರಿಸಿ ಕಣಕ್ಕಿಳಿದಿದ್ದಾರೆ. ಇದಲ್ಲದೆ ಕೋಚ್ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಹಾಗೂ ಮೊಹಮ್ಮದ್​ ಶಮಿ ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಬಿಸಿಸಿಐ ಪೋಸ್ಟ್ ಮಾಡಿದೆ.

ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಮ್​ ಇಂಡಿಯಾ ಶುಭಮನ್ ಗಿಲ್ (112 ರನ್, 102 ಎಸೆತ, 14 ಬೌಂಡರಿ, 3 ಸಿಕ್ಸರ್​), ವಿರಾಟ್ ಕೊಹ್ಲಿ (52 ರನ್, 55 ಎಸೆತ, 7 ಬೌಂಡರಿ, 1 ಸಿಕ್ಸರ್)​ ಹಾಗೂ ಶ್ರೇಯಸ್ ಅಯ್ಯರ್​ (69 ರನ್*, 58 ಎಸೆತ, 7 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಫಲವಾಗಿ 37 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 246 ರನ್​ಗಳಿಸಿದ್ದು, ಬೃಹತ್ ಮೊತ್ತ ಪೇರಿಸುವ ಮುನ್ಸೂಚನೆಯನ್ನು ನೀಡಿದೆ.