ಕ್ರೀಡೆ

ಅಫ್ಘನ್​ ಸೆಮಿಫೈನಲ್​ ಪ್ರವೇಶಿಸಿದೆ ವಿಶ್ವಕಪ್​ ಗೆದ್ದಿಲ್ಲ; ಈ ರೀತಿಯ ಸಂಭ್ರಮಾಚರಣೆ ಯಾಕೆಂದ ಅಂಬಾಟಿ ರಾಯುಡು

ಹೈದರಾಬಾದ್: 2017ರಲ್ಲಿ ಐಸಿಸಿಯಿಂದ ಮಾನ್ಯತೆ ಪಡೆದರೂ ಕ್ರಿಕೆಟ್​ ಶಿಶು ಎಂದೇ ಕರೆಯಲ್ಪಡುತ್ತಿದ್ದ ಅಫ್ಘಾನಿಸ್ತಾನ ಕ್ರಿಕೆಟ್​ ತಂಡವು ಟಿ20 ವಿಶ್ವಕಪ್​ ಸೆಮಿಫೈನಲ್​ ಪ್ರವೇಶಿಸಿದ್ದು ಜೂನ್​ 27ರಂದು ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. ತಮ್ಮ ತಂಡ ಸೆಮಿಫೈನಲ್​ ಪ್ರವೇಶಿಸುತ್ತಿದ್ದಂತೆ ಅಫ್ಘಾನಿಸ್ತಾನದಲ್ಲಿ ಸಂಭ್ರಮಾಚರಣೆ ಮುಗಿಲುಮುಟ್ಟಿದ್ದು, ಖುದ್ದು ತಾಲಿಬಾನ್​ ಆಡಳಿತವೇ ತಂಡದ ಸದಸ್ಯರಿಗೆ ಕರೆ ಮಾಡಿ ಅಭಿನಂದಿಸಿದೆ. ಆದರೆ, ಈ ವಿಚಾರವಾಗಿ ಮಾತನಾಡಿರುವ ಅಂಬಾಟಿ ರಾಯುಡು ಅಫ್ಘಾನಿಸ್ತಾನ ಅಭಿಮಾನಿಗಳ ನಡೆಯನ್ನು ಟೀಕಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಫಾರ್ಮಿನಲ್ಲಿರುವ ಆಟಗಾರರ ಮೇಲೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಾ ಟೀಕೆಗೆ ಗುರಿಯಾಗಿರುವ ಅಂಬಾಟಿ ರಾಯುಡು ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅದು ಕೂಡ ಟಿ20 ವಿಶ್ವಕಪ್​ ಇತಿಹಾಸದಲ್ಲೇ ಪ್ರಪಥಮ ಬಾರಿಗೆ ಸೆಮಿಫೈನಲ್​ ಪ್ರವೇಶಿಸಿರುವ ಅಫ್ಘಾನಿಸ್ತಾನ ತಂಡದ ವಿರುದ್ಧ ಹೇಳಿಕೆ ನೀಡುವ ಸುದ್ದಿಯಾಗಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ರಾಯುಡು, ಅಫ್ಘಾನಿಸ್ತಾನ ಕ್ರಿಕೆಟ್​ ತಂಡವು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್​ನಂತಹ ತಂಡಗಳನ್ನು ಸೋಲಿಸಿ ಸೆಮಿಫೈನಲ್​ ಪ್ರವೇಶಿಸಿರುವುದು ಶ್ಲಾಘನೀಯ. ಆದರೆ, ನನಗೆ ಅರ್ಥವಾಗದೇ ವಿಚಾರ ಏನೆಂದರೆ ಅಫ್ಘಾನಿಸ್ತಾನದ ಅಭಿಮಾನಿಗಳು ತಮ್ಮ ತಂಡ ಸೆಮಿಫೈನಲ್​ ಪ್ರವೇಶಿಸಿರುವ ವಿಚಾರವನ್ನು ವಿಶ್ವಕಪ್​ ಗೆದ್ದಂತೆ ಯಾಕೆ ಸಂಭ್ರಮಿಸುತ್ತಿದ್ದಾರೆ. ಇದು ನನಗೆ ಆಶ್ಚರ್ಯವನ್ನುಂಟು ಮಾಡಿತ್ತು ಎಂದು ಹೇಳಿದ್ದಾರೆ.

ಇತ್ತ ಅಂಬಾಟಿ ರಾಯುಡು ಹೇಳಿಕೆಗೆ ಕಿಡಿಕಾರಿರುವ ನೆಟ್ಟಿಗರು ನೀವು ಹೊಗಳಿದ್ದಕ್ಕಿಂತ ಬೇರೆ ಅವರನ್ನು ದೂಷಿಸಿದ್ದೆ ಜಾಸ್ತಿ. ಕ್ರಿಕೆಟ್​ಗೆ ನಿಮ್ಮ ಹಾಗೂ ಫೂಟ್​ಬಾಲ್​ಗೆ ನಟ ಕಾರ್ತಿಕ್​ ಆರ್ಯನ್​ ಕೊಡುಗೆ ಎರಡು ಒಂದೇ ನೀವು ದಯವಿಟ್ಟು ಇನ್ನು ಮುಂದೆ ಪ್ಯಾನೆಲ್​ನಲ್ಲಿ ಮಾತನಾಡಲು ಬರಬೇಡಿ ಎಂದು ನೆಟ್ಟಿಗರು ಕಮೆಂಟ್​ ಹಾಕಿ ಕಿಡಿಕಾರಿದ್ದಾರೆ.