ನವದೆಹಲಿ: ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಂಡ ನಂತರ ಭಾರತ ತಂಡ ಎರಡು ಸರಣಿಗಳನ್ನು ಆಡಿದೆ. ಶ್ರೀಲಂಕಾ ವಿರುದ್ಧ ಮೂರು ಟಿ20 ಸರಣಿ ಹಾಗೂ ಮೂರು ಏಕದಿನ ಸರಣಿಗಳನ್ನು ಆಡಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟಿ20 ಮತ್ತು ರೋಹಿತ್ ಶರ್ಮ ನಾಯಕತ್ವದಲ್ಲಿ ಏಕದಿನ ಸರಣಿಯನ್ನು ಆಡಿದ್ದಾರೆ.
ಮುಖ್ಯ ಕೋಚ್ ಆಗಿ ನೇಮಕವಾದ ಗಂಭೀರ್ ಅವರಿಗೆ ಟಿ20 ಸರಣಿಯು ಮೊದಲ ಸವಾಲಾಗಿತ್ತು. ಇದರಲ್ಲಿ ಗಂಭೀರ್ ಯಶಸ್ವಿಯಾದರು. ಹೊಸ ನಾಯಕ ಮತ್ತು ಯುವ ಆಟಗಾರರೊಂದಿಗೆ ಯುವ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಶ್ರೀಲಂಕಾವನ್ನು 3-0 ಅಂತರದಿಂದ ಸೋಲಿಸಿದ ಟೀಮ್ ಇಂಡಿಯಾ, ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತು. ಆದರೆ, ಏಕದಿನ ಸರಣಿಯಲ್ಲಿ ಗಂಭೀರ್ ತಮ್ಮ ನಿರೀಕ್ಷೆಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. 2-0 ಅಂತರದಿಂದ ಏಕದಿನ ಸರಣಿ ಕೈತಪ್ಪಿತು.
ತಾಜಾ ಸಂಗತಿ ಏನೆಂದರೆ, ಗಂಭೀರ್ ಅವರು ಮುಖ್ಯ ಕೋಚ್ ಆಗಿ ಕೆಲವು ಸ್ವರೂಪಗಳಿಗೆ ಸೀಮಿತವಾಗಲಿದ್ದಾರೆ ಎಂಬ ವದಂತಿಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ ಷಾ, ನಿರ್ದಿಷ್ಟ ಸ್ವರೂಪವನ್ನು ಮಾತ್ರ ಮುನ್ನಡೆಸಿ ಎಂದು ಹೇಳಲು ನಾನು ಯಾರು? ನಾವು ಗಂಭೀರ್ ಅವರನ್ನು ಎಲ್ಲ ಮೂರು ಸ್ವರೂಪಗಳಿಗೆ ಮುಖ್ಯ ಕೋಚ್ ಆಗಿ ನೇಮಿಸಿದ್ದೇವೆ. ಅವರು ಎಲ್ಲ ಮೂರು ಸ್ವರೂಪಗಳಲ್ಲಿ ಭಾರತವನ್ನು ಮುನ್ನಡೆಸಲು ತುಂಬಾ ಉತ್ಸುಕರಾಗಿದ್ದಾರೆ. ಹೀಗಾಗಿ ನಾವು ಗಂಭೀರ್‌ಗೆ ನೀವು ಈ ಫಾರ್ಮ್ಯಾಟ್‌ಗಳಿಗೆ ಕೋಚ್ ಆಗಿದ್ದೀರಿ ಮತ್ತು ನೀವು ಆ ಸ್ವರೂಪವನ್ನು ಮುಟ್ಟಬಾರದು ಎಂದು ಹೇಳಲಾಗುವುದಿಲ್ಲ ಎಂದು ಜಯ ಷಾ ಸ್ಪಷ್ಟಪಡಿಸಿದ್ದಾರೆ.
ಮುಖ್ಯ ಕೋಚ್ ಆಗಿರುವ ಗಂಭೀರ್ ಅವರಿಗೆ ನಿಜವಾದ ಪರೀಕ್ಷೆ ಟೆಸ್ಟ್ ಮಾದರಿಯಲ್ಲಿರುತ್ತದೆ ಎಂದು ಕ್ರಿಕೆಟ್ ತಜ್ಞರು ಹೇಳಿದ್ದಾರೆ. ಸೆಪ್ಟೆಂಬರ್ 19ರಿಂದ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ ಟೆಸ್ಟ್ ಸರಣಿ ಆಡಲಿದ್ದು, ಆ ಬಳಿಕ ಭಾರತ ತಂಡ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಸರಣಿ ಆಡಲಿದೆ. ಇದಲ್ಲದೆ, ಮುಂದಿನ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ನಡೆಯಲಿದೆ.
ಕಳೆದೆರಡು ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಗಳನ್ನು ಆಡಿದ ಟೀಮ್ ಇಂಡಿಯಾ ಚಾಂಪಿಯನ್ ಆಗಿ ನಿಲ್ಲಲು ಸಾಧ್ಯವಾಗಲಿಲ್ಲ. 2021 ರಲ್ಲಿ ನ್ಯೂಜಿಲೆಂಡ್ ಮತ್ತು 2023 ರಲ್ಲಿ ಆಸ್ಟ್ರೇಲಿಯಾ ನಮ್ಮ ವಿರುದ್ಧ ಗೆದ್ದಿದೆ. ಆ ಕೊರತೆಯನ್ನು ಗಂಭೀರ್ ನೀಗಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)