ಕ್ರೀಡೆ

ಕಿವೀಸ್​ ವಿರುದ್ಧದ ವೈಟ್​ವಾಷ್​ ಅತ್ಯಂತ ಕೆಟ್ಟ ಅನುಭವ: ಆರ್​. ಅಶ್ವಿನ್​ ಬೇಸರ

ಮುಂಬೈ: ಭಾರತ ತಂಡ ಇತ್ತೀಚೆಗೆ ತವರಿನಲ್ಲಿ ನಡೆದ ಟೆಸ್ಟ್​ ಸರಣಿಯಲ್ಲಿ ಪ್ರವಾಸಿ ನ್ಯೂಜಿಲೆಂಡ್​ ಎದುರು ಫೇವರಿಟ್​ ತಂಡವಾಗಿ ಕಣಕ್ಕಿಳಿದ ನಡುವೆಯೂ 0-3 ಅಂತರದಿಂದ ವೈಟ್​ವಾಷ್​ ಎದುರಿಸಿತು. ಈ ಹೀನಾಯ ಸೋಲಿನ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿರುವ ಅನುಭವಿ ಆ್​ ಸ್ಪಿನ್ನರ್​ ಆರ್​. ಅಶ್ವಿನ್​, ಈ ವಾಷ್​ವಾಷ್​ ಮುಖಭಂಗ ತನಗೆ ವೃತ್ತೀಜಿವನದ ಅತ್ಯಂತ ಕೆಟ್ಟ ಅನುಭವ ನೀಡಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

2013ರಿಂದ ತವರಿನಲ್ಲಿ ಸತತ 18 ಟೆಸ್ಟ್​ ಸರಣಿ ಗೆದ್ದು ಬೀಗಿದ್ದ ಭಾರತ ತಂಡದ ಗೆಲುವಿನ ಓಟಕ್ಕೂ ಈ ಸರಣಿ ತಡೆಯೊಡ್ಡಿತು. ಜತೆಗೆ ಭಾರತ ತವರಿನಲ್ಲಿ 3 ಪಂದ್ಯಗಳ ಸರಣಿಯಲ್ಲಿ ಮೊದಲ ಬಾರಿ ವೈಟ್​ವಾಷ್​ ಮುಖಭಂಗ ಎದುರಿಸಿತು.

"ನ್ಯೂಜಿಲೆಂಡ್​ ವಿರುದ್ಧದ 0-3 ಸೋಲು ನಮಗೆ ಆಘಾತ ನೀಡಿದೆ. ಭಾರತ ಹಿಂದೆಂದೂ ತವರಿನಲ್ಲಿ ಈ ರೀತಿ ಸೋತಿರಲಿಲ್ಲ ಎಂಬುದನ್ನು ನಾನೆಲ್ಲೋ ಓದಿದೆ. ನನ್ನ ವೃತ್ತೀಜಿವನ ಮತ್ತು ಅನುಭವದಲ್ಲಿ ಎಂದೂ ಆಟದ ವೇಳೆ ಹೆಚ್ಚಿನ ಭಾವನೆಗಳನ್ನು ಪ್ರದರ್ಶಿಸಿಲ್ಲ. ಆದರೆ ಇದೊಂದು ಅತ್ಯಂತ ಕೆಟ್ಟ ಅನುಭವವಾಗಿದೆ. ಈ ಸೋಲಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದೇ ನನಗೆ 2-3 ದಿನಗಳ ಕಾಲ ತೋಚಲಿಲ್ಲ' ಎಂದು ಅಶ್ವಿನ್​ ತನ್ನ ಯೂಟ್ಯೂಬ್​ ಚಾನಲ್​ನಲ್ಲಿ ಹೇಳಿದ್ದಾರೆ.

ಸರಣಿಯಲ್ಲಿ ಭಾರತ ತಂಡದ ಕಳಪೆ ನಿರ್ವಹಣೆಗೆ ತಾನೂ ಜವಾಬ್ದಾರನೆಂದು ಒಪ್ಪಿಕೊಂಡ ಅಶ್ವಿನ್​, ತನ್ನ ಸಾಧಾರಣಕ್ಕಿಂತ ಕೆಳಗಿನ ನಿರ್ವಹಣೆಯು ತಂಡದ ನೆರವಿಗೆ ಬರಲಿಲ್ಲ ಎಂದಿದ್ದಾರೆ.

"ನನ್ನ ಕಡೆಯಿಂದಲೂ ಸಾಕಷ್ಟು ತಪ್ಪಾಗಿದೆ. ಸರಣಿ ಸೋಲಿನಲ್ಲೂ ನನ್ನ ಪಾಲು ದೊಡ್ಡದಿದೆ. ಕೆಳಕ್ರಮಾಂಕದಲ್ಲಿ ನಾನು ಹೆಚ್ಚಿನ ರನ್​ ಕೊಡುಗೆ ನೀಡಲಿಲ್ಲ. ಬೌಲರ್​ಗಳಿಗೆ ರನ್​ಗಳು ಅತ್ಯಂತ ಮಹತ್ವದ ಕರೆನ್ಸಿ ಆಗಿದೆ ಎಂಬುದು ಬೌಲರ್​ ಆಗಿ ನನಗೆ ತಿಳಿದಿದೆ. ನಾನು ಉತ್ತಮವಾಗಿ ಆರಂಭ ಕಂಡರೂ, ಬೇಗನೆ ವಿಕೆಟ್​ ಒಪ್ಪಿಸಿದೆ. ನಾನು ನನ್ನ ಶ್ರೇಷ್ಠ ನಿರ್ವಹಣೆ ತೋರಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ' ಎಂದು 38 ವರ್ಷದ ಅಶ್ವಿನ್​ ಬೇಸರಿಸಿದ್ದಾರೆ.

ಸೋಲುವುದು ಓಕೆ. ಯಾರೂ ಅಜೇಯರಲ್ಲ. ಆದರೆ ನಾವು ಸೋಲಿಸಲಾಗದರು ಎಂದು ಯೋಚಿಸಿದ್ದೇ ನಮ್ಮ ಮೊದಲ ತಪು$್ಪ. 20 ದಿನಗಳ ಅಂತರದಲ್ಲೇ ನಾವು ಎಲ್ಲವನ್ನೂ ಅರಗಿಸಿಕೊಳ್ಳಬೇಕಾಯಿತು ಎಂದು ಅಶ್ವಿನ್​ ಹೇಳಿದ್ದಾರೆ. ಕಿವೀಸ್​ ವಿರುದ್ಧ ಸರಣಿಯ 6 ಇನಿಂಗ್ಸ್​ಗಳಲ್ಲಿ ಕೇವಲ 9 ವಿಕೆಟ್​ ಕಬಳಿಸಿದ್ದ ಅಶ್ವಿನ್​, 63 ರನ್​ಗಳಿಗೆ 3 ವಿಕೆಟ್​ ಪಡೆದಿದ್ದೇ ಶ್ರೇಷ್ಠ ನಿರ್ವಹಣೆಯಾಗಿತ್ತು.

ಆನಂದ್​ ಜತೆ ಅಶ್ವಿನ್​ ಸೆಲ್ಫಿ

ಆರ್​. ಅಶ್ವಿನ್​ ತಮಿಳುನಾಡಿನವರೇ ಆದ ಚೆಸ್​ ದಿಗ್ಗಜ ವಿಶ್ವನಾಥನ್​ ಆನಂದ್​ ಜತೆಗೆ ವಿಮಾನನಿಲ್ದಾಣವೊಂದರಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ನನ್ನ ಪಾಲಿಗೆ ಇದೊಂದು ಫ್ಯಾನ್​ಬಾಯ್​ ಕ್ಷಣವಾಗಿತ್ತು ಎಂದು ಅಶ್ವಿನ್​ ಚಿತ್ರದೊಂದಿಗೆ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.