ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಡೆಸುವ ಪ್ರತಿಷ್ಠಿತ ಟೂರ್ನಿಗಳು ಒಂದಿಲ್ಲೊಂದು ಕಾರಣಕ್ಕೆ ಸದಾ ಸದ್ದು ಮಾಡುತ್ತವೆ. ಅದೇ ರೀತಿ 2023ರಲ್ಲಿ ಭಾರತದ ಅತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿತ್ತು. ಇದರಲ್ಲಿ ಆಸ್ಟ್ರೇಲಿಯಾ ಪರ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ ಸಿಡಿಸಿದ ದ್ವಿಶತಕ ಈಗಲೂ ಜನರು ನೆನಪಿಸಿಕೊಳ್ಳುತ್ತಾರೆ. ಅವರ ಆ ದ್ವಿಶತಕ ಸೋಲಿನಂಚಿನಲ್ಲಿದ್ದ ಆಸ್ಟ್ರೇಲಿಯಾ ತಂಡವನ್ನು ಗೆಲುವಿನ ದಡ ಸೇರಿಸಿದನ್ನು ನೆನೆಸಿಕೊಂಡರೆ ಈಗಲೂ ಆ ಒಬ್ಬ ಆಟಗಾರನಿಗೆ ಮೈ ನಡುಗುತ್ತದಂತೆ.
ನವೆಂಬರ್ 07, 2023 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ನ 39ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಅಫ್ಘಾನಿಸ್ತಾನ ತಂಡವು ಆರಂಭಿಕ ಇಬ್ರಾಹಿಂ ಜರ್ದಾನ್ (129 ರನ್, 143 ಎಸೆತ, 8 ಬೌಂಡರಿ, 3 ಸಿಕ್ಸರ್) ಶತಕದ ಫಲವಾಗಿ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತ್ತು. 292 ರನ್ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡವನ್ನು ಇನ್ನಿಲ್ಲದಂತೆ ಕಾಡಿದ ಅಫ್ಘಾನಿಸ್ತಾನ ಬೌಲರ್ಗಳು ಎದುರಾಳಿ ತಂಡವನ್ನು 91 ರನ್ ಆಗುವ ವೇಳೆ 7 ವಿಕೆಟ್ ಕಬಳಿಸಿದ್ದರು. ಇನ್ನೇನು ಆಸ್ಟ್ರೇಲಿಯಾ ಸೋಲುಂಡಿತ್ತು ಎನ್ನುವಾಗ ತಂಡದ ಪಾಲಿಗೆ ಸಂಜೀವಿಯಂತೆ ಬಂದ ಮ್ಯಾಕ್ಸ್ವೆಲ್ (201 ರನ್, 128 ಎಸೆತ, 21 ಬೌಂಡರಿ, 10 ಸಿಕ್ಸರ್) ಫಲವಾಗಿ ಆಸೀಸ್ ಗೆಲುವಿನ ನಗೆ ಬೀರಿತ್ತು.
ಇದನ್ನೂ ಓದಿ: ದಯವಿಟ್ಟು ಇಂತಹ ವಿಚಾರಗಳನ್ನು ನನ್ನ ಬಳಿ ಹೇಳಬೇಡಿ; ಸೂರಜ್ ರೇವಣ್ಣ ಪ್ರಕರಣದ ಕುರಿತು ಶಾಕಿಂಗ್ ಹೇಳಿಕೆ ಕೊಟ್ಟ ಎಚ್ಡಿಕೆ
ಆಸ್ಟ್ರೇಲಿಯಾ ವಿರುದ್ಧದ ಸೂಪರ್ 08 ಪಂದ್ಯಕ್ಕೂ ಮುನ್ನ ಈ ಕುರಿತು ಮಾತನಾಡಿರುವ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ರಶೀದ್ ಖಾನ್, ಕೆಲವೊಮ್ಮ ನಾನು ಅಂದು ಮ್ಯಾಕ್ಸ್ವೆಲ್ ಆಡಿದ ರೀತಿ ನೆನೆಸಿಕೊಂಡರೆ ಒಂದು ಕ್ಷಣ ನನ್ನ ಮೈನಡುಗಲು ಶುರು ಮಾಡುತ್ತದೆ. ನಾವು ನೋಡಿದ ಅತ್ಯುತ್ತಮ ಇನ್ನಿಂಗ್ಸ್ನಲ್ಲಿ ಇದು ಕೂಡ ಒಂದಾಗಿದೆ. ನನಗೆ ಈಗಲೂ ಅದು ಕನಸಾಗಿ ಕಾಡುತ್ತಿರುತ್ತದೆ ಎಂದು ರಶೀದ್ ಖಾನ್ ಹೇಳಿದ್ದಾರೆ.
ಇತ್ತ ರಶೀದ್ ಖಾನ್ ಅವರ ಹೇಳಿಕೆ ವೈರಲ್ ಆಗುತ್ತಿದ್ದು, ಹಲವರು ಮ್ಯಾಕ್ಸ್ವೆಲ್ ಅಂದು ತಂಡಕ್ಕೆ ಆಸರೆಯಾದ ರೀತಿಯನ್ನು ನೋಡಿ ಹಾಡಿ ಹೊಗಳುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿನ ಅವರ ಕಳಪೆ ಫಾರ್ಮ್ಅನ್ನು ಉಲ್ಲೇಖಿಸಿ ಕೆಲವರು ಅವರನ್ನು ಟೀಕಿಸುತ್ತಿದ್ದಾರೆ. ಭಾನುವಾರ ನಡೆಯುವ ಸೂಪರ್ 08 ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂದು ಕಾದು ನೋಡಬೇಕಿದೆ.