ಅಹಮದಾಬಾದ್: ಭಾರತ-ಆಸ್ಟ್ರೇಲಿಯಾ ನಡುವೆ ಭಾನುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿಗದಿಯಾಗಿರುವ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ ಇರುವುದಿಲ್ಲ. ಆದರೂ, ಒಂದು ವೇಳೆ ಅನಿರೀಕ್ಷಿತವಾಗಿ ಮಳೆ ಸುರಿದರೂ ಪಂದ್ಯಕ್ಕೆ ಮೀಸಲು ದಿನವಿದೆ. ಉಭಯ ತಂಡಗಳು ಕನಿಷ್ಠ 20 ಓವರ್ ಆಡದಿದ್ದರೆ ಆಗ ಮೀಸಲು ದಿನವಾದ ಸೋಮವಾರಕ್ಕೆ ಪಂದ್ಯ ವಿಸ್ತರಿಸಲ್ಪಡಲಿದೆ.
ಟೈ ಆದರೆ ಸೂಪರ್ಓವರ್
ಒಂದು ವೇಳೆ ಫೈನಲ್ ಪಂದ್ಯ ಟೈ ಆದರೆ ಸೂಪರ್ ಓವರ್ ಇರಲಿದೆ. ಆದರೆ, 2019ರ ಫೈನಲ್ನಂತೆ ಸೂಪರ್ ಓವರ್ ಕೂಡ ಟೈ ಆದರೆ ಬೌಂಡರಿ ಕೌಂಟ್ ನಿಯಮದನ್ವಯ ವಿಜೇತರ ನಿರ್ಧಾರವಾಗುವುದಿಲ್ಲ. ಸೂಪರ್ ಓವರ್ ಟೈ ಆದರೆ, ಸ್ಪಷ್ಟ ಫಲಿತಾಂಶ ಬರುವವರೆಗೂ ಸೂಪರ್ ಓವರ್ ಮುಂದುವರಿಸುವ ಹೊಸ ನಿಯಮ ತರಲಾಗಿದೆ. ಆದರೆ ಹೆಚ್ಚುವರಿ ಸೂಪರ್ ಓವರ್ಗೆ ಸಮಯದ ಅಭಾವ ಇದ್ದರೆ ಜಂಟಿ ಚಾಂಪಿಯನ್ ಘೋಷಿಸಲಾಗುತ್ತದೆ.
ಪಿಚ್ ರಿಪೋರ್ಟ್
ಲೀಗ್ ಹಂತದಲ್ಲಿ ಭಾರತ-ಪಾಕ್ ನಡುವಿನ ಹೈ-ವೋಲ್ಟೇಜ್ ಫೈಟ್ ನಡೆದಿದ್ದ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ನಲ್ಲೇ ಫೈನಲ್ ಪಂದ್ಯವೂ ನಡೆಯಲಿದೆ. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದ ಪಾಕ್ 191 ರನ್ಗೆ ಆಲೌಟ್ ಆಗಿದ್ದರೆ, ಭಾರತ 30.3 ಓವರ್ಗಳಲ್ಲೇ ಚೇಸಿಂಗ್ ಮಾಡಿ ಗೆದ್ದಿತ್ತು. ಆದರೆ ಈ ಬಾರಿ ಕಡಿಮೆ ಮೊತ್ತ ದಾಖಲಾಗುವ ಸಾಧ್ಯತೆಗಳಿಲ್ಲ. ಮೊದಲು ಬ್ಯಾಟಿಂಗ್ಗೆ ಇಳಿದ ತಂಡ ಬೃಹತ್ ಮೊತ್ತ ಪೇರಿಸಬೇಕಾಗುತ್ತದೆ. ಯಾಕೆಂದರೆ 2ನೇ ಸರದಿಯಲ್ಲಿ ಇಬ್ಬನಿ ಸಮಸ್ಯೆ ಕಾಡುವ ಭೀತಿ ಇದೆ. ಭಾರತ-ಪಾಕ್ ಪಂದ್ಯ 73 ಓವರ್ಗಳಲ್ಲೇ ಮುಕ್ತಾಯ ಕಂಡಿದ್ದರಿಂದ ಇಬ್ಬನಿ ಪ್ರಭಾವ ಗೊತ್ತಾಗಿರಲಿಲ್ಲ. ಹಾಲಿ ವಿಶ್ವಕಪ್ನಲ್ಲಿ ಇಲ್ಲಿ ನಡೆದ ಮೊದಲ 4 ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡವೇ 3ರಲ್ಲಿ ಗೆದ್ದಿದೆ.