ಲಖನೌ: ನಿರಂತರ ವಿಕೆಟ್ಗಳನ್ನು ಕಳೆದುಕೊಂಡೆವು. ದೊಡ್ಡ ಜತೆಯಾಟಗಳು ಸಿಗಲಿಲ್ಲ. ಇದರಿಂದ ನಾವು 10&15 ರನ್ ಕೊರತೆ ಅನುಭವಿಸಿದೆವು ಎಂದು ಲಖನೌ ಸೂಪರ್ಜೈಂಟ್ಸ್ ನಾಯಕ ರಿಷಭ್ ಪಂತ್ ಸಿಎಸ್ಕೆ ವಿರುದ್ಧದ 5 ವಿಕೆಟ್ ಸೋಲಿಗೆ ಕಾರಣ ವಿವರಿಸಿದ್ದಾರೆ.
ಆರಂಭಿಕ ಆಘಾತದ ಬಳಿಕ ಪಂತ್ (63) ಆಸರೆಯಲ್ಲಿ ಲಖನೌ 7 ವಿಕೆಟ್ಗೆ 166 ರನ್ ಪೇರಿಸಿದರೆ, ಸಿಎಸ್ಕೆ 19.3 ಓವರ್ಗಳಲ್ಲಿ 5 ವಿಕೆಟ್ಗೆ 168 ರನ್ ಗಳಿಸಿ ಜಯಿಸಿತು. ಹೊಸ ಆರಂಭಿಕ ಜೋಡಿಯಾದ ಶೇಕ್ ರಶೀದ್ (27) ಮತ್ತು ರಚಿನ್ ರವೀಂದ್ರ (37) ಉತ್ತಮ ಆರಂಭ ಒದಗಿಸಿದ ಬಳಿಕ ಸಿಎಸ್ಕೆ ಮಧ್ಯಮ ಕ್ರಮಾಂಕ ಕುಸಿಯಿತು. ಸತತ 6ನೇ ಸೋಲಿನ ಭೀತಿ ಎದುರಾದಾಗ, ಇಂಪ್ಯಾಕ್ಟ್ ಪ್ಲೇಯರ್ ಶಿವಂ ದುಬೆ (43*) ಮತ್ತು ನಾಯಕ ಎಂಎಸ್ ಧೋನಿ (26*) ಮುರಿಯದ 6ನೇ ವಿಕೆಟ್ಗೆ 28 ಎಸೆತಗಳಲ್ಲಿ 57 ರನ್ ಸೇರಿಸಿ ಗೆಲುವಿನ ದಡ ಸೇರಿಸಿದರು.
"ನನ್ನ ಬ್ಯಾಟಿಂಗ್ ಪಂದ್ಯದಿಂದ ಪಂದ್ಯಕ್ಕೆ ಸುಧಾರಿಸುತ್ತಿದೆ. ಲಯಕ್ಕೆ ಮರಳಿರುವುದಕ್ಕೆ ಖುಷಿಯಾಗುತ್ತಿದೆ' ಎಂದು ಪಂತ್ ಟೂರ್ನಿಯಲ್ಲಿ ಮೊದಲ ಅರ್ಧಶತಕ ಬಾರಿಸಿದ ಬಗ್ಗೆ ಸಂಭ್ರಮಿಸಿದ್ದಾರೆ.
*43: ಧೋನಿ (43 ವರ್ಷ, 281) ಐಪಿಎಲ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅತಿ ಹಿರಿಯ ಆಟಗಾರ ಎನಿಸಿದರು. ಪ್ರವಿಣ್ ತಾಂಬೆ (43 ವರ್ಷ, 60 ದಿನ) ಹಿಂದಿನ ಅತಿಹಿರಿಯ ಸಾಧಕ.
*18: ಧೋನಿ ಐಪಿಎಲ್ನಲ್ಲಿ 18ನೇ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ವಿರಾಟ್ ಕೊಹ್ಲಿ ಸಾಧನೆ ಸರಿಗಟ್ಟಿದರು. ರೋಹಿತ್ ಶರ್ಮ 19 ಬಾರಿ ಈ ಗೌರವ ಪಡೆದಿರುವುದು ಭಾರತೀಯ ದಾಖಲೆ.
*ಗೆಲುವಿನ ಹಾದಿಗೆ ಮರಳಿರುವುದು ಖುಷಿ ನೀಡಿದೆ ಮತ್ತು ಆತ್ಮವಿಶ್ವಾಸ ತುಂಬಿದೆ. ಇದೇ ಲಯ ಕಾಯ್ದುಕೊಳ್ಳಲು ಬಯಸಿದ್ದೇವೆ. ತವರಿನಲ್ಲೂ ನಮಗೆ ಉತ್ತಮ ಪಿಚ್ ಲಭಿಸಬೇಕಿದೆ. ನಾವು ಬ್ಯಾಟಿಂಗ್ ವಿಭಾಗದಲ್ಲಿ ಕ್ರಮಾಂಕ ಬದಲಾವಣೆ ಮಾಡುವುದು ಅಗತ್ಯವಾಗಿತ್ತು.
| ಎಂಎಸ್ ಧೋನಿ ಸಿಎಸ್ಕೆ ನಾಯಕ
150: ರಿಷಭ್ ಪಂತ್ ಐಪಿಎಲ್ನಲ್ಲಿ 150 ಸಿಕ್ಸರ್ ಸಿಡಿಸಿದ 2ನೇ ವಿಕೆಟ್ ಕೀಪರ್&ಬ್ಯಾಟರ್ ಎನಿಸಿದರು. ಎಂಎಸ್ ಧೋನಿ (254) ಮೊದಲ ಸಾಧಕರಾಗಿದ್ದಾರೆ.