ಕ್ರೀಡೆ

ವಿಶ್ವಕಪ್​ ಸೆಮಿಫೈನಲ್​ನಲ್ಲಿ ನನ್ನನ್ನು ಯಾಕೆ ಕೈಬಿಟ್ರು ಎಂಬುದು ತಿಳಿದಿಲ್ಲ; ಕೋಚ್​-ನಾಯಕನ ವಿರುದ್ಧ ಅಸಮಾಧಾನ ಹೊರಹಾಕಿದ ಶಮಿ

ನವದೆಹಲಿ: ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್​ ಆತಿಥ್ಯದಲ್ಲಿ ನಡೆದ 2019ರ ಏಕದಿನ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್​ ತಂಡಗಳು ಮುಖಾಮುಖಿಯಾಗಿದ್ದವು. ಮ್ಯಾಂಚೆಸಸ್ಟರ್​ನ ಓಲ್ಡ್​ ಟ್ರಾಫರ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್​ ಎದುರು ಭಾರತ ವಿರೋಚಿತ ಸೋಲು ಕಂಡಿತ್ತು. ಆದರೆ, ಅಂದು ನಡೆದ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಶಮಿಗೆ ತಂಡದಲ್ಲಿ ಸ್ಥಾನ ನೀಡಲಾಗಿರಲಿಲ್ಲ. ಉತ್ತಮ ಪ್ರದರ್ಶನದ ಹೊರತಾಗಿಯೂ ಶಮಿಗೆ ಅವಕಾಶ ಕೊಡದಿರುವುದು ಹಲವು ಅನುಮಾನಗಳು ಮೂಡಲು ಶುರು ಮಾಡಿತ್ತು.

ಘಟನೆ ನಡೆದು ಐದು ವರ್ಷಗಳು ಕಳೆದ ಬಳಿಕ ಈ ಬಗ್ಗೆ ಮಾತನಾಡಿರುವ ವೇಗಿ ಮೊಹಮ್ಮದ್ ಶಮಿ ಅಂದಿನ ದಿನ ತಮಗೆ ಯಾಕೆ ಆಡುವ 11ರ ಬಳಗದಲ್ಲಿ ಸ್ಥಾನ ನೀಡಲಿಲ್ಲ ಎಂಬುದರ ಕುರಿತು ಮೌನ ಮುರಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಟೀಮ್​ ಇಂಡಿಯಾದಲ್ಲಿನ ಆಂತರಿಕ ಕಿತ್ತಾಟ ಮತ್ತೊಮ್ಮೆ ಬಹಿರಂಗವಾಗಿದೆ. ಶಮಿ ಹೇಳಿಕೆ ಅಂದಿನ ಕೋಚ್​ ರವಿಶಾಸ್ತ್ರಿ ಹಾಗೂ ವಿರಾಟ್​ ಕೊಹ್ಲಿ ವಿರುದ್ಧ ಎಂದು ಹೇಳಲಾಗುತ್ತಿದೆ.

ಶುಭಂಕರ್ ಮಿಶ್ರಾ ಅವರ ಪಾಡ್​​ಕಾಸ್ಟ್​ನಲ್ಲಿ ಈ ಬಗ್ಗೆ ಮಾತನಾಡಿದ ಶಮಿ, ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಹೊರತಾಗಿಯೂ ನ್ಯೂಜಿಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ನನಗೆ ಯಾಕೆ ಅವಕಾಸ ನೀಡಲಿಲ್ಲ ಎಂಬುದು ನನಗೆ ಈವರೆಗೂ ಅರ್ಥವಾಗಿಲ್ಲ. ಟೀಮ್ ಮ್ಯಾನೇಜ್​ಮೆಂಟ್​ ಯಾಕೆ ಇಂತಹ ನಿರ್ಧಾರ ಯಾಕೆ ತೆಗೆದುಕೊಂಡಿತು ಎಂಬದು ನನಗೆ ತಿಳಿದಿಲ್ಲ. ಏಕೆಂದರೆ ಇದಕ್ಕೂ ಮುನ್ನ ನಾನು ಆಡಿದ 4 ಪಂದ್ಯಗಳಿಂದ 14 ವಿಕೆಟ್ ಕಬಳಿಸಿದ್ದೆ. ಅದರಲ್ಲೂ ಅಫ್ಘಾನಿಸ್ತಾನ್ ವಿರುದ್ಧದ ನಿರ್ಣಾಯಕ ಹಂತದಲ್ಲಿ ಪಡೆದ ಹ್ಯಾಟ್ರಿಕ್ ಕೂಡ ಸೇರಿದೆ. ಈ ಹ್ಯಾಟ್ರಿಕ್​ನಿಂದ ಅಂದು ಭಾರತ ತಂಡವು ಅಫ್ಘಾನ್ ವಿರುದ್ಧ ಜಯ ಸಾಧಿಸಿತ್ತು.

ಅಲ್ಲದೆ ಕೇವಲ ನಾಲ್ಕು ಪಂದ್ಯಗಳಲ್ಲಿ ಸಿಕ್ಕ ಅವಕಾಶವನ್ನು ನಾನು ಬಳಸಿಕೊಂಡಿದ್ದೆ. ಪ್ರತಿ ಓವರ್‌ಗೆ 5.48 ರನ್ ನೀಡುವ ಮೂಲಕ ಒಟ್ಟು 14 ವಿಕೆಟ್​ಗಳನ್ನು ಸಹ ಪಡೆದಿದ್ದೆ. ಆದರೆ ಭಾರತದ ಪಾಲಿಗೆ ನಿರ್ಣಾಯಕವಾಗಿದ್ದ ಸೆಮಿಫೈನಲ್​ ಪಂದ್ಯದಲ್ಲಿ ನನ್ನನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಡಲಾಯಿತು. ಅದರ ಹಿಂದಿನ ಕಾರಣವನ್ನು ಇಂದಿಗೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಹೀಗೆ ಬೇಸರ ವ್ಯಕ್ತಪಡಿಸಲು ಮುಖ್ಯ ಕಾರಣ, 2019 ರಲ್ಲಿ ಭಾರತ ತಂಡವು ಸೆಮಿಫೈನಲ್​ನಲ್ಲೇ ಸೋತಿರುವುದು.

ನಾನು ಆಶ್ಚರ್ಯ ಪಡುವ ಒಂದು ವಿಷಯವೆಂದರೆ ಪ್ರತಿ ತಂಡಕ್ಕೂ ಉತ್ತಮ ಪ್ರದರ್ಶನ ನೀಡುವ ಆಟಗಾರರ ಅಗತ್ಯವಿದೆ. ನಾನು ನಾಲ್ಕು ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದೇನೆ. ನೀವು ನನ್ನಿಂದ ಇನ್ನೇನು ನಿರೀಕ್ಷಿಸುತ್ತೀರಿ. ಉತ್ತಮ ಪ್ರದರ್ಶನದ ಹೊರತಾಗಿ ನನ್ನನ್ನು ಬೆಂಚ್​ನಲ್ಲಿ ಯಾಕೆ ಕೂರಿಸಲಾಯಿತು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಎಂದು ಟೀಮ್​ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಬೇಸರ ಪ್ರಶ್ನಿಸಿದ್ದಾರೆ.