ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ 17ನೇ ಆವೃತ್ತಿಯ ಆರಂಭಿಕ 17 ದಿನಗಳ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಬಿಡುಗಡೆಗೊಳಿಸಿದ್ದು, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಇದರೊಂದಿಗೆ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಟೂರ್ನಿಯ ಮೊದಲ ದಿನವೇ ಮುಖಾಮುಖಿ ಆಗಲಿದ್ದಾರೆ. ಆದರೆ, ಲೋಕಸಭಾ ಚುನಾವಣೆಯ ದಿನಾಂಕ ಇನ್ನೂ ಘೋಷಣೆಯಾಗದಿರುವ ಹಿನ್ನೆಲೆಯಲ್ಲಿ ಈ ಬಾರಿ ಐಪಿಎಲ್ ವೇಳಾಪಟ್ಟಿಯನ್ನು ಒಮ್ಮೆಲೆ ಸಂಪೂರ್ಣವಾಗಿ ಪ್ರಕಟಿಸಲಾಗಿಲ್ಲ. ಮಾರ್ಚ್ 22ರಿಂದ ಏಪ್ರಿಲ್ 7ರವರೆಗೆ ನಡೆಯಲಿರುವ ಆರಂಭಿಕ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಸದ್ಯಕ್ಕೆ ಪ್ರಕಟಿಸಲಾಗಿದೆ.
ದೇಶದ 10 ನಗರಗಳಲ್ಲಿ ಈ ಪಂದ್ಯಗಳು ನಡೆಯಲಿವೆ. ಈ 21ರಲ್ಲಿ ಎಲ್ಲ 10 ತಂಡಗಳು ಕನಿಷ್ಠ 3 ಪಂದ್ಯಗಳನ್ನು ಆಡಲಿವೆ ಮತ್ತು ಕೆಲ ತಂಡಗಳು ಗರಿಷ್ಠ 5 ಪಂದ್ಯವನ್ನೂ ಆಡಲಿವೆ. 18ನೇ ಸಾರ್ವತ್ರಿಕ ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ಟೂರ್ನಿಯ ಉಳಿದ ಎಲ್ಲ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಗೊಳಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಈ ಮೂಲಕ ಸಂಪೂರ್ಣ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸುವುದು ತನ್ನ ಗುರಿಯಾಗಿದೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಲೋಕಸಭಾ ಚುನಾವಣೆಯ ಸಮಯದಲ್ಲಿ ಕೆಲ ಶಿಷ್ಟಾಚಾರಗಳನ್ನು ಪಾಲಿಸಬೇಕಾಗುತ್ತದೆ. ಅದೇ ರೀತಿ ಸ್ಟಾರ್ ಕ್ರಿಕೆಟಿಗರು ಭಾಗವಹಿಸುವ ಐಪಿಎಲ್ ಪಂದ್ಯಗಳಿಗೂ ಬಿಗಿ ಭದ್ರತೆ ಅಗತ್ಯವಿರುತ್ತದೆ ಮತ್ತು ಭದ್ರತೆಗೆ ಸಾವಿರಾರು ಪೊಲೀಸರ ನಿಯೋಜನೆಯಾಗಬೇಕು. ಆದರೆ, ಐಪಿಎಲ್ ಪಂದ್ಯ ನಡೆಯುವ ನಗರದಲ್ಲಿ ಅದೇ ಸಮಯದಲ್ಲಿ ಮತದಾನ ಅಥವಾ ಮತಎಣಿಕೆ ಇದ್ದರೆ ಅದಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ ಮತ್ತು ಸ್ಥಳಿಯ ರಾಜ್ಯ ಸರ್ಕಾರ ಐಪಿಎಲ್ ಪಂದ್ಯಗಳ ಭದ್ರತೆಯ ಹೊಣೆ ವಹಿಸಿಕೊಳ್ಳಲು ನಿರಾಕರಿಸುತ್ತದೆ. ಆ ಸಮಯದಲ್ಲಿ ಐಪಿಎಲ್ ಪಂದ್ಯಗಳ ದಿನಾಂಕ ಬದಲಾವಣೆ ಮಾಡುವ ತಾಪತ್ರಯವನ್ನು ತಪ್ಪಿಸುವ ಸಲುವಾಗಿ ಬಿಸಿಸಿಐ, ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕವೇ ಅದಕ್ಕೆ ತಕ್ಕಂತೆ ಐಪಿಎಲ್ ವೇಳಾಪಟ್ಟಿ ಸಿದ್ಧಪಡಿಸಲು ನಿರ್ಧರಿಸಿದೆ.
ಇದರಿಂದ 2009ರಂತೆ ಸಂಪೂರ್ಣ ಅಥವಾ 2014ರಂತೆ ಭಾಗಶಃ ಟೂರ್ನಿಯನ್ನು ವಿದೇಶಿ ನೆಲಕ್ಕೆ ಸ್ಥಳಾಂತರಿಸುವ ಅನಿವಾರ್ಯತೆಯೂ ತಪ್ಪುತ್ತದೆ. 2019ರಲ್ಲಿ ಇದೇ ಕಾರ್ಯತಂತ್ರದ ಅನ್ವಯ ಬಿಸಿಸಿಐ, ಚುನಾವಣೆಯ ನಡುವೆ ಸಂಪೂರ್ಣ ಐಪಿಎಲ್ಅನ್ನು ಭಾರತದಲ್ಲೇ ಆಯೋಜಿಸಿತ್ತು. ಈ ಸಲದ ಲೋಕಸಭಾ ಚುನಾವಣೆ ಏಪ್ರಿಲ್-ಮೇ ಸಮಯದಲ್ಲೇ ನಡೆಯುವ ನಿರೀಕ್ಷೆ ಇದೆ. ಹೀಗಾಗಿ ಬಿಸಿಸಿಐ ಈ ಸಲವೂ ಎಚ್ಚರಿಕೆ ವಹಿಸಿದೆ. ಒಮ್ಮೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಬಿಸಿಸಿಐ, ಐಪಿಎಲ್ ಪಂದ್ಯಗಳು ನಡೆಯುವ ಎಲ್ಲ ನಗರಗಳಲ್ಲಿ ಭದ್ರತೆ ನೀಡುವ ಇಲಾಖೆಗಳನ್ನು ಸಂಪರ್ಕಿಸಿ ವೇಳಾಪಟ್ಟಿಯನ್ನು ಅಂತಿಮಗೊಳಿಸಲಿದೆ. ಇದಲ್ಲದೆ, ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಕೆಲ ಅನುಕೂಲಕ್ಕಾಗಿ ಹಾಲಿ ಪ್ರಕಟಗೊಂಡಿರುವ ಐಪಿಎಲ್ ವೇಳಾಪಟ್ಟಿಯಲ್ಲೂ ಬಿಸಿಸಿಐ ಬದಲಾವಣೆ ಮಾಡಿದರೆ ಅಚ್ಚರಿ ಇಲ್ಲ.