ಲಾಹೋರ್: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟಿ20 ವಿಶ್ವಕಪ್ 2024ರ ಟೂರ್ನಿಯ ಮೊದಲ ಹಂತದಲ್ಲೇ ಗೇಟ್ ಪಾಸ್ ಪಡೆದ ಪಾಕಿಸ್ತಾನ, ಟೂರ್ನಿಯ ಪೂರ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ವ್ಯಾಪಕ ಟೀಕೆ, ವ್ಯಂಗ್ಯಕ್ಕೆ ಗುರಿಯಾಗಿತ್ತು. ಪಾಕ್ ತಂಡದಲ್ಲಿ ಯಾವುದೂ ಸರಿಯಿಲ್ಲ ಎಂದು ದೂಷಿಸಿದ್ದ ಮಾಜಿ ಆಟಗಾರರು, ಬಾಬರ್ ಅಜಂರ ನಾಯಕತ್ವದ ವಿರುದ್ಧ ಕಿಡಿಕಾರಿದ್ದರು. ಇದೀಗ ವೇಗಿ ಶಾಹೀನ್ ಆಫ್ರಿದಿ ಬಗ್ಗೆ ದೂರು ಕೇಳಿಬಂದಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ.
ವರದಿಗಳ ಪ್ರಕಾರ, ಗುರುವಾರ (ಜು.11) ಇಂಗ್ಲೆಂಡ್ ವಿರುದ್ಧದ ಟಿ20 ಟೂರ್ ವೇಳೆ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ಶಾಹೀನ್, ಬ್ಯಾಟಿಂಗ್ ಕೋಚ್ ಯೂಸಫ್ ಮಾರ್ಗದರ್ಶನದಲ್ಲಿ ಕಲಿಯಬೇಕಿತ್ತು. ಈ ವಿಚಾರದಲ್ಲಿ ಅವರ ಮಾತನ್ನು ದಿಕ್ಕರಿಸಿದ್ದ ಆಫ್ರಿದಿ, ಕೋಚ್ ಜತೆಗೆ ಕೆಲ ಸಮಯ ವಾಗ್ವಾದ ನಡೆಸಿದ್ದರು. ಬಳಿಕ ಇದು ತನಗೆ ತೊಂದರೆಯಾಗಬಹುದು ಎಂಬ ನಿಟ್ಟಿನಲ್ಲಿ ಕ್ಷಮೆಯಾಚಿಸಿದ್ದರು. ಇದನ್ನೆಲ್ಲಾ ನೆನಪಿನಲ್ಲಿಟ್ಟುಕೊಂಡಿದ್ದ ಯೂಸಫ್, ಇಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದ ಮೊಹ್ಸಿನ್ ನಖ್ವಿ ಬಳಿ ದೂರಿದ್ದಾರೆ.
ಒಂದು ಬಾರಿ ಅಲ್ಲ, ಹಲವು ಬಾರಿ ಇದೇ ರೀತಿ ಶಾಹೀನ್ ಮಾಡಿದ್ದಾರೆ. ನೆಟ್ಸ್ನಲ್ಲಿ ತರಬೇತಿಯಲ್ಲಿದ್ದಾಗ ಅವರು ನೋ ಬಾಲ್ ರಿಪೀಟ್ ಮಾಡುತ್ತಿದ್ದರು. ಇದಕ್ಕೆ ಅಲ್ಲಿಯೇ ನಾನು ಪ್ರತಿಕ್ರಿಯಿಸಿ, ನೋ ಬಾಲ್ ಆಗುತ್ತಿದೆ ಶಾಹೀನ್, ಗಮನಹರಿಸಿ ಎಂದಿದ್ದೆ. ಇದಕ್ಕೆ ವಾದಿಸಿದ ಅವರು, ನಿಮ್ಮ ಕೆಲಸ ನೀವು ನೋಡಿಕೊಂಡರೆ ಸಾಕು ಎಂದು ಖಾರವಾಗಿ ಮಾತನಾಡಿದರು. ನಾನೊಬ್ಬ ಕೋಚ್, ನನ್ನ ಕೆಲಸವನ್ನು ನಾನು ಮಾಡುತ್ತಿರುವೆ ಎಂದು ಪ್ರತಿಕ್ರಿಯಿಸಿರುವುದಾಗಿ ಯೂಸಫ್ ಹೇಳಿದ್ದಾರೆ.
ಶಾಹೀನ್ ಆಫ್ರಿದಿ ನಡೆದುಕೊಂಡ ರೀತಿ ಬಗ್ಗೆ ಪಿಸಿಬಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ಕಾರಣ, ಒಂದು ತಂಡ ಅಂದಮೇಲೆ ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಇದು ಕೂಡ ಹಾಗೆಯೇ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸುಮ್ಮನಾಗಿರುವುದಾಗಿ ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).