ಕ್ರೀಡೆ

ಮುಂಬೈ ಇಂಡಿಯನ್ಸ್​ಗೆ ಹಾರ್ದಿಕ್ ಕ್ಯಾಪ್ಟನ್?;​ ವೈರಲ್ ಆಗ್ತಿದೆ ಜಸ್ಪ್ರೀತ್ ಬುಮ್ರಾ ಪೋಸ್ಟ್​!

ಮುಂಬೈ: ಗುಜರಾತ್​ ಟೈಟನ್ಸ್​ ತಂಡದ ನಾಯಕನಾಗಿ ಸತತ ಎರಡು ವರ್ಷಗಳ ಕಾಲ ಆಟವಾಡಿದ ಹಾರ್ದಿಕ್​ ಪಾಂಡ್ಯ, ತಂಡದಲ್ಲಿ ಮುಂದುವರೆಯುವ ಆಸಕ್ತಿಯನ್ನು ಕಳೆದುಕೊಂಡಿದ್ದು, ಇದೀಗ ಮುಂಬೈ ಇಂಡಿಯನ್ಸ್​ ಟೀಮ್​ಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಟೈಟನ್ಸ್​ ತಂಡ ಕೂಡ ದೃಢಪಡಿಸಿದೆ. ಪಾಂಡ್ಯ ಮುಂಬೈಗೆ ಮತ್ತೊಮ್ಮೆ ಬಂದಿದ್ದು ಕ್ರಿಕೆಟ್​ ಅಭಿಮಾನಿಗಳಿಗೆ ಸಂತಸ ನೀಡಿದ್ದೆ ಆದ್ರೂ ಸಾಮಾಜಿಕ ಜಾಲತಾಣಗಳಲ್ಲಿ ಈ ನಿರ್ಧಾರ ಕುರಿತು ತೀವ್ರ ಅಸಮಾಧಾನ ಸಹ ವ್ಯಕ್ತವಾಗಿದೆ.

ಗುಜರಾತ್​ ಟೈಟನ್ಸ್​ ತೊರೆದ ಹಾರ್ದಿಕ್​ ಪಾಂಡ್ಯ ಮುಂದಿನ ಎರಡು ವರ್ಷಗಳ ಕಾಲ ಅದೇ ತಂಡದಲ್ಲಿ ನಾಯಕನಾಗಿ ಮುಂದುವರೆಯಬಹುದಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಮುಂಬೈ ಇಂಡಿಯನ್ಸ್​ಗೆ ವಾಪಾಸ್​ ಬಂದದ್ದು ಮತ್ತಷ್ಟು ಖುಷಿ ತಂದಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪೋಸ್ಟ್​ ಹಂಚಿಕೊಂಡ ಹಾರ್ದಿಕ್​, "ಮನೆ ಮುಂಬೈ ಇಂಡಿಯನ್ಸ್​ ಮನೆ" ಎಂಬ ಶೀರ್ಷಿಕೆ ಕೊಟ್ಟು ತಮ್ಮ ಅನುಯಾಯಿಗಳೊಂದಿಗೆ ಶೇರ್​ ಮಾಡಿಕೊಂಡಿದ್ದಾರೆ.

ಸದ್ಯ ಐಪಿಎಲ್​ 2024ರ ಆವೃತ್ತಿಗೂ ಮುನ್ನವೇ ಕ್ಯಾಪ್ಟನ್​ ವಿಚಾರ ತೀವ್ರ ಚರ್ಚೆಯಾಗುತ್ತಿದ್ದು, ಮುಂಬೈ ಇಂಡಿಯನ್ಸ್​ಗೆ ರೋಹಿತ್​ ಶರ್ಮಾ, ಹಾರ್ದಿಕ್​ ಪಾಂಡ್ಯ ಹಾಗೂ ಜಸ್ಪ್ರಿತ್​ ಬುಮ್ರಾ ಈ ಮೂವರಲ್ಲಿ ಯಾರು ನಾಯಕನ ಸ್ಥಾನ ಅಲಂಕರಿಸಲಿದ್ದಾರೆ ಎಂಬ ಗೊಂದಲಗಳು ಬುಗಿಲೆದ್ದಿವೆ. ನೆಟ್ಟಿಗರು ಎಂದಿನಂತೆ ಈ ಬಾರಿಯೂ ರೋಹಿತ್​ ಕ್ಯಾಪ್ಟನ್ ಆಗಿ ಮುಂದುವರೆಯಲಿದ್ದಾರೆ ಎಂದು ಹೇಳಿದರೆ, ಕೆಲವರು ಪಾಂಡ್ಯ ಆಯ್ಕೆಯಾಗುವುದು ಖಚಿತ ಎಂದು ತಿಳಿಸಿದ್ದಾರೆ.

ಈ ಎಲ್ಲದರ ನಡುವೆ ಟೀಮ್ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್‌ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪರೋಕ್ಷವಾಗಿ ಹಾಕಿರುವ ಸ್ಟೋರಿಯೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಹೇಳಿಕೆ ಯಾರಿಗೆ ಸಲ್ಲುತ್ತದೆ? ಯಾರಿಗೆ ಅನ್ವಯಿಸಲಿ ಎಂದು ಹೇಳಿರಬಹುದು? ಎಂಬ ಗೊಂದಲಗಳನ್ನು ಸೃಷ್ಟಿಸಿದೆ.

ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಬುಮ್ರಾ 'ಮೌನವೇ ಅತ್ಯುತ್ತಮ ಉತ್ತರ' ಎಂದು ಬರೆದಿರುವ ಸ್ಟೋರಿ ಹಾಕಿಕೊಂಡಿದ್ದಾರೆ. ಈ ಹೇಳಿಕೆ ಮುಂಬೈ ತಂಡದ ಮೇಲಿನ ಅಸಮಾಧಾನ ಇರಬಹುದೇ? ಎಂಬ ಅನುಮಾನಗಳು ಹುಟ್ಟಿಕೊಂಡಿದ್ದು, ಬುಮ್ರಾ ಮುಂಬೈ ಇಂಡಿಯನ್ಸ್​ ತಂಡವನ್ನು ಅನ್​ಫಾಲೋ ಕೂಡ ಮಾಡಿದ್ದಾರೆ. ಈ ಬೆಳವಣಿಗೆಗಳು ಜಸ್ಪ್ರೀತ್​ ಅವರ ಬೇಸರ ತಂಡದ ಮೇಲೆ ಇರುವುದು ಖಚಿತ ಎಂಬುದನ್ನು ಪರೋಕ್ಷವಾಗಿ ಒತ್ತಿ ಹೇಳುವಂತಿದೆ,(ಏಜೆನ್ಸೀಸ್).