ಕ್ರೀಡೆ

ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ವಿಂಡೀಸ್​ ಲೆಜೆಂಡರಿ ಆಟಗಾರ Dwayne Bravo

ನವದೆಹಲಿ: ವೆಸ್ಟ್​ ಇಂಡೀಸ್​ ಕ್ರಿಕೆಟ್​ ತಂಡದ ಲೆಜೆಂಡರಿ ಆಟಗಾರ ಡ್ವೇನ್​ ಬ್ರಾವೊ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. 2021ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಡ್ವೇನ್​ ಬ್ರಾವೊ ಇದೀಗ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ. 

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಈ ನಿರ್ಧಾರಕ್ಕೆ ಬಂದಿರುವುದಾಗ ಬ್ರಾವೊ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿರುವ ಬ್ರಾವೊ ಕ್ರಿಕೆಟ್​ನೊಂದಿಗಿನ ತಮ್ಮ ಭಾವನಾತ್ಮಕ ನಂಟನ್ನು ವಿವರಿಸಿದ್ದಾರೆ.

ನನಗೆ ಎಲ್ಲವನ್ನೂ ನೀಡಿದ ಆಟಕ್ಕೆ ಇಂದು ನಾನು ವಿದಾಯ ಹೇಳುವ ದಿನ. ಇದು ವೃತ್ತಿಪರ ಕ್ರಿಕೆಟಿಗನಾಗಿ ಇಪ್ಪತ್ತೊಂದು ವರ್ಷಗಳ ಅದ್ಭುತ ಪ್ರಯಾಣವಾಗಿದ್ದು, ಹಲವು ಏರಿಳಿತಗಳನ್ನು ಹೊಂದಿದೆ. ನನ್ನ ಮನಸ್ಸು ಆಟವನ್ನು ಮುಂದುವರಿಸು ಎನ್ನುತ್ತಿದೆಯಾದರೂ ನನ್ನ ದೇಹ ಇದಕ್ಕೆ ಸಿದ್ಧವಿಲ್ಲ. ನೋವು, ಇಂಜುರಿ ಹಾಗೂ ಒತ್ತಡವನ್ನು ನನ್ನ ದೇಹ ಸ್ವೀಕರಿಸುತ್ತಿಲ್ಲ. ಹೀಗಾಗಿ ನನ್ನ ಸಹ ಆಟಗಾರರು, ನನ್ನ ಅಭಿಮಾನಿಗಳು ಅಥವಾ ನಾನು ಪ್ರತಿನಿಧಿಸುವ ತಂಡಗಳನ್ನು ನಾನು ನಿರಾಸೆಗೊಳಿಸುವ ಸ್ಥಿತಿಯಲ್ಲಿ ನನ್ನನ್ನು ನಾನು ಇರಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಭಾರವಾದ ಹೃದಯದಿಂದ, ನಾನು ಆಟದಿಂದ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಐಪಿಎಲ್​ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ಭಾಗವಾಗಿದ್ದ ಡ್ವೇನ್​ ಕಳೆದ ವರ್ಷ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಚೆನ್ನೈ ಸೂಪರ್​ಕಿಂಗ್ಸ್​ನ ಬೌಲಿಂಗ್​ ಕೋಚ್​ ಆಗಿ ನೇಮಕಗೊಂಡಿದ್ದರು. ಪ್ರಸ್ತುತ ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದ ಬ್ರಾವೋ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದರು.